ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಈ ಬಾರಿ ಚುನಾವಣೆಯಲ್ಲಿ ಇಬ್ಬರೂ ಒಟ್ಟಾಗಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುತ್ತೇವೆ ಎಂದು ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಹಾಗೂ ಕಾಂಗ್ರೆಸ್ ಮುಖಂಡ ಆರ್.ಎಂ. ಮಂಜುನಾಥ ಗೌಡ ಇಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಇಬ್ಬರೂ ಒಟ್ಟಾಗಿದ್ದೇವೆ. ನಮ್ಮ ನಡುವೆ ಭಿನ್ನಾಭಿಪ್ರಾಯಗಳು ಇದ್ದದ್ದು ನಿಜ ಆದರೆ ಈಗ ಬಿಜೆಪಿಯನ್ನು ಸೋಲಿಸಲೇಬೇಕಾಗಿದೆ. ಮತ್ತು ತೀರ್ಥಹಳ್ಳಿ ಕ್ಷೇತ್ರದಲ್ಲಿ ನಾವಿಬ್ಬರೂ ಒಟ್ಟಾಗುವ ಜನರ ಬಯಕೆಯನ್ನು ಗೌರವಿಸಿದ್ದೇವೆ. ಇಬ್ಬರೂ ಒಟ್ಟಾಗಬೇಕೆಂಬುದೇ ಕ್ಷೇತ್ರದ ಮತದಾರನ ಅಪೇಕ್ಷೆ. ಹಾಗಾಗಿ ನಾವಿಬ್ಬರೂ ಒಂದಾಗಿ ಬಿಜೆಪಿಯ ಅಭ್ಯರ್ಥಿಯನ್ನು ಅತ್ಯಂತ ಹೆಚ್ಚಿನ ಅಂತರದ ಮತಗಳಿಂದ ಸೋಲಿಸುತ್ತೇವೆ ಎಂದರು.
ಕಿಮ್ಮನೆ ರತ್ನಾಕರ್ ಮಾತನಾಡಿ, ತೀರ್ಥಹಳ್ಳಿಯಲ್ಲಿ ಆರಗ ಜ್ಞಾನೇಂದ್ರ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಕೋಮು ಗಲಭೆಗಳನ್ನು ಸೃಷ್ಟಿಸುವ ಹುನ್ನಾರ ಮಾಡುತ್ತಿದ್ದಾರೆ. ನಂದಿತಾ ಪ್ರಕರಣದಲ್ಲಿ ಸೋಲು ಕಂಡ ಅವರು ಪುನಃ ಅಂತಹುದೇ ಕೋಮುಗಲಭೆಯನ್ನು ಸೃಷ್ಟಿಸಲು ಹೊರಟಿದ್ದರು. ಆದರೆ ಅದು ಸಾಧ್ಯವಾಗಿಲ್ಲ ಎಂದರು.
ಆರಗ ಒಬ್ಬ ಅಸಮರ್ಥ ಗೃಹಮಂತ್ರಿಯಾಗಿದ್ದಾರೆ. ಯಾವ ಅಭಿವೃದ್ಧಿ ಕೆಲಸವನ್ನೂ ತೀರ್ಥಹಳ್ಳಿಯಲ್ಲಿ ಮಾಡಿಲ್ಲ. ಇತ್ತೀಚೆಗೆ ಅವರ ಅನುದಾನದಲ್ಲಿ ಆದ ಡಾಂಬರ್ ರಸ್ತೆಗಳು ಹಪ್ಪಳದಂತೆ ಎದ್ದು ಬರುತ್ತವೆ. ಅವರ ದರ್ಪ ಭ್ರಷ್ಟಾಚಾರ ಇವೆಲ್ಲವೂ ಕೊನೆಗೊಳ್ಳಬೇಕಾಗಿದೆ. ನನ್ನ ಜೊತೆಗೆ ಆರ್‌ಎಂ. ಮಂಜುನಾಥ ಗೌಡರು ಇದ್ದಾರೆ. ಅವರಿಗೆ ಚುನಾವಣೆಯ ಎಲ್ಲಾ ಮೇಲ್ವಿಚಾರಣೆಯನ್ನು ನೀಡುತ್ತೇನೆ. ಅವರ ನೇತೃತ್ವದಲ್ಲಿಯೇ ಸಮಿತಿಯೊಂದು ರಚನೆಯಾಗಿದೆ. ಒಟ್ಟಾರೆ ಬಿಜೆಪಿ ಆಡಳಿತಕ್ಕೆ ಕೊನೆ ಹಾಡುತ್ತೇವೆ. ಜೊತೆಗೆ ಇದು ನನ್ನ ಕೊನೆಯ ಚುನಾವಣೆ ಎಂದು ಹೇಳಿದರು.
