ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಾಂಗ್ರೆಸ್ ಸರ್ಕಾರದಿಂದ ಒಳ ಮೀಸಲಾತಿ ವರ್ಗೀಕರಣದ ವಿಚಾರದಲ್ಲಿ ದುರ್ಬಲ ವರ್ಗಗಗಳಿಗೆ ಅನ್ಯಾಯವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ #MP B Y Raghavendra ಆರೋಪಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಶಿವಮೊಗ್ಗ ಜಿಲ್ಲಾ ಬಂಜಾರ ಸಂಘ, ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಒಳ ಮೀಸಲಾತಿ ವರ್ಗೀಕರಣ ವಿರೋಧಿಸಿ ನಿನ್ನೆಯಿಂದ ಆರಂಭವಾದ ಅನಿರ್ದಿಷ್ಟಾವದಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಸ್ವಾಂತಂತ್ರ್ಯ ಬಂದ ಮೇಲೆ ಹಾವನೂರು ವರದಿ, ಸದಾಶಿವ ವರದಿ, ಮಾಧುಸ್ವಾಮಿ ಸಮಿತಿಯ ಶಿಫಾರಸು, ಕಾಂತರಾಜ್ ವರದಿ, ನಾಗಮೋಹನ್ ದಾಸ್ ವರದಿ ಎಲ್ಲವನ್ನೂ ಸರ್ಕಾರಗಳು ಇನ್ನೂ ಅನುಷ್ಠಾನಕ್ಕೆ ತಂದಿಲ್ಲ. 150 ಕೋಟಿ ರೂ. ತೆರಿಗೆ ಹಣವನ್ನು ಖರ್ಚು ಮಾಡಿ ಕಾಂತರಾಜ್ ವರದಿ ನೀಡಿದರೂ ಅದನ್ನು ಕೂಡ ಜಾರಿಗೊಳಿಸಿಲ್ಲ. ಈಗ ನಾಗಮೋಹನ್ ದಾಸ್ ವರದಿಯನ್ನು ಕೂಡ ಯಥಾವತ್ ಜಾರಿಗೊಳಿಸದೇ ಒಳಮೀಸಲಾತಿಯನ್ನು 4 ಭಾಗಗಳಾಗಿ ವಿಂಗಡಿಸಿ ನೀಡಿದ ವರದಿಯನ್ನು ೩ಕ್ಕೆ ಸೀಮಿತಗೊಳಿಸಿ ಬಂಜಾರರಿಗೆ ಬಿಜೆಪಿ ಸರ್ಕಾರ ನೀಡಿದ ಶೇ. 4.5ರಷ್ಟು ಮೀಸಲಾತಿಯನ್ನು 5.5ರಷ್ಟು ಹೆಚ್ಚಿಸಿ ಅವರೊಂದಿಗೆ ಈಗ 63 ಜಾತಿಗಳನ್ನು ಸೇರಿಸಿ ಅಲೆಮಾರಿ ಜಾತಿಗೆ ಮೀಸಲಿಟ್ಟ ಶೇ. 1ರಷ್ಟು ರದ್ದು ಮಾಡಿ ಅದನ್ನೂ ಇವರೊಂದಿಗೆ ಸೇರಿಸಿ ಎಲ್ಲ ಹಿಂದುಳಿದ ಮತ್ತು ದಲಿತರಿಗೆ ಈ ಸರ್ಕಾರ ಅನ್ಯಾಯ ಮಾಡಿದೆ ಎಂದು ದೂರಿದರು.
