ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಎಚ್’ಆರ್’ಎಂಎಸ್ ವೇಗ ಹೆಚ್ಚಿಸಲು ಹಾಗೂ ಅನುದಾನ ಹಂಚಿಕೆ ಸಮಸ್ಯೆಯಿಂದ ಉಂಟಾಗುತ್ತಿರುವ ವೇತನ ವಿಳಂಬ ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಇ-ಗವರ್ನೆನ್ಸ್ ಅಪರ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ ಹೇಳಿದರು.
ಅವರು ಇಂದು ಬೆಂಗಳೂರಿನ ತಮ್ಮ ಕಚೇರಿ ಸಭಾಂಗಣದಲ್ಲಿ ಎಚ್’ಆರ್’ಎಂಎಸ್ ಮತ್ತು ಖಜಾನೆ-2 ತಂತ್ರಾಂಶಗಳಲ್ಲಿನ ನ್ಯೂನತೆಗಳಿಂದಾಗಿ ವೇತನ, ಭತ್ಯೆ ಇತ್ಯಾದಿ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಕುರಿತು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರ ಮನವಿಯ ಮೇರೆಗೆ ಏರ್ಪಡಿಸಲಾಗಿದ್ದ ಮಹತ್ವದ ಸಭೆಯಲ್ಲಿ ಸಮಸ್ಯೆಗಳ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದರು.
ವಿಭಾಗ ಮಟ್ಟದ ಎಚ್’ಆರ್’ಎಂಎಸ್ ಘಟಕಗಳ ಸ್ಥಾಪನೆ ಮಾಡಲಾಗುವ ಬಗ್ಗೆಯೂ ಸೂಕ್ತ ನಿರ್ಧಾರ ಕೈಗೊಂಡು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳಿಗೆ ಸಂಬಂಧಿಸಿದ ಎಚ್’ಆರ್’ಎಂಎಸ್ ಘಟಕಗಳ ಸ್ಥಾಪನೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದರು.
ಅನಗತ್ಯ ಡಿಡಿಒ ಸಂಖ್ಯೆ ಕಡಿತಗೊಳಿಸುವ ಮೂಲಕ ಎಚ್’ಆರ್’ಎಂಎಸ್ ತಂತ್ರಾಂಶ ಸರಳೀಕರಣಗೊಳಿಸಲಾಗುವುದು. ಸರ್ಕಾರ ಹೊರಡಿಸಲಾಗುವ ಸುತ್ತೋಲೆ ಮತ್ತು ಸರ್ಕಾರಿ ಆದೇಶಗಳನ್ನು ತಕ್ಷಣ ಸರ್ಕಾರದ ಅಧಿಕೃತ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲು ಕ್ರಮ ವಹಿಸಲಾಗುವುದೆಂದವರು ಎಂದರು.
ಶೀಘ್ರದಲ್ಲಿ ಮಹಾಲೇಖಪಾಲಕರು ವಿತರಿಸುವ ವೇತನ ವಿವರ ಪಟ್ಟಿಗಳ ಡಿಜಿಟಲೀಕರಣಗೊಳಿಸಲಾಗುವುದು. ಕಂಫ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಸುಮಾರು 1,60,000 ಸರ್ಕಾರಿ ನೌಕರರು ತೇರ್ಗಡೆ ಹೊಂದಿರುವ ನೌಕರರಿಗೆ 15 ದಿನಗಳೊಳಗಾಗಿ ಅಧಿಕೃತ ಪ್ರಮಾಣಪತ್ರ ವಿತರಿಸಲು ಕ್ರಮಕೈಗೊಳ್ಳಲಾಗುವುದು. ಈವರೆಗೆ ಸ್ಥಗಿತಗೊಂಡಿದ್ದ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಗಳು ಸೋಮವಾರದಿಂದ ಪುನರಾರಂಭಗೊಳ್ಳಲಿವೆ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಮಾತನಾಡಿ, ಖಜಾನೆ-2 ಮತ್ತು ಎಚ್’ಆರ್’ಎಂಎಸ್’ಗಳಲ್ಲಿನ ಸಮಸ್ಯೆಗಳ ಕುರಿತು ಇ-ಗವರ್ನೆನ್ಸ್‌ನ ಅಪರ ಮುಖ್ಯ ಕಾರ್ಯದರ್ಶಿಗಳಾದ ರಾಜೀವ್ ಚಾವ್ಲಾ ಅವರ ಗಮನ ಸೆಳೆಯಲಾಗಿದ್ದು, ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಕುರಿತು ಪೂರಕವಾಗಿ ಸ್ಪಂದಿಸಿದ್ದಾರೆ ಎಂದರು.
ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಜಗದೀಶ್ ಗೌಡಪ್ಪ ಪಾಟೀಲ, ಕೋಶಾಧ್ಯಕ್ಷ ಆರ್. ಶ್ರೀನಿವಾಸ್, ಪದಾಧಿಕಾರಿಗಳಾದ ಚೇತನ್ ರಾಜ್, ವಿಭಾಗೀಯ ಉಪಾಧ್ಯಕ್ಷ ಮೋಹನ್ ಕುಮಾರ್, ಎಚ್’ಆರ್’ಎಂಎಸ್, ಖಜಾನೆ-2 ಸಿಇಒ ಬಿಪಿನ್ ಸಿಂಗ್, ಶಕೀಲ್ ಅಹಮದ್, ತಿಮ್ಮಾರೆಡ್ಡಿ, ಶಿವರಾಮು, ರಂಗನಾಥ್, ಪುನೀತ್, ವಿಜಯ್ ಸಗಾಯ್, ಮತ್ತಿತರರು ಉಪಸ್ಥಿತರಿದ್ದರು.
Get in Touch With Us info@kalpa.news Whatsapp: 9481252093
Discussion about this post