ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ ಅವರು ಇಂದು ತಮ್ಮ ಹುಟ್ಟು ಹಬ್ಬವನ್ನು ಅಚ್ಚುಕಟ್ಟಿನ ಕೊನೆಯ ಭಾಗಕ್ಕೆ ಸೇರುವ ರೈತರೊಂದಿಗೆ ಭತ್ತ ಕಟಾವು ಮಾಡುವ ಮೂಲಕ ಅತ್ಯಂತ ವಿಶೇಷವಾಗಿ ಆಚರಿಸಿಕೊಂಡರು.
ಭದ್ರಾ ಕಾಡಾ ಇತಿಹಾಸದಲ್ಲಿ ಪ್ರಥಮ ಬಾರಿಗೆ ಮಲೆಬೆನ್ನೂರು ನೀರಾವರಿ ಇಲಾಖೆಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿದಾಗ ಕೊನೆಯ ಭಾಗಕ್ಕೆ ನಿರಂತರವಾಗಿ 120 ದಿನಗಳ ಕಾಲ ನೀರು ಕೊಟ್ಟೆ ತೀರುತ್ತೇನೆ, ಅಲ್ಲಿಯವರೆಗೂ ವಿಶ್ರಮಿಸುವುದಿಲ್ಲ ಜೊತೆಗೆ ಭತ್ತ ಕಟಾವು ಬರುವವರೆಗೂ ನಿಮ್ಮೊಂದಿಗೆ ಇರುತ್ತೇನೆ ಎಂದು ಹೇಳಿದಾಗ ಹಲವಾರು ರೈತರು ಇದನ್ನು ನಂಬಿರಲಿಲ್ಲ. ಕಳೆದ 20 ರಿಂದ 30 ವರ್ಷಗಳಲ್ಲಿ ಯಾವ ಪುರುಷ ಅಧ್ಯಕ್ಷರು ಮಾಡದ ಕೆಲಸ ಇವರು ಮಾಡಲು ಸಾಧ್ಯವಾ ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದ ರೈತರು, ಈಗ ಅಂದು ಅಂದುಕೊಂಡಿದ್ದ ತಪ್ಪು ಗ್ರಹಿಕೆಯನ್ನು ಹಿಂದಕ್ಕೆ ಪಡೆದು ಕೃತಜ್ಞತಾ ಸಮರ್ಪಣೆ ಮಾಡುತ್ತಿದ್ದಾರೆ. ಇದು ನನಗೆ ಅತೀವ ಸಂತಸ ತಂದಿದೆ, ಈ ಒಂದು ಐತಿಹಾಸಿಕ ಗೆಲುವಲ್ಲಿ ಎಲ್ಲಾ ಅಧಿಕಾರಿಗಳ ಪಾತ್ರ ಇರುವುದು ಹೆಮ್ಮೆಯ ಸಂಗತಿ ಈ ಮೂಲಕ ಅವರಿಗೂ ನನ್ನ ಧನ್ಯವಾದ ಹೇಳುತ್ತೇನೆ ಎಂದರು.
