ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
1990 ರಿಂದ 2005 ರವರೆಗೆ 5 ಬಾರಿ ಸಂಸದರಾಗಿ, 4 ಬಾರಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ, 6 ನೇ ಬಾರಿಗೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ #Shivraj Singh Chouhan ಅವರು ಜ.18 ರಂದು ಶಿವಮೊಗ್ಗ ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ #B Y Raghavendra ಹೇಳಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.18 ರಂದು ಬೆಳಗ್ಗೆ 10 ಗಂಟೆಗೆ ಅಗ್ರಿಕಲ್ಚರ್ ಬೇಸಿಕ್ ಮಲೆನಾಡು ಸಾರ್ಟ್ ಅಪ್ ಸಮ್ಮೇಳನವನ್ನು ಶಿವಮೊಗ್ಗದ ಪೆಸಿಟ್ ಕಾಲೇಜ್ ನಲ್ಲಿ ಉದ್ಘಾಟನೆ ಮಾಡಲಿದ್ದಾರೆ. ನಂತರ ಅವರು ಸಾಗರದ ಸಂತೆ ಮೈದಾನದಲ್ಲಿ ನಡೆಯುವ ಅಡಿಕೆ ಬೆಳೆಗಾರರ ಬೃಹತ್ ಸಮಾವೇಶದಲ್ಲಿ ಬೆಳಗ್ಗೆ 11 ಗಂಟೆಗೆ ಭಾಗವಹಿಸಲಿದ್ದಾರೆ ಎಂದರು.
ಈ ಸಮಾರಂಭದಲ್ಲಿ ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಆಗಮಿಸಲಿದ್ದಾರೆ. ಸಚಿವ ಮಧು ಬಂಗಾರಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಆರಗ ಜ್ಞಾನೇಂದ್ರ, ಡಾ. ಆರ್.ಎಂ. ಮಂಜುನಾಥ್ ಗೌಡ, ಮಾಜಿ ಸಚಿವ ಹೆಚ್.ಹಾಲಪ್ಪ, ಮೊದಲಾದವರು ಭಾಗಿಯಾಗಲಿದ್ದಾರೆ. ಅಡಿಕೆ ಬೆಳೆಗಾರ ಸಮಾವೇಶ ಸಮಿತಿಯ ಅಧ್ಯಕ್ಷ ಹೆಚ್.ಎಸ್. ಮಂಜಪ್ಪ ಹಾಗೂ ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ. ರಾಮಚಂದ್ರ ಭಟ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ಸಮಾವೇಶದಲ್ಲಿ ಅಡಿಕೆ ಬೆಳೆಗಾರರ ಪ್ರಮುಖ ಉದ್ದೇಶಗಳಾದ ವಿದೇಶಿ ಅಡಿಕೆ ಆಮದು ನಿಯಂತ್ರಣ, ಅಡಕೆಗೆ ಬರುವ ರೋಗಬಾಧೆ ಪರಿಹಾರಕ್ಕೆ ಕ್ರಮ, ವನ್ಯಜೀವಿಗಳ ಹಾವಳಿ ತಡೆಗಟ್ಟುವಂತೆ, ಅಡಿಕೆ ಬೆಳೆಗಾರರ ಸೊಪ್ಪಿನ ಬೆಟ್ಟದ ಸಮಸ್ಯೆ ಪರಿಹಾರ ಹಾಗೂ ರಾಷ್ಟ್ರೀಯ ಅಡಿಕೆ ಮಂಡಳಿ ರಚನೆಗೆ ಒತ್ತಾಯಿಸಲಾಗುವುದು ಎಂದರು.
Also read: ಮಂಡ್ಯ | ಕಾವೇರಿ ನದಿಯಲ್ಲಿ ಮುಳುಗಿ ಬಿಇ ವಿದ್ಯಾರ್ಥಿ ಸಾವು
ವರ್ಲ್ಡ್ ಹೆಲ್ತ್ ಆರ್ಗನೈಸೇಷನ್ ನೀಡಿದ್ದ ಅಡಿಕೆ ಹಾನಿಕಾರಕ ಎನ್ನುವ ವರದಿಯಲ್ಲಿ ಸಿಗರೇಟ್ ಲಾಬಿಗಳಿಂದ ಈ ವರದಿ ಹೊರಗೆ ಬಂದಿರುವ ಶಂಕೆ ಇದೆ. ಹಾಗಾಗಿ ನುರಿತ ತಜ್ಞರ ತಂಡ ರಚಿಸಿ, ಅದಕ್ಕೆ ಒಂದು ಬಜೆಟ್ ನೀಡಿ, ಸರಿಯಾದ ರೀತಿಯಲ್ಲಿ ತನಿಖೆ ನಡೆಸಲು ಸಚಿವರಲ್ಲಿ ಮನವಿ ಮಾಡಲಾಗುವುದು ಎಂದರು.
