ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಂಕರಘಟ್ಟ: ತನ್ನದೇ ಮಿತಿಯಿರುವ ಜಗತ್ತಿನಲ್ಲಿ ಮಾನವನು ಕೊನೆಯಿಲ್ಲದ ಅಭಿವೃದ್ಧಿ ಸಾಧಿಸಲು ಹಪಹಪಿಸುತ್ತಿರುವುದು ಪ್ರಕೃತಿ ಮತ್ತು ಅರಣ್ಯಸಂಪತ್ತಿಗೆ ಮಾರಕವಾಗಿ ಪರಿಣಮಿಸುತ್ತಿದೆ ಎಂದು ಖ್ಯಾತ ವನ್ಯಜೀವಿ ಚಲನಚಿತ್ರಕಾರರು ಮತ್ತು ತಜ್ಞರಾದ ಕೃಪಾಕರ-ಸೇನಾನಿ ಆಭಿಪ್ರಾಯಪಟ್ಟರು.
ಕುವೆಂಪು ವಿವಿಯ ವನ್ಯಜೀವಿ ಮತ್ತು ನಿರ್ವಹಣೆ ವಿಭಾಗವು ಮಾ.1ರಿಂ 3ರವರೆಗೆ ವಿವಿಯಲ್ಲಿ ಆಯೋಜಿಸಿರುವ ವಿಶ್ವ ವನ್ಯಜೀವಿ ದಿನಾಚರಣೆ ಹಾಗೂ ಉಪನ್ಯಾಸ ಸರಣಿಯ ಉದ್ಘಾಟನಾ ಸಮಾರಂಭವನ್ನು ಪ್ರೊ. ಹಿರೇಮಠ್ ಸಭಾಂಗಣದಲ್ಲಿ ನೆರವೇರಿಸಿ ಅವರು ಮಾತನಾಡಿದರು.
ಇಂದಿನ ಎಲ್ಲ ಆರ್ಥಿಕ ಯೋಜನೆಗಳು, ನೀತಿ-ನಿರೂಪಣೆಗಳು ಯಾಂತ್ರಿಕ, ಪ್ರಾಪಂಚಿಕ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ರೂಪುಗೊಳ್ಳುತ್ತಿವೆ. ಮತ್ತಷ್ಟು ಬಳಸಿ ಎಂಬ ಕೊಳ್ಳುಬಾಕತನವನ್ನು ಪ್ರೇರೇಪಿಸುತ್ತಿರುವ ಈ ಪ್ರವೃತ್ತಿಯ ಪರಿಸರ ಸಂರಕ್ಷಣೆಗೆ ಸವಾಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೃಪಾಕರ್ ಮತ್ತು ಸೇನಾನಿ ತಂಡವು ಖ್ಯಾತ ಡಿಸ್ಕವರಿ ಚಾನೆಲ್‌ಗೆ ನಿರ್ಮಿಸಿ, ಪ್ರದರ್ಶಿಸುತ್ತಿರುವ ವೈಲ್ಡ್ ಡಾಗ್ಸ್ ಕಾರ್ಯಕ್ರಮ ಸರಣಿ ಕುರಿತು ಮಾತನಾಡಿದ ಅವರು, ಕಾಡು ನಾಯಿಗಳು ಮಾನವ ವಿರೋಧಿ ಎಂಬ ತಪ್ಪುಕಲ್ಪನೆಗಳಿವೆ. ಅದು ತಪ್ಪು. ಆಫ್ರಿಕಾದ ಸವನ್ನಾ ಹುಲ್ಲುಗಾವಲ್ಲಿನ ಪ್ರಾಣಿಗಳ ಕುರಿತ ಕಾರ್ಯಕ್ರಮ ಚಿತ್ರೀಕರಿಸುವುದಕ್ಕಿಂತ ಭಾರತದಲ್ಲಿ ಅದು ಹೆಚ್ಚು ಕಷ್ಟಕರವಾದದ್ದಾಗಿದೆ. ಇಲ್ಲಿನ ನೀಲಗಿರಿ ಬೆಟ್ಟಗಳು, ಎಂ.ಎಂ. ಹಿಲ್ಸ್, ವಯನಾಡ್‌ನ ದಟ್ಟ ಮಾದರಿಯ ಕಾಡುಗಳಲ್ಲಿ ವಿಡಿಯೋ ಚಿತ್ರಿಕರಣ ಮತ್ತು ವನ್ಯಜೀವಿಗಳ ಅಧ್ಯಯನ ಬಹಳಷ್ಟು ಸವಾಲಿನದ್ದಾಗಿದೆ ಎಂದು ಹೇಳಿದರು.
