ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಮಾಜದಲ್ಲಿ ಉತ್ತಮವಾಗಿ ಬದುಕಲು ಮನುಷ್ಯನಿಗೆ ಜ್ಞಾನ ಮತ್ತು ಮಾಹಿತಿ ಬೇಕು. ಅವುಗಳನ್ನು ಪಡೆಯುವುದೇ ಗ್ರಂಥಾಲಯಗಳಿಂದ ಎಂದು ಸಪ್ರದ ಕಾಲೇಜಿನ ಗ್ರಂಥಪಾಲಕಿ ಡಾ. ಸ್ವಪ್ನಾ ಹೇಳಿದರು.
ಅವರು ಕಮಲಾ ನೆಹರು ಮಹಿಳಾ ಕಾಲೇಜಿನಲ್ಲಿ ಗ್ರಂಥಾಲಯ ವಿಭಾಗವು ಆಯೋಜಿಸಿದ್ದ ಗ್ರಂಥಾಲಯ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಗ್ರಂಥಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಗ್ರಂಥಾಲಯಗಳನ್ನು ಸ್ಥಾಪಿಸುತ್ತಿದ್ದರು. ಆದರೆ ಅವುಗಳನ್ನು ಕೇವಲ ರಾಜ ಮನೆತನದವರು ಮಾತ್ರ ಉಪಯೋಗಿಸುತ್ತಿದ್ದರು. ಕಾಲಾನಂತರದಲ್ಲಿ ಅದು ಎಲ್ಲರಿಗೂ ದೊರಕುವಂತಾಯಿತು. ಗ್ರಂಥಾಲಯವು ಮಾಹಿತಿ ವಿಜ್ಞಾನವನ್ನು ಸಂರಕ್ಷಿಸುವ ಕೇಂದ್ರವಾಗಿದೆ ಎಂದರು.
ಗ್ರಂಥಾಲಯ ಅಂದಾಕ್ಷಣ ಕೇವಲ ಪುಸ್ತಕ ಅಂತಾ ನೆನಪಾಗುತ್ತದೆ. ಆದರೆ ಮನುಷ್ಯನಿಗೆ ಜೀವನದಲ್ಲಿ ಮಳೆ, ನೀರು, ಆಹಾರ ಮತ್ತು
ವಾಸಿಸಲು ಸೂರು ಈ ನಾಲ್ಕು ಸಂಗತಿಗಳು ಎಷ್ಟು ಮುಖ್ಯವೋ ಅಷ್ಟೇ ಜ್ಞಾನ ಮತ್ತು ಮಾಹಿತಿ ಕೊಡುವ ಗ್ರಂಥಾಲಯವೂ ಅವಶ್ಯಕವಾದದ್ದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಆರ್.ಎಂ.ಜಗದೀಶ್ ಮಾತನಾಡಿ, ಒಂದು ಕಾಲದಲ್ಲಿ ಭಾರತ ಜಗತ್ತಿನಲ್ಲಿಯೇ ಜ್ಞಾನದ ಖನಿಯಾಗಿತ್ತು. ಪ್ರಾಚೀನ ಕಾಲದಲ್ಲಿ ನಮ್ಮ ದೇಶದಲ್ಲಿದ್ದ ನಲಂದಾ, ತಕ್ಷಶಿಲಾ, ವಿಕ್ರಮಶೀಲ ವಿಶ್ವವಿದ್ಯಾಲಯಗಳಲ್ಲಿ ಜ್ಞಾನ ಸಂಪಾದನೆಗಾಗಿ ವಿದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ವಿದ್ವಾಂಸರು ಆಗಮಿಸುತ್ತಿದ್ದರು. ಈ ವಿಶ್ವವಿದ್ಯಾಲಯಗಳಲ್ಲಿದ್ದ ಗ್ರಂಥಾಲಯಗಳು ಪ್ರಂಪಂಚದಲ್ಲಿಯೇ ಅಗ್ರಸ್ಥಾನ ಪಡೆದಿದ್ದವು ಎಂದರು.
ನಮ್ಮ ಪೂರ್ವಜರು ವಿದ್ಯಾರ್ಥಿಗಳ ಮಾನಸಿಕ ಹಾಗೂ ಶಾರೀರಿಕ ಸ್ವಾಸ್ತ್ಯಕ್ಕೆ ಹೆಚ್ಚಿನ ಮಹತ್ವವನ್ನು ಕೊಟ್ಟ ಪರಿಣಾಮ ಎಲ್ಲ ಶಾಲಾ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಕ್ರೀಡಾಂಗಣ ಮತ್ತು ಗ್ರಂಥಾಲಯ ಸ್ಥಾಪನೆಗೆ ಒತ್ತು ಕೊಟ್ಟಿದ್ದನ್ನು ಕಾಣುತ್ತೇವೆ. ಜ್ಞಾನಕ್ಕೆ ಸಮಾನವಾದದ್ದು ವಿಶ್ವದಲ್ಲಿ ಬೇರಾವುದೂ ಇಲ್ಲ. ಸರ್ಕಾರ ಪ್ರತಿ ಗಲ್ಲಿ, ಬಡಾವಣೆಗಳಲ್ಲಿ ಗ್ರಂಥಾಲಯ ತೆರೆಯಬೇಕು ಎಂದ ಅವರು ಪ್ರತಿ ವಿದ್ಯಾರ್ಥಿಯೂ ಒಳ್ಳೆಯ ಓದಿನ ಅಭ್ಯಾಸ ಇಟ್ಟುಕೊಳ್ಳಬೇಕು. ಗ್ರಂಥಾಲಯಕ್ಕೆ ಭೇಟಿ ನೀಡಿ ಸ್ವಲ್ಪ ಸಮಯವನ್ನಾದರೂ ಪುಸ್ತಕ, ನಿಯತಕಾಲಿಕೆಗಳೊಡನೆ ಕಳೆಯಬೇಕು. ಒಳ್ಳೆಯ ಕೃತಿಕಾರನ ಗ್ರಂಥ ಓದಬೇಕು ಎಂದು ಕಿವಿಮಾತು ಹೇಳಿದರು.
ಡಾ.ಎ.ಪಿ.ಓಂಕಾರಪ್ಪ, ಗ್ರಂಥಪಾಲಕ ರವಿಕುಮಾರ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post