ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೋವಿಡ್ ಆತಂಕದ ಸಂದರ್ಭಗಳು ಧೃತಿಗೆಡಿಸದೆ ಅಗತ್ಯ ಕೌಶಲ್ಯ ರೂಡಿಸಿಕೊಳ್ಳುವ ಅವಕಾಶಗಳಾಗಿ ಬದಲಾಗಲಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್. ನಾಗರಾಜ ಅಭಿಪ್ರಾಯಪಟ್ಟರು.
ಜೆಎನ್’ಎನ್‌ಸಿಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆನ್ಲೈನ್ ಮೂಲಕ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಎರಡನೆಯ ಹಂತದ ಇಂಡಕ್ಷನ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಇಂದು ನಾವು ಮನೆಯಲ್ಲಿಯೇ ಹೆಚ್ಚು ಕಾಲ ಕಳೆಯುವಂತಾಗಿದೆ. ಇಂತಹ ಸಂದರ್ಭಗಳು ಅನಗತ್ಯ ಗೊಂದಲ ಆತಂಕಗಳಿಗೆ ವ್ಯಯವಾಗದೇ ಬದುಕಿನ ಯಶಸ್ಸಿನ ಹಾದಿಯಲ್ಲಿ ಸಾಗುವ ಅವಶ್ಯಕ ಕೌಶಲ್ಯಗಳನ್ನು ರೂಡಿಸಿಕೊಳ್ಳುವ ಸಂದರ್ಭವಾಗಿ ಬದಲಾಗಲಿ. ಪದವಿ ಪೂರ್ವ ಶಿಕ್ಷಣದಂತಹ ವಿವಿಧ ಹಂತಗಳನ್ನು ಪೂರೈಸಿದ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ವಾತಾವರಣ ಹೊಸದಾಗಿರುತ್ತದೆ. ಈಗಾಗಲೇ ಪ್ರಥಮ ಸೆಮಿಸ್ಟರ್ ಪೂರೈಸಿದ ವಿದ್ಯಾರ್ಥಿಗಳಿಗೆ ಆವಿಷ್ಕಾರಿ ತಂತ್ರಜ್ಞಾನಗಳು, ಸಂಶೋಧನೆ, ನಾವಿನ್ಯ ಚಿಂತನೆಗಳ ಪ್ರಾಮುಖ್ಯತೆಯ ಅರಿವು ಅವಶ್ಯಕ. ವಿದ್ಯಾರ್ಥಿಗಳು ಮನೆಯಲ್ಲಿಯೇ ಕುಳಿತು ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಆನ್ಲೈನ್ ವೇದಿಕೆಗಳ ಮೂಲಕ ಸಂವಹನ ಕೌಶಲ್ಯತೆ, ಬರವಣಿಗೆ, ಹೊಸ ತಂತ್ರಜ್ಞಾನಗಳ ಕುರಿತ ಕಲಿಕೆ ಮುನ್ನಡೆಯಲಿ ಎಂದು ಕಿವಿಮಾತು ಹೇಳಿದರು.
ಜೆಎನ್’ಎನ್‌ಸಿ ಎಂಜಿನಿಯರಿಂಗ್ ಕಾಲೇಜಿನ ಇನ್ಫ್ರಾಸ್ಟ್ರಕ್ಚರ್ ಡೀನ್ ಡಾ.ಎಂ.ಎಂ. ರಜತ್ ಹೆಗಡೆ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಇಂಡಕ್ಷನ್ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು ಹೊಸ ವಾತಾವರಣಗಳಿಗೆ ಒಗ್ಗಿಕೊಳ್ಳಲು ವಿದ್ಯಾರ್ಥಿಗಳಿಗೆ ಪೂರಕವಾಗಲಿದೆ. ಈ ಮೂಲಕ ಹಲವು ನಾವಿನ್ಯ ವಿಷಯಗಳು, ಲಭ್ಯ ಸೌಲಭ್ಯಗಳ ಕುರಿತ ಅರಿವು ದೊರೆಯಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೆಎನ್’ಎನ್‌ಸಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಪಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಭೌತವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಎನ್. ಆನಂದರಾಮ್, ರಸಾಯನ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ಎಂ.ಎಚ್. ಮೊಯಿನುದ್ದಿನ್ ಖಾನ್, ಗಣಿತ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ನಿರ್ಮಲ.ಟಿ, ಸಹ ಪ್ರಾಧ್ಯಾಪಕರಾದ ಡಾ.ವೀಣಾ ವಿನೋದ್, ಅನುರಾಧ ಗಿರಿಮಾಜಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post