ಮಾನವನ ಅಗತ್ಯಕ್ಕೆ ತಕ್ಕಂತೆ ಅರಣ್ಯ, ಅರ್ಥಿಕ ನೀತಿಗಳು ರೂಪುಗೊಳ್ಳುತ್ತಿರುವುದು ಪಶ್ಚಿಮ ಘಟ್ಟಗಳ ಸಾಲು ಸೇರಿದಂತೆ ದಟ್ಟ ಅರಣ್ಯಗಳು ಛಿದ್ರವಾದ ಸ್ಥಿತಿಗೆ ತಲುಪಿವೆ. ಇದುವರೆಗೂ ನಡೆದಿರುವಂತಹ ವನ್ಯಜೀವಿ ಕುರಿತ ಅಧ್ಯಯನಗಳೆಲ್ಲವೂ ಒಂದು ಜಾತಿಯ ಪ್ರಾಣಿಕುಲಕ್ಕೆ ಸೀಮಿತವಾಗಿ ಕೈಗೊಂಡವವಾಗಿವೆ. ಪ್ರಸ್ತುತದ ಸಮಸ್ಯೆಗಳ ಪರಿಹಾರಕ್ಕಾಗಿ ಎಲ್ಲಜೀವಿಗಳನ್ನು ಒಳಗೊಂಡ ಪರಸ್ಪರ ಪ್ರಭಾವ ಅರಿಯಲು ಸಾಧ್ಯವಿರುವ ಸಮಗ್ರವಾದ ಅಧ್ಯಯನದ ಅವಶ್ಯಕತೆಯಿದೆ ಎಂದು ಅವರು ಪ್ರತಿಪಾದಿಸಿದರು.
ತಜ್ಞ ಕೃಪಾಕರ ಮಾತನಾಡಿ, ಕುವೆಂಪು ಮತ್ತು ಪೂರ್ಣಚಂದ್ರ ತೇಜಸ್ವಿಯವರ ಸಾಹಿತ್ಯ ಮತ್ತು ಫೊಟೋಗ್ರಫಿಗಳನ್ನು ಗಮನಿಸಿದಲ್ಲಿ ಪಶ್ಚಿಮಘಟ್ಟ ಸಾಲಿನ ಪರಿಸರ, ವನ್ಯಜೀವಿ, ಜೀವವೈವಿಧ್ಯದ ಕುರಿತು ಅಪಾರವಾದ, ಆಳವಾದ ಅವಲೋಕನ ಜ್ಞಾನದಿಂದ ಸೃಷ್ಟಿಯಾದದ್ದು ಮತ್ತು ಬಹಳ ಸರಳವಾಗಿ ಅಭಿವ್ಯಕ್ತಿಗೊಂಡಿದೆ. ವೈಜ್ಞಾನಿಕ ಮಾಹಿತಿಪೂರ್ಣ ಸಾಹಿತ್ಯ, ಬರಹಗಳು ಇಂದಿನ ಕಲಾ, ಮತ್ತು ವಿಜ್ಞಾನ ವಿದ್ಯಾರ್ಥಿಗಳಿಗೆ ಪರಿಸರ ಸಂಬಂಧಿ ಅಧ್ಯಯನಕ್ಕೆ ಪ್ರೇರಣೆ ನೀಡುವಂತಿವೆ ಎಂದರು.
