ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವ್ಯಕ್ತಿತ್ವವನ್ನು ಅರಳಿಸುವ ಸಾಹಿತ್ಯಗಳಿಗೆ ಓದುಗರ ಮನಸ್ಸಿನಲ್ಲಿ ಆಯಸ್ಸು ಅಧಿಕವಾಗಿರುತ್ತದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್. ಸುಂದರರಾಜ್ ಅಭಿಪ್ರಾಯಪಟ್ಟರು.
ಸುಬ್ಬಯ್ಯ ದಂತ ವೈದ್ಯಕೀಯ ಕಾಲೇಜಿನ Subbaiah Medial College ಕಾರ್ಯನಿರ್ವಾಹಕ ನಿರ್ದೇಶಕಿ, ವೈದ್ಯ ಸಾಹಿತಿ ಡಾ. ವಿನಯ ಶ್ರೀನಿವಾಸ್ Dr. Vinaya Shrinivas ಅವರು ಬರೆದಿರುವ `ನಿನ್ನೆ ನಿನ್ನೆಗೆ, ಇಂದು ಇಂದಿಗೆ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಸಾಮಾನ್ಯವಾಗಿ ಸಾಹಿತ್ಯದಲ್ಲಿ ಎರಡು ಪ್ರಕಾರಗಳಿವೆ. ಅರಳಿಸುವ ಸಾಹಿತ್ಯ ಹಾಗೂ ಕೆರಳಿಸುವ ಸಾಹಿತ್ಯ. ಅರಳಿಸುವ ಸಾಹಿತ್ಯ ಎಂದರೆ ಒಂದು ರೀತಿಯ ಜೀವನದ ಮಾರ್ಗದರ್ಶಿಯಂತೆ. ಉತ್ತಮ ಬರವಣಿಗೆ, ಸಾಹಿತ್ಯ, ಚಿಂತನೆಯೊಂದಿಗೆ ಸಕಾರಾತ್ಮಕ ಆಲೋಚನೆಗಳನ್ನು ಮನದಲ್ಲಿ ಹುಟ್ಟಹಾಕುವುದು ಅರಳಿಸುವ ಸಾಹಿತ್ಯ ಎಂದರು.
ಇನ್ನು, ಭಯಾನಕ ಕಥೆ, ಕೆಟ್ಟ ವಿಚಾರ ಹಾಗೂ ಚಿಂತನೆಗಳನ್ನು ಮನದಲ್ಲಿ ಹುಟ್ಟುಹಾಕುವುದೇ ಕೆರಳಿಸುವ ಸಾಹಿತ್ಯ. ಅರಳಿಸುವ ಸಾಹಿತ್ಯ ಜೀವನದ ಮಾರ್ಗದರ್ಶಿಯಾಗಿದ್ದು, ಓದುಗರ ಅಥವಾ ಸಾಹಿತ್ಯಾಸಕ್ತರ ಮನದಲ್ಲಿ ದೀರ್ಘಕಾಲ ಉಳಿದುಕೊಳ್ಳುತ್ತದೆ. ಇದಕ್ಕೆ ಆಯಸ್ಸು ಹೆಚ್ಚು. ಆದರೆ, ಕೆರಳಿಸುವ ಸಾಹಿತ್ಯದ ಆಯಸ್ಸು ಅತ್ಯಂತ ಕಡಿಮೆ ಎಂದರು.
ಅರಳಿಸುವ ಸಾಹಿತ್ಯದ ಪ್ರಾಕಾರಕ್ಕೆ ಹೊಸ ಸೇರ್ಪಡೆ ಇಂದು ಬಿಡುಗಡೆಯಾದ `ನಿನ್ನೆ ನಿನ್ನೆಗೆ, ಇಂದು ಇಂದಿಗೆ’ ಪುಸ್ತಕ ಎಂದು ಸಂತಸ ವ್ಯಕ್ತಪಡಿಸಿದರು.
ಸಾಮಾನ್ಯವಾಗಿ ನಾವೆಲ್ಲಾ ಬರೆಯುವುದು ಓದಿ, ಅಧ್ಯಯನ ಮಾಡಿದ ನಂತರದ ಸಾಹಿತ್ಯ. ಆದರೆ, ವೈದ್ಯರು ತಮ್ಮ ಅನುಭವವನ್ನು ಅಕ್ಷರ ರೂಪಕ್ಕೆ ಇಳಿಸಿ ಸಾಹಿತ್ಯ ರಚಿಸುತ್ತಾರೆ. ಇಂತಹ ಸಾಹಿತ್ಯ ಹೆಚ್ಚು ಕಾಲ ಮನದಲ್ಲಿ ಉಳಿಯುತ್ತದೆ ಎಂದರು.
Also read: ಆಸ್ಟ್ರೇಲಿಯಾ: ನೀರಿನಲ್ಲಿ ಮುಳುಗಿ ನಾಲ್ವರು ಭಾರತೀಯರು ಸಾವು
ಈ ಪುಸ್ತಕದಲ್ಲಿನ 44 ಲೇಖನಗಳು ಲೇಖಕರ ಅನುಭವದ್ದು. ಲೇಖಕರ ಜೀವನದಲ್ಲಿ ಅವರ ಪೋಷಕರು, ಶಿಕ್ಷಕರು ಹಾಗೂ ಹಿರಿಯರು ತಿದ್ದಿ ತೀಡಿದ್ದಾರೆ. ಇಂತಹ ಅನುಭವವನ್ನು ಅತ್ಯಂತ ಸರಳ ಹಾಗೂ ಸುಂದರವಾಗಿ ಡಾ.ವಿನಯ ಶ್ರೀನಿವಾಸ್ ಅವರು ಅಕ್ಷರ ರೂಪಕ್ಕೆ ಇಳಿಸಿದ್ದಾರೆ ಎಂದರು.
