ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಧು ಬಂಗಾರಪ್ಪ ಕಾಂಗ್ರೆಸ್‌ಗೆ ಬರ್ತಾರಾ..? ಇಡೀ ಜಿಲ್ಲೆಯಲ್ಲೂ ಇದೇ ಸುದ್ದಿ ಹರಿದಾಡ್ತಾ ಇದೆ. ಬೃಹತ್ ಸಮಾವೇಶದಲ್ಲಿ ಕಾಂಗ್ರೆಸ್ ಸೇರಿಕೊಳ್ಳುತ್ತಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಅದಕ್ಕೆ ಪೂರಕವಾಗುವಂತೆ ಜಿಲ್ಲಾ ಪಂಚಾಯ್ತಿ ಚುನಾವಣೆಯ ಒಳಗೆ ದೃಢ ನಿರ್ಧಾರ ತೆಗೆದುಕೊಳ್ಳುವುದಾಗಿ ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ಹೇಳಿದ್ದಾರೆ.
ನಗರದ ಕಲ್ಲಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಬೆಂಬಲಿಗರು, ಅಭಿಮಾನಿಗಳ ನಡುವೆ ಹುಟ್ಟುಹಬ್ಬ ಆಚರಿಸಿಕೊಂಡು, ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.

ಕೇಕ್ ಕಟ್ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡಿದ ಅವರು, ಈ ಬರ್ತ್‌ಡೇಯಿಂದಲೇ ಬದಲಾವಣೆಯಾಗಲಿದೆ. ಇಲ್ಲಿಯೇ ಆ ದೃಢ ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.
ಹುಟ್ಟುಹಬ್ಬದ ವೇಳೆ ಕಾಂಗ್ರೆಸ್ ನಾಯಕರೇ ಶುಭ ಕೋರಲು ಆಗಮಿಸಿದ್ದು ವಿಶೇಷವಾಗಿತ್ತು. ಈ ಬಗ್ಗೆ ಪತ್ರಕರ್ತರು ಕಾಂಗ್ರೆಸ್ ಸೇರುತ್ತೀರಾ ಎಂದು ಪ್ರಶ್ನೆ ಕೇಳಿದ್ದಕ್ಕೆ ಈ ದಿನ ನಾನು ಸುಳ್ಳು ಹೇಳೋದಿಲ್ಲ. ಜಿಲ್ಲಾ ಪಂಚಾಯ್ತಿ ಚುನಾವಣೆಯ ಒಳಗೆ ನನ್ನ ನಿರ್ಧಾರ ಪ್ರಕಟಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಜೆಡಿಎಸ್ ಬಿಡ್ತೀರಾ ಅನ್ನೋ ಪ್ರಶ್ನೆಗೆ ನಾನು ಇನ್ನೂ ಜೆಡಿಎಸ್‌ನಲ್ಲಿಯೇ ಇದ್ದೇನೆ. ಪಕ್ಷದಲ್ಲಿ ಕೆಲ ಗೊಂದಲಗಳು ಇವೆ. ಕುಮಾರಣ್ಣವರೇ ನನ್ನನ್ನು ಬೆಳೆಸಿದವರು. ರಾಜ್ಯಾದ್ಯಂತ ಪಕ್ಷಕ್ಕಾಗಿ ಓಡಾಡುವಂತೆ ಮಾಡಿದ್ದಾರೆ. ಇದುವರೆಗೂ ಅವರ ಬಳಿ ಯಾವ ಚರ್ಚೆಯನ್ನೂ ಮಾಡಿಲ್ಲ. ಚರ್ಚೆ ಮಾಡಿ, ಹಿತೈಷಿಗಳು, ಕಾರ್ಯಕರ್ತರು ಏನ್ ಹೇಳುತ್ತಾರೋ ಅದರ ಆಧಾರದ ಮೇಲೆ ಶೀಘ್ರದಲ್ಲಿಯೇ ದೃಢ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ವಿವರಿಸಿದರು.
ಚುನಾವಣೆ ಬಂದಾಗ ಪಕ್ಷ ಬದಲಾವಣೆ ಮಾಡೋದು ತಪ್ಪು, ಅದಕ್ಕೂ ಮುಂಚೆಯೇ ನನ್ನ ನಿರ್ಧಾರ ಪ್ರಕಟಿಸುತ್ತೇನೆ. ಈ ಬರ್ತ್‌ಡೇ. ಬದಲಾವಣೆಯ ಬರ್ತ್‌ಡೇ ಅಂತ ಹೇಳುವ ಮೂಲಕ ಹೊಸ ಸುಳಿವನ್ನು ಮಧು ಬಂಗಾಪ್ಪ ನೀಡಿದರು. ಮಾರ್ಚ್ ೨೦ರಿಂದ ರೈತ ಹೋರಾಟದಲ್ಲಿ ಪಾಲ್ಗೊಳ್ಳುತ್ತೇನೆ. ಈ ಹಿಂದೆಯೂ ರೈತರಿಗಾಗಿ ಹೋರಾಟ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news