ಪರಾವಲಂಬಿ ಸಸ್ಯಗಳ ಆಧರಿತವಾಗಿ ಬದುಕುವ ಪಕ್ಷಿಯೊಂದಕ್ಕೆ ಕುವೆಂಪು ಬಂದಳಿಕೆ ಎಂಬ ಹೆಸರಿನಿಂದ ನಾನು ಕರೆಯುತ್ತೇನೆ, ವೈಜ್ಞಾನಿಕ ಹೆಸರೇನು ಎಂದು ನನ್ನ ಬಳಿ ಕೇಳಿ ಮಾಹಿತಿ ಪಡೆದಿದ್ದರು. ಆದರೆ ಅವರು ಕನ್ನಡದಲ್ಲಿ ನಾಮಕರಿಸಿದ ಹೆಸರು ಸಹ ಅತ್ಯಂತ ಸೂಕ್ತವಾಗಿತ್ತು. ಅವರ ಇಂತಹ ಜ್ಞಾನವು ವಿಜ್ಞಾನ ವಿದ್ಯಾರ್ಥಿಗಳು ಮತ್ತು ಪರಿಸರಾಸಕ್ತರಿಗೆ ಮತ್ತಷ್ಟು ನಿಸರ್ಗ ಸಂಪತ್ತಿನ ಕುರಿತು ಆಸಕ್ತಿಪೂರ್ಣವಾಗಿ ಓದಬೇಕು, ಅಧ್ಯಯನಿಸಬೇಕೆನ್ನುವಷ್ಟು ಅರ್ಹ ಮಾಹಿತಿಯಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ, ಕುಲಸಚಿವ ಪ್ರೊ. ಎಸ್.ಎಸ್. ಪಾಟೀಲ್, ವಿಭಾಗಾಧ್ಯಕ್ಷ ಡಾ. ವಿಜಯ್‌ಕುಮಾರ್ ಮಾತನಾಡಿದರು. ಈ ಸಂದರ್ಭದಲ್ಲಿ ವಿವಿಯ ಪ್ರೊ. ವೆಂಕಟೇಶ್ವರುಲು, ಡಾ. ಬಿ. ತಿಪ್ಪೇಸ್ವಾಮಿ, ಡಾ. ನಾಗರಾಜ್ ಸೇರಿದಂತೆ ವಿವಿಯ ಜೀವವಿಜ್ಞಾನ ವಿಷಯಗಳ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಉದ್ಘಾಟನಾ ಸಮಾರಂಭದ ನಂತರ ಉಪನ್ಯಾಸ ಸರಣಿ ಆರಂಭವಾಯಿತು. ಖ್ಯಾತ ಪ್ರಕೃತಿವಾದಿ ಎಸ್.ಎಸ್. ಸುನಿಲ್ ಪ್ರಾಕೃತಿಕ ಇತಿಹಾಸ ಕುರಿತು ಉಪನ್ಯಾಸ ನೀಡಿದರು.
ಮಾರ್ಚ್ 5ರ ನಾಳೆ ಡಾ. ಗಣೇಶಯ್ಯ ಅವರು ಸಂರಕ್ಷಣೆಯಲ್ಲಿ ಸಂಸ್ಕೃತಿ, ಧರ್ಮ ಮತ್ತು ವಿಜ್ಞಾನ ವಿಚಾರದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಮೂರುದಿನಗಳ ಕಾರ್ಯಕ್ರಮದ ಭಾಗವಾಗಿ ಪೇಂಟಿಂಗ್ ಸ್ಪರ್ಧೆ, ಪಕ್ಷಿಗಳ ವೀಕ್ಷಣೆ ಮತ್ತು ಅಧ್ಯಯನ ಸ್ಪರ್ಧೆ, ಅಂತರ್ ವಿಭಾಗ ರಸಪ್ರಶ್ನೆ, ಪ್ರಬಂಧ ಸ್ಪರ್ಧೆಗಳು ಸೇರಿದಂತೆ ವಿವಿಧ ಚಟುವಟಿಕೆಗಳು ನಡೆಯಲಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post