ಸಮಯ ಪರಿಪಾಲನೆ ಮುಖ್ಯ
ಯುವಕರು ಹಾಗೂ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಮಯ ಪರಿಪಾಲನೆ ಹಾಗೂ ಕರ್ತವ್ಯ ನಿಷ್ಠಯನ್ನು ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆ ಮಾಡಬೇಕಾದರೆ ಇವುಗಳನ್ನು ಜೀವನದಲ್ಲಿಯೇ ಮೈಗೂಡಿಸಿಕೊಳ್ಳಬೇಕು. ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ, ಜನರಲ್ ಕಾರ್ಯಪ್ಪ ಅವರಂತಹ ಸಾಧಕರ ಜೀವನಶೈಲಿ ವಿದ್ಯಾರ್ಥಿಗಳಿಗೆ ಆದರ್ಶಪ್ರಾಯರಾಗಿದ್ದಾರೆ ಎಂದರು.
ಡಾ. ವಿನಯ ಶ್ರೀನಿವಾಸ್ ಅವರ ಈ ಪುಸ್ತಕನ್ನು ಎರಡು ಬಾರಿ ಓದಿದ್ದೇನೆ. ಮತ್ತೆ ಮತ್ತೆ ಓದಬೇಕು ಎನಿಸುವ ಸಾಹಿತ್ಯ ಇದಾಗಿದ್ದು, ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅಂಶ ಇದರಲ್ಲಿವೆ ಎಂದರು.
ಪೋಷಕರನ್ನು ವೃದ್ಧಾಶ್ರಮಕ್ಕೆ ಕಳುಹಿಸುವ ಮನೋಭಾವ ಬದಲಾಗಬೇಕು. ಹಿರಿಯರಿಲ್ಲದ ಮನೆ ಮೊಸರನ್ನವಿಲ್ಲದ ಊಟದಂತೆ ಎಂಬಂತೆ ಪ್ರತಿ ಮನೆಯಲ್ಲೂ ಹಿರಿಯರು ಇರಬೇಕು, ಅವರನ್ನು ಗೌರವಿಸಬೇಕು. ಈ ವಿಚಾರವನ್ನು ಈ ಪುಸ್ತಕದಲ್ಲಿ ಅತ್ಯಂತ ವಿಷದವಾಗಿ ತಿಳಿಸಿದ್ದು ತಿಳಿಯಬೇಕಾದ ವಿಚಾರವಿದೆ ಎಂದರು.
ಲೇಖಕಿ ಡಾ. ವಿನಯ ಶ್ರೀನಿವಾಸ್ ಮಾತನಾಡಿ, ಅಂಬೆಗಾಲಿಡುತ್ತಾ ಆರಂಭವಾದ ನನ್ನ ಬರಹ ಈಗ 3 ಪುಸ್ತಕಗಳನ್ನು ಬರೆದು, ಓದುಗರಿಗೆ ನೀಡುವ ಹಂತಕ್ಕೆ ಬೆಳೆಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ನನ್ನ ವೃತ್ತಿ ಜೀವನದಲ್ಲಿ ಕಂಡ, ಸಾಮಾನ್ಯ ಜನರಲ್ಲಿ ಕಂಡ ವಿಚಾರಗಳೇ ನನ್ನ ಬರಹಕ್ಕೆ ಪೂರಕವಾಗಿದೆ. ನಾನು ಕಲಿತುಕೊಂಡ ವಿಚಾರಗಳನ್ನು ಅಕ್ಷರ ರೂಪಕ್ಕೆ ಇಳಿಸಿದ್ದೇನೆ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಬರಹಗಾರರ ಒಡನಾಟ ಹೆಚ್ಚಾದ ನಂತರ ನನ್ನ ಬರಹಗಳನ್ನು ಪುಸ್ತಕ ರೂಪದಲ್ಲಿ ಹೊರತರುವ ಚಿಂತನೆ ಮಾಡಿ, ಅದು ಇಂದು ಸಾಕಾರಗೊಂಡಿದೆ ಎಂದರು.
ಸುಬ್ಬಯ್ಯ ವೈದ್ಯಕೀಯ ಕಾಲೇಜು ಹಾಗೂ ಸುಬ್ಬಯ್ಯ ಲಿಟರರಿ ಕ್ಲಬ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವೈದ್ಯಕೀಯ ಕಾಲೇಜು ಪ್ರಾಂಶುಪಾಲರಾದ ಡಾ.ಸಿ.ಎಂ. ಸಿದ್ದಲಿಂಗಪ್ಪ, ದಂತ ವೈದ್ಯಕೀಯ ಕಾಲೇಜು ಪ್ರಾಂಶುಪಾಲರಾದ ಡಾ.ಬಿ.ಎಸ್. ಸುರೇಶ್, ನರ್ಸಿಂಗ್ ಕಾಲೇಜು ಪ್ರಾಂಶುಪಾಲರಾದ ಡಾ.ವನಮಾಲ ಸತೀಶ್, ಎಂಎಸ್ ಡಾ. ವಿನಾಯಕ್, ಡೀನ್ ನಂದಕಿಶೋರ್ ಲಾಹೋಟೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















