ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಮಗೆ ಓದಿನಲ್ಲಿರುವ ಆನಂದ ಮೊಬೈಲ್ ನಲ್ಲಿ ಸಿಗುವುದಿಲ್ಲ ಮೊಬೈಲ್ ಆರೋಗ್ಯವನ್ನು ಕ್ಷೀಣಿಸಿದರೆ ಸಾಹಿತ್ಯ ನಮ್ಮ ಆರೋಗ್ಯಯುತ ವ್ಯಕ್ತಿತ್ವ ಹೆಚ್ಚಿಸುತ್ತದೆ ಎಂದು ಖ್ಯಾತ ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್ ಅಭಿಪ್ರಾಯಪಟ್ಟರು.
ಮಂಗಳವಾರ ನಗರದ ಎನ್ಇಎಸ್ ಮೈದಾನದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಶಿಕ್ಷಣ ಸಮಿತಿ ಅಮೃತಮಹೋತ್ಸವ ಸಮಾರೋಪ ಸಮಾರಂಭ ‘ಎನ್ಇಎಸ್ ಹಬ್ಬ’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಶಾಲೆಯೊಂದನ್ನ ತೆರೆದಾಗ ಜೈಲಿನ ಪ್ರಮಾಣ ಕಡಿಮೆಯಾಗುತ್ತದೆ. ಉತ್ತಮ ಶಿಕ್ಷಣ ಮತ್ತು ವ್ಯಕ್ತಿತ್ವಕ್ಕೆ ಅಂತಹ ಶಕ್ತಿಯಿದೆ. ಇಂದು ದೊಡ್ಡ ಗ್ರಂಥಗಳು ಅತ್ಯಂತ ನಿಕೃಷ್ಟ ಸ್ಥಿತಿಯಲ್ಲಿದೆ. ಅದೆಷ್ಟೋ ಕವಿಗಳು, ಸಾಹಿತಿಗಳು ಬರೆಯುವುದನ್ನೆ ಬಿಟ್ಟಿದ್ದಾರೆ ಎಂದು ವಿಷಾಧಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ತುಮಕೂರು ವಿಶ್ವವಿದ್ಯಾಲಯ ಕುಲಸಚಿವರಾದ ಪ್ರೊ. ವೆಂಕಟೇಶ್ವರಲು ಮಾತನಾಡಿ, ಭಾರತಕ್ಕೆ ಬೇಕಾಗಿರುವುದು ಸುಸಂಸ್ಕೃತ ಶಿಕ್ಷಣ. ಯಾವುದೇ ಸಾಧನೆಯ ಮೂಲ ಶಿಕ್ಷಣ. ಅಂತಹ ಶಿಕ್ಷಣದ ಪ್ರಾಕಾರಗಳು ಹೊಸತನದೆಡೆಗೆ ಸಾಗುತ್ತಿದೆ. ಜಾಗತಿಕ ವಿದ್ಯಾರ್ಥಿ ಸಮೂಹದಲ್ಲಿರುವ ಶೇ.50 ರಷ್ಟು ವಿದ್ಯಾರ್ಥಿಗಳು ಭಾರತೀಯರು ಎಂಬ ಹೆಗ್ಗಳಿಕೆಯಿದೆ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಮಾತನಾಡಿ, ಹಿರಿಯ ಚೇತನಗಳು ಕಟ್ಟಿ ಬೆಳೆಸಿದ ಸಂಸ್ಥೆಗೆ ಅಮೃತಮಹೋತ್ಸವ ಸಂಭ್ರಮ. ಇಂತಹ ದೀರ್ಘಕಾಲಿಕ ಅವಧಿಯಲ್ಲಿ ಶ್ರಮವಹಿಸಿದ ಎಲ್ಲರು ಸದಾ ಪ್ರಾತಃಸ್ಮರಣೀಯ. ಮಾನವಸಂಪನ್ಮೂಲದ ಅಭಿವೃದ್ಧಿಯ ಜೊತೆಗೆ ಮಾನವೀಯ ಮೌಲ್ಯಗಳನ್ನು ಹೆಚ್ಚಿಸುವ ಗುರಿ ಎನ್ಇಎಸ್ ಸಂಸ್ಥೆಯದಾಗಿದೆ. ಎನ್ಇಎಸ್ ಸಂಸ್ಥೆಯಿಂದ ಓದಿರುವ ಹಿರಿಯ ವಿದ್ಯಾರ್ಥಿಗಳೇ ನಮ್ಮ ಸಂಸ್ಥೆಯ ನಿಜವಾದ ಅಂಬಾಸಿಡರ್ ಗಳು ಎಂದು ಹೇಳಿದರು.
Also read: ಕೇಂದ್ರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ ನಾಚಿಕೆಗೇಡಿನ ಸಂಗತಿ: ಮಾಜಿ ಸಚಿವ ಈಶ್ವರಪ್ಪ
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯ ರ್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಹಾಗೂ ಎನ್ಇಎಸ್ ಕ್ರೀಡೋತ್ಸವದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು. ಎನ್ಇಎಸ್ ಉಪಾಧ್ಯಕ್ಷರಾದ ಸಿ.ಆರ್.ನಾಗರಾಜ, ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ, ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ಖಜಾಂಚಿಗಳಾದ ಡಿ.ಜಿ.ರಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