ವ್ಯಾಪಕ ಪ್ರತಿಭಟನೆ ಬಳಿಕ ಈಗ ಮತ್ತೆ 450 ಕೋಟಿ ರೂ. ವೆಚ್ಚದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಜಾತಿಗಣತಿಗೆ ಹೊರಟಿದ್ದಾರೆ. ಕೇಂದ್ರ ಸರ್ಕಾರ ಕೂಡ ಮುಂದಿನ ತಿಂಗಳಿಂದ ಜನಗಣತಿಗೆ ಆದೇಶ ನೀಡಿದೆ. ವಿಪರ್ಯಾಸ ಎಂದರೆ ಎಲ್ಲೋ ಒಂದು ಕಡೆ ಕಾಣದ ಕೈಗಳು ಲಂಬಾಣಿ ಜನಾಂಗವನ್ನು ಒಡೆಯುವ ಷಡ್ಯಂತ್ರ ಮಾಡುತ್ತಿವೆ. ಲಂಬಾಣಿ ಕ್ರಿಶ್ಚಿಯನ್, ಭೋವಿ ಕ್ರಿಶ್ಚಿಯನ್ ಎಂದು ಹಲವಾರು ಉಪಪಂಗಡಗಳಿಗೆ ಕ್ರಿಶ್ಚಿಯನ್ ಜಾತಿಯನ್ನು ಲಗತ್ತಿಸಿ ಹಿಂದುಗಳನ್ನು ಒಡೆಯುವ ಕುತಂತ್ರ ಮಾಡುತ್ತಿದೆ. ಇದರಿಂದ ಒಟ್ಟಾರೆಯಾಗಿ ಆ ಜಾತಿಯ ಜನಸಂಖ್ಯೆ ಕಡಿಮೆ ನಮೂದು ಆಗುವುದರಿಂದ ಅವರಿಗೆ ಸಿಗಬೇಕಾದ ಶೇಕಡವಾರು ಮೀಸಲಾತಿಯಲ್ಲಿ ಕಡಿಮೆಯಾಗಿ ವಂಚಿತರಾಗುತ್ತಾರೆ ಎಂದರು.
ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ಲಂಬಾಣಿ ತಾಂಡಾ ಅಭಿವೃದ್ಧಿ ನಿಗಮ ಸ್ಥಾಪಿಸಿ ನೂರಾರು ಕೋಟಿ ರೂ. ಅನುದಾನ ನೀಡಿ ಸರ್ಕಾರದ ಹಲವು ಪ್ರಮುಖ ಹುದ್ದೆಗಳನ್ನು ಕೂಡ ಈ ಸಮಾಜಕ್ಕೆ ನೀಡಿದ್ದರು. ಸೇವಾಲಾಲ್ ಜನ್ಮಸ್ಥಳ ಅಭಿವೃದ್ಧಿಪಡಿಸಿದ್ದರು. ಈಗ ಆ ಜಾಗಕ್ಕೆ ರೈಲು ಕೂಡ ನಿಲುಗಡೆಯಾಗಿ ದೊಡ್ಡ ಪ್ರವಾಸಿತಾಣವಾಗಲಿದೆ. ಮಹಾರಾಷ್ಟ್ರದ ಸೇವಾಲಾಲ್ ಗೆ ಸಂಬಂಧಿಸಿದ ಬಾಯಗಢ ಅಭಿವೃದ್ಧಿಗೆ ೪೫೦ ಕೋಟಿ ರೂ.ಗಳನ್ನು ಮೋದಿ ಸರ್ಕಾರ ನೀಡಿದೆ. ಸದಾಕಾಲ ಬಿ.ಎಸ್.ವೈ. ಕುಟುಂಬ ನಿಮ್ಮ ಜೊತೆಗಿದೆ. ನಿಮಗಾದ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತೇವೆ ಎಂದರು.