ವಂಶ ಪಾರಂಪರಿಕ ಬೆಳೆಯಾದ ಅಡಿಕೆಯು ಎಲೆ ಚುಕ್ಕೆ ರೋಗದಿಂದ ತುಂಬಾ ದೊಡ್ಡ ರೀತಿಯಲ್ಲಿ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಈ ಒಂದು ರೋಗದಿಂದ ಮಲೆನಾಡು ಭಾಗದಲ್ಲಿ ಸುಮಾರು 226 ಕೋಟಿ ನಷ್ಟ ಆಗಿದೆ. ಇದಕ್ಕೆ ಕೇಂದ್ರದಿಂದ ಪರಿಹಾರದ ರೂಪದಲ್ಲಿ ಹಣ ನೀಡಲು ಒತ್ತಾಯಿಸಲಾಗಿತ್ತು. ಕೇಂದ್ರದಿಂದ ಅನುದಾನ ನೀಡುವುದರ ಮೂಲಕ ರೈತರ ಕಣ್ಣೀರನ್ನು ಒರೆಸಬೇಕು ಎಂದರು.
ಸಂಶೋಧನಾ ಕೇಂದ್ರದ ಅವಶ್ಯಕತೆ ಇದೆ. ಮಾಯಿಶ್ಚರ್ ಕಂಟೆAಟ್ (ಅಡಿಕೆ ತೇವಾಂಶ) ಶೇ.7 ಎಷ್ಟು ಇದೆ. ಇದು ಸಾಧ್ಯವಾಗುತ್ತಿಲ್ಲ. ಅದನ್ನು 10 ರಿಂದ 11 ಕ್ಕೆ ತೇವಾಂಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒತ್ತಾಯ ಮಾಡಲಾಗುವುದು. ಮಲೆನಾಡಿನ ಅಡಿಕೆಯ ರಫ್ತಿಗೆ ಒತ್ತಾಯಿಸಲಾಗುವುದು. ಹೊರ ರಾಷ್ಟ್ರಗಳಿಂದ ಅಡಿಕೆ ಆಮದಿಗೆ ತೆರಿಗೆ ಹೆಚ್ಚಿಸಲು ಒತ್ತಾಯ ಮಾಡಲಾಗುತ್ತದೆ ಎಂದರು.
ಮುಂದಿನ ದಿನಗಳಲ್ಲಿ ಭತ್ತಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದ ಅವರು, ಮಲೆನಾಡು ಅಡಿಕೆ ಸಂಶೋಧನಾ ಕೇಂದ್ರಕ್ಕೆ ಕಳೆದ ಬಾರಿ ಬಸವರಾಜ ಬೊಮ್ಮಾಯಿ ಅವಧಿಯಲ್ಲಿ 10 ಕೋಟಿ ಅನುದಾನ ಮೀಸಲಿಡಲಾಗಿತ್ತು. ಅಷ್ಟರಲ್ಲಿ ಸರ್ಕಾರ ಬದಲಾಯಿತು ಎಂದ ಅವರು, ಸಮಾವೇಶಕ್ಕೆ ಜಿಲ್ಲೆಯ ರೈತರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಬೇಕು. ರೈತರ ಕೂಗನ್ನು ಮಂತ್ರಿಗಳಿಗೆ ಮುಟ್ಟಿಸುವ ಅವಕಾಶ ಇದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹರತಾಳು ಹಾಲಪ್ಪ, ಟಿ.ಡಿ. ಮೇಘರಾಜ, ಹಕ್ರೆ ಮಲ್ಲಿಕಾರ್ಜುನ್, ವಿನ್ಸೆಂಟ್ ರೋಡ್ರಿಗಸ್, ಕೆ.ವಿ. ಅಣ್ಣಪ್ಪ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post