ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೆ.ಎಸ್. ಈಶ್ವರಪ್ಪನವರ K S Eshwarappa ರಾಜಕೀಯ ದಾಹಕ್ಕೆ ಇನ್ನೆಷ್ಟು ಅಮಾಯಕರು ಬಲಿಯಾಗಬೇಕೊ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಇಂದು ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರ ಬಂದಮೇಲೆ ಎಲ್ಲಾ ಧರ್ಮದ ಯುವಕರ ಕೊಲೆಗಳಾಗುತ್ತಿವೆ. ಇದಕ್ಕೆ ಕಾರಣ ಕಾಂಗ್ರೆಸ್ ಎಂದು ಈಶ್ವರಪ್ಪನವರು ಹೇಳುತ್ತಿರುವುದನ್ನು ನೋಡಿದರೆ ಅವರಿಗೆ ನಾಚಿಕೆ ಆಗಬೇಕು. ಶಿವಮೊಗ್ಗವನ್ನೇ ಉದಾಹರಣೆಗೆ ತೆಗೆದುಕೊಂಡರೆ ಅವರ 25 ವರ್ಷದ ರಾಜಕೀಯ ಜೀವನದಲ್ಲಿ ಧರ್ಮಗಳ ನಡುವೆ ಸಂಘರ್ಷ ಹುಟ್ಟುಹಾಕಿರುವುದನ್ನು ಬಿಟ್ಟರೆ ಬೇರೇನೂ ಮಾಡಿಲ್ಲ. ಹರ್ಷನ ಕೊಲೆಯನ್ನೂ ರಾಜಕಾರಣಗೊಳಿಸಿದರು. ಅದರ ಲಾಭ ಪಡೆದರು. ನಗರದಲ್ಲಿ ಗಲಾಟೆ ಎಬ್ಬಿಸಿದರು. ಜನಜೀವನವನ್ನು ಅಸ್ತವ್ಯಸ್ತಗೊಳಿಸಿದರು. ಇದೆಲ್ಲವೂ ಅವರ ಅಧಿಕಾರದ ಹಪಾಹಪಿತನವೇ ಆಗಿದೆ ಎಂದರು.

ಬಿಜೆಪಿಯವರಿಗೆ ಸಾವರ್ಕರ್ ಇಷ್ಟು ವರ್ಷ ಗೊತ್ತಿರಲಿಲ್ಲವೇ .ಈಗ ಒಬ್ಬಸಾಮಾನ್ಯ ಮನುಷ್ಯನನ್ನು ವಿಜೃಂಭಿಸುವ ಅವಶ್ಯಕತೆಯಾಧರೂ ಏನಿದೆ ಅದರಲ್ಲೂ ಈಶ್ವರಪ್ಪನವರು ಅವರ ಮೊಮ್ಮಗನನ್ನು ಕರೆಸುವ ಅವಶ್ಯತೆ ಇತ್ತೇ. ಈ ದೇಶದ ಸ್ವಾತಂತ್ರ್ಯಕ್ಕಾಗಿ ಕೋಟಿ ಜನರು ಹೋರಾಡಿದ್ದಾರೆ. ಅವರ ಮೊಮ್ಮಕ್ಕಳಿಲ್ಲವೇ. ಮಕ್ಕಳಿಲ್ಲವೇ, ನಿಜವಾಗಿಯೂ ಈಶ್ವರಪ್ಪನವರಿಗೆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಪ್ರೀತಿ ಇದ್ದರೆ, ಶಿಕಾರಿಪುರ ತಾಲೂಕಿನ ಈಸೂರಿಗೆ ಹೋಗಲಿ ಅಲ್ಲಿ ಹೋರಾಟಗಾರರ ವಂಶವೇ ಇದೆ ಎಂದು ಟೀಕಿಸಿದರು.
ಬಿ.ಎಸ್. ಯಡಿಯೂರಪ್ಪನವರನ್ನು ನೋಡಿ ಈಶ್ವರಪ್ಪ ಕಲಿಯಬೇಕು. ಯಡಿಯೂರಪ್ಪನವರು ಬಿಜೆಪಿಯವರೇ. ಆದರೆ ಧರ್ಮಗಳ ನಡುವೆ ಅವರೆಂದೂ ಶಾಂತಿ ಕದಡುವಂತ ಮಾತುಗಳನ್ನು ಆಡುವುದಿಲ್ಲ. ಅಭಿವೃದ್ಧಿಗೆ ಶ್ರಮಿಸುತ್ತಾರೆ. ಆದರೆ ಈ ಈಶ್ವರಪ್ಪ ಧರ್ಮವನ್ನು ಮೈಮೇಲೆ ಹೊತ್ತುಕೊಂಡಂತೆ ಅಧಿಕಾರಕ್ಕಾಗಿ ಈ ರೀತಿಯ ಹೇಳಿಕೆಗಳನ್ನು ಇಟ್ಟುಕೊಂಡು 60 ವರ್ಷಕ್ಕೆ ಅರಳುಮರಳು ಎಂಬಂತೆ ವರ್ತಿಸುತ್ತಿದ್ದಾರೆ ಎಂದರು.

ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಮಲ್ಲಿಕಾರ್ಜು ಖರ್ಗೆಯವರು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನ.6ರಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಂದು ಕಾಂಗ್ರೆಸ್ ಉಸ್ತುವಾರಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಯ್ಯದ್ ಅಹ್ಮದ್ ಹೇಳಿದರು.
ಖರ್ಗೆಯವರು 50 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿ ಕೆಲಸ ಮಾಡಿದ್ದಾರೆ. ಎಲ್ಲಾ ಹುದ್ದೆಗಳಲ್ಲೂ ಸೇವೆ ಸಲ್ಲಿಸಿದ್ದಾರೆ. 9 ಬಾರಿ ಶಾಸಕರಾಗಿ, 2 ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಈಗ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರೇಖಾ ರಂಗನಾಥ್, ಸಿ.ಎಸ್.ಚಂದ್ರಭೂಪಾಲ್, ಚಂದ್ರಶೇಖರ್, ಮುಜೀಬ್, ಚಂದನ್, ಖಲೀಂಪಾಷಾ, ಎನ್.ಡಿ. ಪ್ರವೀಣ್ಕುಮಾರ್ ಮುಂತಾದವರಿದ್ದರು.











Discussion about this post