ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಎಂಸಿಎ ವಿಭಾಗದ ವತಿಯಿಂದ ಬುಧವಾರ ಏರ್ಪಡಿಸಿದ್ದ ಐಓಟಿ ಯೋಜನಾ ಪ್ರಾತ್ಯಕ್ಷಿಕೆ ಪ್ರದರ್ಶನ ಕಾರ್ಯಕ್ರಮದಲ್ಲಿ ಎಂಸಿಎ ವಿದ್ಯಾರ್ಥಿಗಳು ಐಓಟಿ ಮೂಲಕ ರೂಪಿಸಿದ್ದ ತಮ್ಮ ನಾವೀನ್ಯ ಯೋಜನೆಗಳನ್ನು ಪ್ರದರ್ಶಿಸಿದರು.
ಆಧುನಿಕ ಕಾಲಘಟ್ಟದಲ್ಲಿ ಕಸಗಳನ್ನು ವಿಂಗಡಿಸುವುದೆ ದೊಡ್ಡ ಸವಾಲಾಗಿರುವ ಈ ಹೊತ್ತಿನಲ್ಲಿ, ಯಂತ್ರವೊಂದು ತನ್ನಿಂದ ತಾನೆ ಹಸಿ ಕಸ, ಒಣ ಕಸ ಮತ್ತು ಲೋಹದ ತ್ಯಾಜ್ಯಗಳನ್ನು ವಿಂಗಡಿಸಿಕೊಡುವ ಯೋಚನೆಯೊಂದು ಎಂಸಿಎ ವಿದ್ಯಾರ್ಥಿಗಳಲ್ಲಿ ಮೂಡಿದ್ದು, ಅದಕ್ಕೆ ಐಓಟಿ ಮೂಲಕ ಪ್ರಾತ್ಯಕ್ಷಿಕೆ ಸ್ಪರ್ಶ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ರೈನ್ ಡ್ರಾಪ್ ಸೆನ್ಸಾರ್, ಪ್ರಾಕ್ಸಿಮಿಟಿ ಸೆನ್ಸಾರ್, ಐಆರ್ ಸೆನ್ಸಾರ್ ಗಳ ಜೊತೆಗೆ ಸ್ಟೆಪೃ ಡ್ರೈವರ್ ಮೊಟಾರ್ ಬಳಸಿ ಬ್ಯಾಟರಿ ಚಾಲಿತ ಯಂತ್ರ ಒಂದನ್ನು ರೂಪಿಸಿದ್ದಾರೆ. ಇದರಲ್ಲಿ ಕಸವನ್ನು ಮೇಲಿಂದ ಹಾಕಿದರೆ, ಕೆಳಗೆ ಇರುವ ಮೂರು ಕಸದ ಡಬ್ಬಿಗಳಲ್ಲಿ ಹಸಿ,ಒಣ, ಲೋಹದ ತ್ಯಾಜ್ಯಗಳು ವಿಂಗಡಿಸಿ ಶೇಖರಣೆಗೊಳ್ಳುತ್ತದೆ. ಇದೇ ರೀತಿ ಅಲ್ಟ್ರಾಸೊನಿಕ್ ಸೆನ್ಸಾರ್ ಬಳಸಿ ಮೂಡಿದ ಅನೇಕ ಯೋಜನೆಗಳು ನೋಡುಗರನ್ನು ತನ್ನತ್ತ ಸೆಳೆಯುವಂತೆ ಮಾಡಿತ್ತು.
ಟಿಸಿಎಸ್ ಸೆನ್ಸಾರ್, ಸರ್ವೊ ಮೊಟಾರ್, ಆರ್ಡಿನೊ ಬಳಸಿ ರೂಪಿಸಿದ್ದ ಬಣ್ಣಗಳ ಪ್ರಕಾರ ವಸ್ತುಗಳನ್ನು ಬೇರ್ಪಡಿಸುವ ಯಂತ್ರ, ನೀರಿನ ಗುಣಮಟ್ಟದ ಮೇಲೆ ನಿಗಾ ವಹಿಸುವ ಪ್ರಾತ್ಯಕ್ಷಿಕೆ, ಬೆಂಕಿ ಪತ್ತೆ ಮತ್ತು ನೀರಿನ ಸಿಂಪರಣಾ ವ್ಯವಸ್ಥೆ, ಭೂ ಪ್ರದೇಶದ ಸುತ್ತ ಐಓಟಿ ಆಧಾರಿತ ಅದೃಶ್ಯ ಬೇಲಿ, ವಾಯು ಗುಣಮಟ್ಟ ಮೇಲ್ವಿಚಾರಣಾ ವ್ಯವಸ್ಥೆ, ಅಪಾಯಕಾರಿ ಅನಿಲ ಪತ್ತೆ ವ್ಯವಸ್ಥೆ, ಅಡಚಣೆ ತಪ್ಪಿಸುವ ರೋಬೋಟ್, ಲ್ಯಾಪ್ ಟಾಪ್ ಚಾರ್ಜ್ ಆಟೋ ಕಟ್ ಆಫ್, ಬ್ಲೈಂಡ್ ಸ್ಪೆಕ್ಟ್, ಅಗ್ನಿಶಾಮಕ ರೋಬೊ, ಧ್ವನಿ ಆಧಾರಿತ ಬೆಳಕಿನ ಸಹಾಯಕ ವ್ಯವಸ್ಥೆ, ಘಾಟಿ ರಸ್ತೆಯ ಯು ಟರ್ನ್ ತಿರುವಿನಲ್ಲಿ ವಾಹನಗಳ ಅಪಘಾತ ತಡೆಯುವ ವ್ಯವಸ್ಥೆ, ಹೀಗೆ ಸೋಲಾರ್ ಮೂಲಕ ಸಾಮಾಜಿಕ ವ್ಯವಸ್ಥೆಗೆ ಅನುಕೂಲವಾಗುವಂತಹ ಯೋಜನಾ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ಎನ್.ವಿಜಯಕುಮಾರ್, ಸಂಶೋದನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ಎಂಸಿಎ ವಿಭಾಗದ ಮುಖ್ಯಸ್ಥರಾದ ಡಾ.ಹೇಮಂತ ಕುಮಾರ್, ಸಂಯೋಜಕರಾದ ಅರುಣ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post