ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಮಧ್ಯ ಭಾಗದಲ್ಲಿರುವ ಸುನ್ನಿ ಈದ್ಗಾ ಮೈದಾನವನ್ನು ಸಂರಕ್ಷಿಸಲು ಸಹಕರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮರ್ಕಜಿ ಸುನ್ನಿ ಜಾಮಿಯಾ ಮಸ್ಜಿದ್ ಸಮಿತಿಯ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ತಿಲಕನಗರದಲ್ಲಿರುವ ಸುನ್ನಿ ಈದ್ಗಾ ಮೈದಾನ #Edga Ground ಮುಸ್ಲಿಂ ಸಮುದಾಯದ ವಖ್ಫ್ ಆಸ್ತಿಯಾಗಿದ್ದು ಕರ್ನಾಟಕ ರಾಜ್ಯಪತ್ರದ ಅಧಿಸೂಚನೆ 1965ರ 288ರ ಅನ್ವಯ ವಖ್ಫ್ ಆಸ್ತಿ ಎಂದು ಆದೇಶವಾಗಿದ್ದು ಮುನ್ಸಿಪಲ್ ಖಾತಾವನ್ನು ಹೊಂದಿರುತ್ತದೆ. ಈ ಮೈದಾನ ಈಗ ಗಾಂಧಿ ಬಜಾರಿನ ಮರ್ಕಜಿ ಸುನ್ನಿ ಜಾಮಿಯಾ ಮಸೀದಿಯವರ ಅಧೀನದಲ್ಲಿದೆ. ಇದರ ನಿರ್ವಹಣೆಯನ್ನು ಜಾಮಿಯಾ ಮಸಿದಿಯೇ ಮಾಡಿಕೊಂಡು ಬಂದಿರುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸದರಿ ಮೈದಾನದಲ್ಲಿ ಕೆಲವರು ಅನಧಿಕೃತ ವಾಹನ ನಿಲುಗಡೆ ಮಾಡುತ್ತಿದ್ದಾರೆ. ಮತ್ತೆ ಕೆಲವು ಕಿಡಿಗೇಡಿಗಳು ರಾತ್ರಿ ವೇಳೆ ಹಾಗೂ ರಜಾ ದಿನಗಳಲ್ಲಿ ಅನೈತಿಕ ಚಟುವಟಿಕೆಗಳ ತಾಣವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ಸ್ಥಳವನ್ನು ಸ್ವಚ್ಛಗೊಳಿಸಲು ಲಕ್ಷಾಂತರ ರೂಪಾಯಿ ಹಣ ಕೂಡಾ ಖರ್ಚಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
Also read: Excellent performance by South Western Railway during finalcial year-2004-25
ಏ.1ರಂದು ಕೆಲವರು ಈ ಜಾಗದಲ್ಲಿ ಅತಿಕ್ರಮಣ ಪ್ರವೇಶ ಮಾಡಿ ವಖ್ಫ್ ಆಸ್ತಿಯನ್ನು ಸರ್ವಜನಿಕ ಆಸ್ತಿಯೆಂದು ತಪ್ಪು ಮಾಹಿತಿ ನೀಡಿ ಪ್ರಚೋದನಕಾರಿ ಹೇಳಿಕೆಯ ಮೂಲಕ ಅಶಾಂತಿ ಹುಟ್ಟಿಸುತ್ತಿದ್ದಾರೆ. ಅಡಳಿತ ಸಮಿತಿ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಿದೆ. ಅಲ್ಲದೆ ಮೈದಾನದ ಸ್ವಚ್ಛತೆಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಕಾರ್ಯ ಮಾಡಲು ಹಾಗೂ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ತೀರ್ಮಾನಿಸಿದೆ.
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳು ವಖ್ಫ್ ಸಂಸ್ಥೆಗಳ ಟಾಸ್ಕ್ ಫೋಸ್ ನ ಮುಖ್ಯಸ್ಥರಾಗಿದ್ದು ಈ ಮೈದಾನದಲ್ಲಿ ತಾತ್ಕಾಲಿಕವಾಗಿ ವಾಹನ ನಿಲುಗಡೆಯನ್ನು ಸ್ಥಗಿತಗೊಳಿಸಿ ಮೈದಾನವನ್ನು ಸಂರಕ್ಷಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮುನ್ನೆಚ್ಚರಿಕೆಯ ಕ್ರಮವಾಗಿ ಪೋಲಿಸರು ಭಾರೀ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು ಕಂಡು ಬಂದಿತು. ಮುಸ್ಲಿಮರು ನಮ್ಮ ಜಾಗ ನಮ್ಮ ಹಕ್ಕು ಎಂದು ಘೋಷಣೆ ಕೂಗಿದರು. ನೂರಾರು ಮುಸ್ಲಿಮರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಭಟನೆಯಲ್ಲಿ ಮುಖಂಡರಾದ ಮುನಾವರ ಪಾಷಾ, ಎಂ.ಡಿ.ಶರೀಫ್, ಜಿಲಾನ್ ಖಾನ್, ಸೈಫುಲ್ಲ ಇಮ್ರಾನ್ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post