ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಒಂದು ರಂಗ ಪ್ರಯೋಗ ಪ್ರೇಕ್ಷಕನನ್ನು ತಲುಪಬೇಕಾದರೆ, ಅದರ ಪರಿಣಾಮಕಾರಿಯಾದ ನಿರ್ವಹಣೆ ಅಗತ್ಯ ಅನಿವಾರ್ಯ. ಈ ಬೆಳಕಿನ ತಂತ್ರಜ್ಞ ತಾನು ಕತ್ತಲಲ್ಲಿದ್ದರೂ, ಕಲಾವಿದನಿಗೆ ಪೂರಕವಾದ ಬೆಳಕು ನೀಡುತ್ತಾನೆ. ಇದು ತಾತ್ವಿಕ ಒಂದು ಬಹುದೊಡ್ಡ ರೂಪಕ ಎಂದು ಹೆಸರಾಂತ ರಂಗ ನಿರ್ದೇಶನಕ ಡಾ. ಶ್ರೀಪಾದ ಭಟ್ ಹೇಳಿದರು.
ಕರ್ನಾಟಕ ನಾಟಕ ಅಕಾಡೆಮಿ, ನಗರದ ಕಲಾವಿದರು ಹಾಗೂ ಶಿವಮೊಗ್ಗ ರಂಗ ತಂಡಗಳ ಕಲಾವಿದರ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ಬೆಳಕಿನ ನಿರ್ವಹಣೆ ಕುರಿತ ಎರಡು ದಿನಗಳ ಕಾರ್ಯಾಗಾರನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾಟಕಗಳಲ್ಲಿ ಬೆಳಕು ಕೇವಲ ಬೆಳಕಲ್ಲ, ಅದೊಂದು ತೀವ್ರತರವಾದ ಭಾವಾಭಿವ್ಯಕ್ತಿ ಎಂದರು.
ಒಂದು ನಾಟಕ ಪರಿಣಾಮಕಾರಿಯಾಗಬೇಕಾದರೆ ಅಥವಾ ರಂಗ ನಟ, ತನ್ನ ಪಾತ್ರದ ಮೂಲಕ ಪೇಕ್ಷಕನೊಂದಿಗೆ ಸಂವಹನ ಸಾಧಿಸಬೇಕಾದರೆ, ಬೆಳಕು ಅತ್ಯಂತ ಮಹತ್ವದ ಪಾತ್ರ ನಿರ್ವಹಿಸುತ್ತದೆ ಎಂದ ಅವರು, ಇಡೀ ನಾಟಕ ಬೆಳಕಿನೊಂದಿಗೇ ಸಾಗುವುದರಿಂದ ಇದರ ನಿರ್ವಹಣೆ ಅತ್ಯಂತ ಜವಾಬ್ದಾರಿಯುತವಾದದ್ದು ಎಂದು ಅರ್ಥೈಸಿದರು.
ಯಾವುದೇ ಪ್ರಯೋಗವಾಗಲೀ ಅದು ಅಷ್ಟಾಂಗ ಯೋಗದ ಆಧಾರದಲ್ಲಿಯೇ ಅನಾವರಣಗೊಳ್ಳುತ್ತದೆ. ಹಾಗೆಯೇ ನಡೆಯಬೇಕು ಕೂಡಾ. ಕೃತಿ ಕಥೆ, ನಿರೂಪಣೆ, ನಿರ್ದೇಶನ, ಅಭಿನಯ, ತಂತ್ರವಿನ್ಯಾಸ, ಪ್ರೇಕ್ಷಕ, ವಿಮರ್ಶಕ ಹೀಗೆ ಎಲ್ಲವೂ ಪೂರಕವಾಗಿಯೇ ನಿರೂಪಿತವಾಗಬೇಕು. ನಾಟಕವನ್ನು ಮಾಡುವುದಲ್ಲ. ಅದು ಸಮಷ್ಟಿ ಪ್ರಯತ್ನದಿಂದ ರೂಪುಗೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಹಿರಿಯ ಪತ್ರಕರ್ತ, ರಂಗಕರ್ಮಿ ವೈದ್ಯ ಮಾತನಾಡಿ, ಯಾವುದೇ ಪ್ರಯೋಗವಿರಲಿ, ಅಲ್ಲಿ ಬೆಳಕು ಕೂಡಾ ಒಂದು ಪಾತ್ರವಾಗಬೇಕು. ಹೇಗೆ ಮೌನವೂ ಒಂದು ಸಂಗೀತವೋ, ಹಾಗೆಯೇ ಕತ್ತಲು ಕೂಡಾ ಒಂದು ಬೆಳಕು. ಈ ನೆರಳು ಬೆಳಕಿನ ಆಟದಲ್ಲಿ ಇಡೀ ನಾಟಕ ಹಾಗೂ ಪಾತ್ರಧಾರಿಗಳು ಬೆಳೆಯುತ್ತಾ ಹೋಗುತ್ತಾರೆ. ಹೀಗಾಗಿ ಒಂದು ನಾಟಕದ ಯಶಸ್ಸಿನ ಹಿಂದೆ ಬೆಳಕಿನ ಪಾತ್ರ ಅತ್ಯಂತ ಮಹತ್ವದ್ದು ಎಂದು ವಿವರಿಸಿದರು.
ತಮ್ಮದೇ ನಿರ್ದೇಶನದ ಅಂಧಯುಗ ನಾಟಕದಲ್ಲಿ ಬೆಳಕಿನ ನಿರ್ವಹಣೆ ನಡೆಸಿದ ಭೀಮೇಶ್ ಅವರ ಕಾರ್ಯ ತತ್ಪರತೆಯನ್ನು ಮುಕ್ತ ಕಂಠದಿಂದ ಪ್ರಶಂಶಿಸಿದ ಅವರು, ಬೆಳಕಿನ ವಿನ್ಯಾಸಗಾರನಿಗೆ ತಾಳ್ಮೆಯ ಜೊತೆಯಲ್ಲಿಯೇ ಸಮಯ ಪ್ರe ಕೂಡಾ ಅತ್ಯಂತ ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್. ಉಮೇಶ್, ಬೆಳಕಿನ ವಿನ್ಯಾಸಗಾರರಾದ ಭೀಮೇಶ್ ನೀನಾಸಂ, ಮಂಜುನಾಥ ಹಿರೇಮಠ ಉಪಸ್ಥಿತರಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ರಾಚಪ್ಪ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು.
ಕಲಾವಿದರು(ರಿ)ನ ಅಧ್ಯಕ್ಷ, ರಂಗ ಕರ್ಮಿ ಕೊಟ್ರಪ್ಪ ಹಿರೇಮಾಗಡಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಲವ ವಂದನಾರ್ಪಣೆ ಮಾಡಿದರು. ಸಹ್ಯಾದ್ರಿ ಕಲಾ ಕಾಲೇಜಿನ ರಂಗ ಗೀತೆ ಕಲಿಕಾ ಕಾರ್ಯಾಗಾರದ ಶಿಬಿರಾರ್ಥಿಗಳು ರಂಗ ಗೀತೆಗಳನ್ನು ಹಾಡಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post