ರಾಜ್ಯದ ನ್ಯಾಯಯುತ ಪಾಲನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ, ಸಂಸದರು ಬಾಯಿ ಬಿಡುತ್ತಿಲ್ಲ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ರಾಘವೇಂದ್ರ, ಕೇಂದ್ರದಿಂದ ನೀಡಿದ ಹಲವು ಅನುದಾನಗಳು ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ನೀಡದೇ ಇರುವುದರಿಂದ ವಾಪಸ್ ಹೋಗಿದೆ. ಸರಿಯಾದ ತಾಂತ್ರಿಕ ಯೋಜನೆ ರೂಪುರೇಷೆಗಳನ್ನು ರಾಜ್ಯ ಸರ್ಕಾರ ಸಮಯಕ್ಕೆ ಸರಿಯಾಗಿ ಕೇಂದ್ರಕ್ಕೆ ಒದಗಿಸದೇ ಇರುವುದರಿಂದ ಹಣ ಬಿಡುಗಡೆಯಲ್ಲಿ ವ್ಯತ್ಯಯವಾಗಿದೆ. ಇದಕ್ಕೆ ಪೂರಕ ದಾಖಲೆಗಳನ್ನು ನಾನು ಬಿಡುಗಡೆ ಮಾಡಲು ಸಿದ್ಧ. ಮತ್ತು ಈ ಬಗ್ಗೆ ಇದೇ ಡಿಸಿಎಂ ಜೊತೆಗೆ ದೆಹಲಿ ಕರ್ನಾಟಕ ಭವನದಲ್ಲಿ ಹಲವು ಸಭೆಗಳನ್ನು ನಡೆಸಲಾಗಿದೆ. ರಾಜ್ಯ ಸರ್ಕಾರದ ವೈಫಲ್ಯವೇ ಇದಕ್ಕೆ ಕಾರಣ ಎಂದರು.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ನಿರಂತರವಾಗಿ ವಿಮಾನಗಳು ರದ್ದಾಗುತ್ತಿರುವುದರಕ್ಕೆ ವಿಷಾದ ವ್ಯಕ್ತಪಡಿಸಿದ ಅವರು, ಇದಕ್ಕೂ ಕೂಡ ವಿಮಾನ ನಿಲ್ದಾಣದ ಮಾಲೀಕತ್ವ ರಾಜ್ಯ ಸರ್ಕಾರದ ವಶದಲ್ಲಿರುವುದೇ ಕಾರಣವಾಗಿ ನೈಟ್ ಲ್ಯಾಂಡಿಂಗ್ ಸಲಕರಣೆಗಳು ಬಂದು ಎರಡು ತಿಂಗಳಾಗಿದ್ದರೂ ಕೇವಲ 2 ಕೋಟಿ ರೂ. ಖರ್ಚು ಮಾಡಲು ರಾಜ್ಯ ಸರ್ಕಾರ ಮುಂದಾಗದೇ ಇರುವುದು ಇದಕ್ಕೆ ಕಾರಣ. ನಾವು ಶಿವಮೊಗ್ಗ ವಿಮಾನ ನಿಲ್ದಾಣವನ್ನು ರಾಜ್ಯದ ಸುಪರ್ದಿಗೆ ತೆಗೆದುಕೊಂಡಿದ್ದೇ ತಪ್ಪು ಹೆಜ್ಜೆ ಇಟ್ಟ ಹಾಗೆ ಆಗಿದೆ ಎಂದರು.
ಮದ್ದೂರು ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ತುಷ್ಠೀಕರಣ ನೀತಿ ಮತ್ತೊಮ್ಮೆ ಜಗಜ್ಜಾಹೀರಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಬಿ. ಅಶೋಕ್ ನಾಯ್ಕ್, ಬಂಜಾರ ಸಮುದಾಯದ ಗುರುಗಳಾದ ಸೈನಾ ಭಗತ್ ಮಹಾರಾಜ್, ಕೆಜೆ. ನಾಗೇಶ್ ನಾಯ್ಕ್, ಬಸವರಾಜ್ ನಾಯ್ಕ್, ನಾನ್ಯಾನಾಯ್ಕ್, ಜಗದೀಶ್ ನಾಯ್ಕ್, ನಾಗರಾಜ್ ನಾಯ್ಕ್, ಗಂಗಾನಾಯ್ಕ್, ರಮೇಶ್ ನಾಯ್ಕ್, ಶಿವಾನಾಯ್ಕ್, ಗಿರೀಶ್ ನಾಯ್ಕ್, ಆನಂದ್ ನಾಯ್ಕ್, ಭದ್ರಾವತಿ ಹಾಗೂ ಶಿವಮೊಗ್ಗ ತಾಲೂಕಿನ ೧೦ಕ್ಕೂ ಅಧಿಕ ತಾಂಡಾಗಳ ಪ್ರಮುಖರು ಇಂದಿನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post