ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಾಗರೀಕರು ತಮ್ಮ ಸಮಸ್ಯೆಗಳನ್ನು ಗಮನಕ್ಕೆ ತಂದಾಗ ಮಾತ್ರ ಸುಧಾರಣೆ ಸಾಧ್ಯ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್‍ಕುಮಾರ್ #SP Mithunkumar ಹೇಳಿದ್ದಾರೆ.
ಅವರು ಇಂದು ನಗರದ ಶುಭಂ ಸಭಾಂಗಣದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್, ಶಿವಮೊಗ್ಗ ಸಂಚಾರ ಪೊಲೀಸ್ ಹಾಗೂ ನೆಹರೂ ರಸ್ತೆಯ ವರ್ತಕರ ಸಂಘ ಜಂಟಿಯಾಗಿ ನೆಹರೂ ರಸ್ತೆಯ ಸುಗಮ ಸಂಚಾರ ವ್ಯವಸ್ಥೆಗೆ ಹಮ್ಮಿಕೊಂಡಿದ್ದ ವರ್ತಕರ ಸಭೆಯಲ್ಲಿ ಭಾಗವಹಿಸಿ ವರ್ತಕರ ಸಮಸ್ತ ದೂರುಗಳನ್ನು ಆಲಿಸಿ ಮಾತನಾಡಿದರು.

ಈಗಾಗಲೇ ಒಟ್ಟು 21 ಕನ್ಸರ್‍ವೆನ್ಸಿಗಳನ್ನು ಪಾಲಿಕೆಯ ವತಿಯಿಂದ ಅಭಿವೃದ್ಧಿಪಡಿಸಲಾಗಿದೆ. ಅಲ್ಲಿ ಸಿಸಿ ಕ್ಯಾಮೇರಾ ಮತ್ತು ಬೆಳಕಿನ ವ್ಯವಸ್ಥೆ ಮಾಡಲು ಪಾಲಿಕೆ ಒಪ್ಪಿಕೊಂಡಿದ್ದು, ವರ್ತಕನ ಸಂಘದವರು ಕನ್ಸರ್‍ವೆನ್ಸಿ ನಿರ್ವಹಣೆಗೆ ಒಬ್ಬ ಸೆಕ್ಯೂರಿಟಿಯನ್ನು ನೇಮಿಸಿದರೆ ನೆಹರೂ ರಸ್ತೆಯ 150ಕ್ಕೂ ಹೆಚ್ಚಿನ ಅಂಗಡಿಗಳ ಮಾಲೀಕರು ಮತ್ತು ಸಿಬ್ಬಂದಿಗಳ ದ್ವಿಚಕ್ರ ವಾಹನಗಳನ್ನು ಕನ್ಸರ್‍ವೆನ್ಸಿಯಲ್ಲಿ ನಿಲುಗಡೆ ಮಾಡಿದರೆ ಸಮಸ್ಯೆ ಕಡಿಮೆಯಾಗುತ್ತದೆ. ಅಂಗಡಿ ಮುಂಭಾಗ ಕೆಲವು ವರ್ತಕರು ಫುಟ್‍ಬೋರ್ಡ್ ಜಾಲರಿ ಹಾಕುತ್ತಿದ್ದಾರೆ. ಇದರಿಂದ ದ್ವಿಚಕ್ರವಾಹನಗಳ ನಿಲುಗಡೆಗೆ ಸ್ಥಳಾವಕಾಶ ಕಡಿಮೆಯಾಗುತ್ತದೆ. ಇನ್ನು ಮುಂದೆ ನಿರ್ದಾಕ್ಷಿಣ್ಯವಾಗಿ ಅದನ್ನು ತೆರವುಗೊಳಿಸಲಾಗುವುದು.

