ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಒಳ ಮೀಸಲಾತಿ ವಿಚಾರವಾಗಿ ನಿವೃತ್ತ ನ್ಯಾಯಮೂರ್ತಿ ಎಸ್.ಎನ್. ನಾಗಮೋಹನ್ ದಾಸ್ ಆಯೋಗದಿಂದ ಮೊನ್ನೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಸದರಿ ವರದಿಯ ಅಂಕಿ ಅಂಶಗಳನ್ನು ಬಂಜಾರ ಸಮುದಾಯದ ಪ್ರಗತಿಗೆ ಹಿನ್ನೆಡೆ ಉಂಟು ಮಾಡುವ ಅಂಶಗಳಿರುವುದರಿಂದ ಕೆಲವೊಂದು ಬದಲಾವಣೆಗಳನ್ನು ಸರ್ಕಾರ ಮಾಡಬೇಕೆಂದು ಕರ್ನಾಟಕ ರಾಜ್ಯ ಬಂಜಾರ ಯುವಕರ ಮತ್ತು ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಿರೀಶ್ ಡಿ.ಆರ್. ಇಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ಆಯೋಗದ ವರ್ಗೀಕರಣದಂತೆ ಗುಂಪು 4ರಲ್ಲಿ ಬಂಜಾರ, ಭೋವಿ, ಕೊರಚ, ಕೊರಮ ಜಾತಿಗಳಿಗೆ ಶೇ. 4ರಷ್ಟು ಮೀಸಲಾತಿ ಹಂಚಿಕೆ ಮಾಡಿರುವುದರಿಂದ ಈ ಸಮುದಾಯಗಳಿಗೆ ಅನ್ಯಾಯವಾಗಲಿದೆ. ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯ ಮಾನದಂಡಗಳ ಆಧಾರದ ಮೇಲೆ ಕನಿಷ್ಟ ಶೇ. 5 ಮೀಸಲಾತಿಯನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಸ್ಪೃಶ್ಯ ಮತ್ತು ಅಸ್ಪೃಶ್ಯ ಪದಗಳು ಸಂವಿಧಾನ ವಿರೋಧಿ ಪದಗಳಾಗಿದ್ದು, ಆಯೋಗದ ವರದಿಯ ಗುಂಪು 4ರಲ್ಲಿ ಬಂಜಾರ, ಭೋವಿ, ಕೊರಚ, ಕೊರಮ ಜಾತಿಗಳನ್ನು ಅಸ್ಪೃಶ್ಯರಲ್ಲದ ಜಾತಿಗಳು ಎಂದು ನಮೂದಿಸಿದ್ದು, ಕೂಡಲೇ ಈ ಅಸಂವಿಧಾನಿಕ ಪದಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಸಮೀಕ್ಷೆಯಲ್ಲಿ ಸಹಸ್ರಾರು ಬಂಜಾರ ವಲಸಿಗ ಕುಟುಂಬಗಳು ಹೊರಗೆ ಉಳಿದಿವೆ ಎಂಬ ಮಾಹಿತಿ ಇರುವುದರಿಂದ ಸರ್ಕಾರ ವಲಸಿಗರನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಈ ವರದಿಯನ್ನು ಸರ್ಕಾರ ಸಮಗ್ರವಾಗಿ ಚರ್ಚಿಸಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಷಾ ನಾಯ್ಕ್, ಜಯಾನಾಯ್ಕ್, ಮಂಜುನಾಯ್ಕ್, ಮಂಜುಳಾಬಾಯಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post