ಗೃಹ ಮಂತ್ರಿ ಆರಗ ಜ್ಞಾನೇಂದ್ರ ಅವರ ಮಗನ ಬಗ್ಗೆ ಕೆಲವು ದೂರುಗಳಿವೆ. ಆತ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದ್ದಾನೆ. ಆತ ನಿರ್ಮಿಸಿದ ಬಡಾವಣೆಗೆ ರಸ್ತೆ ಕೂಡ ಮಾಡಿದ್ದಾರೆ. ಸ್ಯಾಂಟ್ರೋ ರವಿ ಮತ್ತು ಜ್ಞಾನೇಂದ್ರ ಅವರ ಮಗನ ಫೋಟೋಗಳು ಕಾಣಿಸಿಕೊಳ್ಳುತ್ತಿವೆ. ಯಾರ ಸಂಬಂಧ ಯಾರ ಜೊತೆ ಇದೆ ಎಂಬುದು ಈಗಾಗಲೇ ಬಹಿರಂಗವಾಗಿದೆ ಎಂದರು.
ಗೃಹ ಸಚಿವರೇ ಕೋಮು ಗಲಭೆ ಸೃಷ್ಟಿಸಲು ಪ್ರಯತ್ನಿಸಿದ ಆ ಘಟನೆ ಯಾವುದು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಅದನ್ನು ಬಹಿರಂಗವಾಗಿ ಹೇಳುವುದಿಲ್ಲ. ಬೇಕಾದರೆ ಪ್ರತ್ಯೇಕವಾಗಿ ನಿಮಗೆ ನೀಡುತ್ತೇನೆ. ನೀವು ಪತ್ತೆಹಚ್ಚಿ ಆ ಸತ್ಯವನ್ನು ಹೊರತನ್ನಿ ಎಂದರು.
ಈಗಾಗಲೇ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಣ ಸಂಗ್ರಹಣೆ ಆಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಹಿಂದೆ ಸುಮಾರು 5 ಸಾವಿರ ಮಹಿಳೆಯರಿಗೆ ಬೆಳ್ಳಿ ನಾಣ್ಯ ಕೊಟ್ಟ ಸುದ್ದಿ ಇತ್ತು. ಈಗ ಚಿನ್ನದ ನಾಣ್ಯವನ್ನೇ ಕೊಡಬಹುದೇನೋ ಎಂದು ವ್ಯಂಗ್ಯವಾಡಿದ ಅವರು, ಏಪ್ರಿಲ್ 19ರಂದು ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು.
ಆರ್.ಎಂ. ಮಂಜುನಾಥ ಗೌಡ ಮಾತನಾಡಿ, ಜನರ ಭಾವನೆಗಳಿಗೆ ಬೆಲೆ ಕೊಟ್ಟಿದ್ದೇವೆ. ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡಿದ್ದೇವೆ. ಒಟ್ಟಾಗಿ ಜನರ ಬಳಿ ಹೋಗುತ್ತೇವೆ. ಬಿಜೆಪಿ ಸರ್ಕಾರ ಎಂದೂ ಸತ್ಯವನ್ನು ಹೇಳಲಿಲ್ಲ. ಭ್ರಷ್ಟ ದುಷ್ಟ ಸರ್ಕಾರವಿದು. ರೈತವಿರೋಧಿ, ಉದ್ಯೋಗ ಕಿತ್ತುಕೊಂಡ ಸರ್ಕಾರ. ಇದರ ಜೊತೆಗೆ ಬೆಲೆ ಏರಿಕೆ ಬೇರೆ. ಇದರಿಂದಾಗಿ ಜನರು ಬಿಜೆಪಿ ವಿರುದ್ಧ ರೋಸಿ ಹೋಗಿದ್ದಾರೆ ಎಂದರು.
ಕಿಮ್ಮನೆಯವರನ್ನು ಗೆಲ್ಲಿಸಿಕೊಂಡೇ ವಿಧಾನಸೌಧಕ್ಕೆ ಕರೆದುಕೊಂಡು ಹೋಗುತ್ತೇನೆ. ಬಿಜೆಪಿ ಆರಗ ಜ್ಞಾನೇಂದ್ರ ಅವರಿಗೆ ಟಿಕೆಟ್ ಕೊಟ್ಟಿದ್ದು ಸ್ವಾಗತದ ವಿಷಯ. ಅವರನ್ನು ಸೋಲಿಸಿಯೇ ಅವರ ರಾಜಕೀಯ ಜೀವನವನ್ನು ಅಂತ್ಯಗೊಳಿಸಬೇಕೆಂಬ ನಮ್ಮ ಹಂಬಲ ಹತ್ತಿರವಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಕಲಗೋಡು ರತ್ನಾಕರ್, ಸಿ.ಎಸ್. ಚಂದ್ರಭೂಪಾಲ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post