ದೇಶದ ಪ್ರಗತಿಗೆ ಹಗಲು ರಾತ್ರಿ ಎನ್ನದೆ ನಿಸ್ವಾರ್ಥ ಸೇವೆ ಸಲ್ಲಿಸುವ ರೈತಾಪಿ ವರ್ಗವು ಈಗಲೂ ಸಂಕಷ್ಟದಲ್ಲಿದೆ. ವಿವಿಧ ಬೆಳೆಗಳನ್ನು ಬೆಳೆಯಲು ಹಲವೆಡೆ ಸಾಲ ಮಾಡಿರುತ್ತಾರೆ. ಈ ಒತ್ತಡದ ಕಾರಣ ತಾವು ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ಇಲ್ಲದ ಹೊರತಾಗಿಯೂ ಮಧ್ಯವರ್ತಿಗಳು ಹೇಳಿದ ಬೆಲೆಗೆ ಮಾರಾಟ ಮಾಡಬೇಕಾಗುತ್ತದೆ. ದೇಶದಲ್ಲಿ ಅನೇಕ ಜನಸಾಮಾನ್ಯರು ಬಡವರಿದ್ದವರು ಶ್ರೀಮಂತರಾಗಿದ್ದಾರೆ. ಆದರೆ ರೈತಾಪಿ ವರ್ಗವು ಅನೇಕ ಎಡರು ತೊಡರುಗಳ ಪರಿಣಾಮ ಸಮಸ್ಯೆಗಳ ಸುಳಿವಲ್ಲಿ ಒದ್ದಾಡುತ್ತ ಕತ್ತಲೆಯಲ್ಲಿ ಬದುಕುತ್ತಿದ್ದಾರೆ ಎಂದರು.
ರೈತರು ಹಸುಗಳನ್ನು ಸಾಕುತ್ತಾರೆ, ಕೋಳಿ ಸಾಕಾಣಿಕೆ ಮಾಡುತ್ತಾರೆ. ಆದರೆ ತಾವು ಮಾಡಿದ ಸಾಲದ ಹೊರೆಯ ಪರಿಣಾಮ ಮಕ್ಕಳಿಗೆ ನೀರು ಬೆರೆಸಿದ ಹಾಲನ್ನು ನೀಡಿ ಪ್ರಪಂಚಕ್ಕೆ ಗಟ್ಟಿ ಹಾಲನ್ನು ಕೊಡುಗೆಯಾಗಿ ನೀಡುತ್ತಾರೆ. ಕೋಳಿ ಸಾಕಾಣಿಕೆ ಮಾಡಿ ಮೊಟ್ಟೆಯನ್ನು ನೀಡುತ್ತಾರೆ. ಇದು ರೈತರ ನಿಜ ಮನಸ್ಥಿತಿ ಇಂತಹ ಹಾಲಿನಂತಹ ಮನಸ್ಸಿನ ಅನ್ನದಾತರು ಸದಾ ಕಾಲ ಸುಭಿಕ್ಷದಿಂದ ಜೀವನ ನಡೆಸಬೇಕು ಎಂಬುದು ನನ್ನ ಕನಸು ಎಂದರು.
ರೈತರು ಮಾತನಾಡಿ, ಹಲವಾರು ವರ್ಷಗಳಿಂದ ನೀರನ್ನು ಪಡೆಯಲು ಹೋರಾಟ ಮಾಡಿದ ದಿನವಿಲ್ಲ, ಬೆಳೆ ನಮ್ಮ ಕೈಗೆ ಬರುವವರೆಗೂ ನಿದ್ದೆ ಬಿಟ್ಟು ನೀರು ಹಾಯಿಸಿಕೊಂಡು ಅದೆಷ್ಟೋ ರಾತ್ರಿ ಕಳೆದಿದ್ದವು. ಆದರೆ ನೀವು ಕಾಡಾ ಅಧ್ಯಕ್ಷರಾದ ನಂತರ ಯಾವ ಹೋರಾಟ ಇಲ್ಲದೆ ಸುಗಮವಾಗಿ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ನೀರು ಹರಿದಿದ್ದು ಕೊನೆಯ ಭಾಗಕ್ಕೆ ನೀರು ಮುಟ್ಟಿರುವುದು ಒಂದು ಇತಿಹಾಸ. ನಿಮಗೆ ನಾವು ಸದಾ ಚಿರಋಣಿಯಾಗಿರುತ್ತೇವೆ ಎಂದು ತಮ್ಮ ಮನದಾಳದ ಮಾತನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ರುದ್ರಪ್ಪ, ಪರಶುರಾಮ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸಂತೋಷ್ ಗ್ರಾಮಸ್ಥರು ಜೊತೆಗಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post