ಟ್ರಾಫಿಕ್ ಉಲ್ಲಂಘನೆ ಮತ್ತು ಬೇಕಾಬಿಟ್ಟಿ ವಾಹನ ನಿಲುಗಡೆ ಬಗ್ಗೆ ದೂರುಗಳಿದ್ದರೆ ಟೋಲ್ ಫ್ರೀ ನಂಬರ್ ಟ್ರಾಫಿಕ್ ಹೆಲ್ಪ್‍ಲೈನ್ 8277983404ಕ್ಕೆ ಸಂಪರ್ಕಿಸುವಂತೆ ತಿಳಿಸಿದರು.
ಸಾರ್ವಜನಿಕರು ಪೊಲೀಸರೊಂದಿಗೆ ಸಭ್ಯತೆಯಿಂದ ವರ್ತಿಸಬೇಕು. ಅವರನ್ನು ಗೌರವಿಸಬೇಕು. ಕಠಿಣ ಸಂದರ್ಭಗಳಲ್ಲೂ ಮಳೆ, ಬಿಸಲು ಲೆಕ್ಕಿಸದೆ ತಾಸುಗಟ್ಟಲೆ ಸಂಚಾರಿ ಪೊಲೀಸರು ಕಾರ್ಯನಿರ್ವಹಿಸುತ್ತಾರೆ. ಅವರ ಬಳಿ ವಿನಾಕಾರಣ ಜಗಳ ಮಾಡದೆ ಸಹಕರಿಸಬೇಕು ಎಂದರು. ಅದೇ ರೀತಿ ಹಲವಾರು ಸಭೆಗಳಲ್ಲಿ ಪೊಲೀಸರಿಗೆ ಸಾರ್ವಜನಿಕರ ಜೊತೆ ಯಾವ ರೀತಿಯ ವರ್ತನೆ ತೋರಬೇಕು ಎಂಬುದರ ಬಗ್ಗೆ ನಾನು ಮಾರ್ಗದರ್ಶನ ಮಾಡಿದ್ದೇನೆ. ಅವರು ಕೂಡ ಸಭ್ಯತೆ ಮೀರಬಾರದು ಎಂದರು.

ಶ್ರೀನಿಧಿ ಸಿಲ್ಕ್‌ನ ಅಶ್ವತ್ಥನಾರಾಯಣಶೆಟ್ಟಿ ಮಾತನಾಡಿ, ವ್ಯಾಪಾರದಲ್ಲಿ ಸ್ಪರ್ಧೆ ಇದೆ. ಪಾರ್ಕಿಂಗ್ ಜಾಗ ಇಲ್ಲದೆ ಗ್ರಾಹಕರು ಬರುವುದಿಲ್ಲ. ಸಿಗ್ನಲ್‍ಲೈಟ್‍ಗಳಲ್ಲಿ ನಿಲ್ಲುವ ತಾಳ್ಮೆ ಕೂಡ ಸವಾರರಿಗೆ ಇಲ್ಲ, ಮೊದಲು ನಾವು ಬದಲಾಗಬೇಕು. ನಾಗರೀಕ ಪ್ರಜ್ಞೆ ಇರಬೇಕು ಸಂಚಾರಿ ಪೊಲೀಸರಿಗೆ ವರ್ತಕರ ಪೂರ್ಣ ಸಹಕಾರವಿದೆ ಎಂದರು. ಗಾರ್ಡನ್ ಏರಿಯಾದಲ್ಲಿ ಹಾರ್ಡ್‍ವೇರ್ ಶಾಪ್‍ಗಳ ಹಾವಳಿ ಹೆಚ್ಚಾಗಿದ್ದು, ಅಲ್ಲಿ ಬರುವ ದೊಡ್ಡ ಲಾರಿಗಳು ಮತ್ತು ಎಲ್ಲೆಂದರಲ್ಲಿ ಅನ್‍ಲೋಡ್ ಮಾಡುವ ಸಣ್ಣ ವಾಹನಗಳಿಂದ ತೊಂದರೆಯಾಗುತ್ತಿದೆ.

ಸಭೆಯಲ್ಲಿ ಸಂಚಾರಿ ಇನ್ಸ್‍ಪೆಕ್ಟರ್ ದೇವರಾಜ್, ಪ್ರಮುಖರಾದ ಬಳ್ಳೆಕೆರೆ ಸಂತೋಷ್, ಪಾಲಿಕೆ ಎಇಇ ಜ್ಯೋತಿ, ಪುಷ್ಪಾವತಿ, ಪಿಎಸ್‍ಐ ಭಾರತಿ, ಸ್ವಪ್ನ ಸೇರಿದಂತೆ ಸಂಚಾರಿ ಠಾಣೆಯ ಪೊಲೀಸರು ಮತ್ತು ನೆಹರೂ ರಸ್ತೆಯ ವರ್ತಕರ ಸಂಘದ ಸದಸ್ಯರು, ಪದಾಧಿಕಾರಿಗಳು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post