ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರತೀಯ ವೈದ್ಯಕೀಯ ಸಂಘವು (ಐಎಂಎ) ಕಳೆದ ವರ್ಷದಲ್ಲಿ ಹಲವು ಶೈಕ್ಷಣಿಕ, ಸಾಮಾಜಿಕ, ಹಾಗೂ ಆರೋಗ್ಯದ ಅರಿವು ಕಾರ್ಯಕ್ರಮಗಳನ್ನು ಮಾಡಿ ಗಮನ ಸೆಳೆದಿದೆ ಎಂದು ಐಎಂಎ ಅಧ್ಯಕ್ಷ ಡಾ. ಅರುಣ್‍ಕುಮಾರ್ ಎಂ.ಎಸ್ ಹೇಳಿದರು.
ಅವರು ಇಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ವತಿಯಿಂದ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಐಎಂಎ ಸಾಮಾಜಿಕ ಸೇವೆಯ ಜೊತೆಗೆ ಆರೋಗ್ಯದ ಕಾರ್ಯಕ್ರಮಗಳನ್ನು ಮಾಡಿದೆ. ರಕ್ತದಾನ ಶಿಬಿರ, ಮಹಿಳಾ ಆರೋಗ್ಯ , ಮಧುಮೇಹ ಚಿಕಿತ್ಸೆ, ತಂಬಾಕು ದಿನ, ಸ್ತನ ಕ್ಯಾನ್ಸರ್, ಕಾಲೇಜು ವಿದ್ಯಾರ್ಥಿನಿಯರಿಗೆ ಮುಟ್ಟಿನ ಅರಿವು ಕಾರ್ಯಕ್ರಮ, ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಜಾಗೃತಿ. ಹೀಗೆ ಹಲವು ರೀತಿಯಲ್ಲಿ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.
ವೈದ್ಯಕೀಯ ಕ್ಷೇತ್ರ ಅನೇಕ ಹೊಸ ಅನ್ವೇಷಣೆಗಳಿಗೆ ಒಳಗಾಗಿದೆ. ಯಂತ್ರ, ಜ್ಞಾನ, ತಂತ್ರಜ್ಞಾನ ಹೀಗೆ ಹೊಸ ಅವಿಷ್ಕಾರಗಳಿಗೆ ಸಾಕ್ಷಿಯಾಗಿದೆ. ಇದಕ್ಕೆ ತಕ್ಕಂತೆ ವೈದ್ಯಕೀಯ ಕ್ಷೇತ್ರಕ್ಕೂ ಕೂಡ ಹೊಸತನ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಆಸ್ಪತ್ರೆಗಳಲ್ಲಿ ವಿಶೇಷವಾಗಿ ವೈದ್ಯರುಗಳಿಗೆ ಕಾರ್ಯಾಗಾರದ ಮೂಲಕ ಮತ್ತಷ್ಟು ಜಾಗೃತಿಯನ್ನು ಮೂಡಿಸಲಾಗಿದೆ. ಇದಲ್ಲದೆ ವೈದ್ಯ ಕುಟುಂಬದ ಬಗ್ಗೆಯೂ ಗಮನಹರಿಸಿ ನಿವೃತ್ತ ವೈದ್ಯರ ಮನೆಗೆ ಹೋಗಿ ಅವರಲ್ಲಿ ಚೈತನ್ಯ ಮೂಡಿಸುವುದರ ಜೊತೆಗೆ ಅವರು ವೈದ್ಯರಾಗಿದ್ದಾಗ ಸೇವೆ ಸಲ್ಲಿಸಿದ ರೀತಿ ಮತ್ತು ಅನುಭವವನ್ನು ಪಡೆಯಲಾಗಿದೆ. ಡಾ. ವೆಂಕಟಗಿರಿ, ಡಾ. ನಂದಿನಿ, ಡಾ. ರಂಗೇಗೌಡ, ವೆಂಕಟರಾವ್, ಸುರೇಶ್ ಇಸ್ಲೂರ್ ಸೇರಿದಂತೆ ಹಲವು ವೈದ್ಯರ ಮಾರ್ಗದರ್ಶನವನ್ನು ಪಡೆಯಲಾಗಿದೆ ಎಂದರು.
ಸಾಂಸ್ಕøತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳನ್ನು ಕೂಡ ಸಂಘ ಹಮ್ಮಿಕೊಂಡಿತ್ತು. ರಾಜ್ಯ ಮಟ್ಟದ ಕ್ರೀಡಾಕೂಟ ಏರ್ಪಡಿಸಲಾಗಿತ್ತು. ಕ್ರಿಕೆಟ್ ಟೂರ್ನಮೆಂಟ್ ನಡೆಸಲಾಯಿತು. ರಾಷ್ಟ್ರೀಯ ದಿನಗಳನ್ನು ವಿಶೇಷವಾಗಿ ಆಚರಿಸುತ್ತಾ ಬಂದೆವು ಆರೋಗ್ಯಕ್ಕೆ ಸಂಬಂಧಿಸಿದಂತೆ ಯೋಗದಿನ ಮತ್ತು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಜೊತೆಗೆ ಆರೋಗ್ಯ ಮಾಲಿಕೆ ಕಾರ್ಯಕ್ರಮವನ್ನು ನಿರಂತರವಾಗಿ ಯೂ-ಟ್ಯೂಬ್‍ನಲ್ಲಿ ಪ್ರಸಾರ ಮಾಡಲಾಯಿತು. ವೈದ್ಯರ ಕುಟುಂಬಕ್ಕಾಗಿ ವಿಶೇಷ ಪತ್ರಿಕೆಯನ್ನು ಹೊರತರಲಾಯಿತು. ವೈದ್ಯರೇ ಬರೆದ ಲೇಖನಗಳನ್ನು ಪತ್ರಿಕೆಯ ಮೂಲಕ ಪ್ರಚುರಪಡಿಸಲಾಯಿತು ಎಂದರು.
ಸಂಘದ ಕಾರ್ಯದರ್ಶಿ ಡಾ. ರಕ್ಷಾ ರಾವ್ ಮಾತನಾಡಿ, ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಸಂಘದ ವತಿಯಿಂದ ವರ್ಷವಿಡೀ ಮಾಡಲಾಯಿತು. ವಿಶೇಷವಾಗಿ ಮಹಿಳಾ ವೈದ್ಯರ ತಂಡವೇ ಆರೋಗ್ಯದ ಅರಿವಿನ ಬಗ್ಗೆ ಹೆಣ್ಣುಮಕ್ಕಳಿಗೆ ಮೂಡಿಸಲಾಯಿತು. ಶಾಲಾ ಕಾಲೇಜುಗಳಲ್ಲಿ ಹದಿಹರೆಯದ ಸಮಸ್ಯೆಗಳು, ಮಾನಸಿಕ ಒತ್ತಡ, ಸುತ್ತಮುತ್ತಲಿನ ಜನರಿಂದ ಲೈಂಗಿಕ ಶೋಷಣೆ ಮುಂತಾದ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು ಎಂದರು.
ಸಂವಾದ ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್, ನಗರ ಕಾರ್ಯದರ್ಶಿ ಕೆ.ಆರ್. ಸೋಮನಾಥ್ ಇದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















