ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪದವಿ ಸಮಾಜದಲ್ಲಿ ನಮ್ಮ ಬೆಳವಣಿಗೆಯ ದಾರಿ ದೀಪವಾಗಬೇಕಿದ್ದು, ಬಹುಮುಖಿ ವ್ಯಕ್ತಿತ್ವದ ಪದವೀಧರರಾಗಿ ಎಂದು ತಹಶಿಲ್ದಾರರಾದ ಬಿ.ಎನ್. ಗಿರೀಶ್ ಅಭಿಪ್ರಾಯಪಟ್ಟರು.
ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ವತಿಯಿಂದ ಮಂಗಳವಾರ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಅಂತಿಮ ವರ್ಷದ ಬಿಕಾಂ, ಬಿಬಿಎ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಗ್ರಾಜುಯಂಡ್ಸ್ ಡೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೀತಿ, ತತ್ವ ಪ್ರಾಮಾಣಿಕತೆ ಎಂಬುದು ಪ್ರತಿಜ್ಞಾ ವಿಧಿಗೆ ಸೀಮಿತವಾಗದಿರಲಿ. ಪದವಿಯ ನಂತರವೇ ಬದುಕಿನ ನಿಜವಾದ ವಾಸ್ತವಾಂಶ ತಿಳಿಯಲಿದ್ದು, ಪ್ರಾಮಾಣಿಕತೆ ಎಂಬುದು ಬದುಕಿನುದ್ದಕ್ಕೂ ಕಾಪಾಡಿಕೊಳ್ಳಿ ಎಂದು ತಿಳಿ ಹೇಳಿದರು.
ಅನಕ್ಷರಸ್ಥರಿಗೆ ಇರುವ ಆತ್ಮವಿಶ್ವಾಸ ಪದವೀಧರರಿಗಿಲ್ಲ. ಸಣ್ಣ ಸೋಲುಗಳಿಂದ ಹೊರಬರಲು ಆತ್ಮಹತ್ಯೆಯಂತಹ ಆಲೋಚನೆ ಮಾಡುತ್ತಿರುವುದು ಬೇಸರದ ಸಂಗತಿ. ಸಾವು ಸಮಾಜದಲ್ಲಿ ನಾವು ಪೂರೈಸಿದ ಪ್ರತಿಯೊಂದು ಜವಬ್ದಾರಿಗಳ ಸಾರ್ಥಕತೆಯ ಕ್ಷಣವಾಗಿರಬೇಕೆ ವಿನಃ ಬಲವಂತದ ಅತ್ಮಹತ್ಯೆ ಆಗಬಾರದು.
Also read: ಬಾಂಗ್ಲಾ | ಶೇಖ್ ಹಸೀನಾ ಸೀರೆ, ಒಳಉಡುಪು ಸೇರಿ ಸಿಕ್ಕಸಿಕ್ಕ ವಸ್ತು ದೋಚಿದ ಪ್ರತಿಭಟನಾಕಾರರು
ಇಂದು ಅನೇಕ ಪದವಿಗಳನ್ನು ಪಡೆದ ಯುವಕರು ರೈತಾಪಿಯಿಂದ ನೆಮ್ಮದಿ ಕಂಡುಕೊಂಡಿದ್ದಾರೆ. ಅಂತಹವರಿಂದ ಪ್ರೇರಣೆ ಪಡೆಯಿರಿ. ಲಕ್ಷ ರೂಪಾಯಿ ಸಂಬಳ ಸಂತೋಷ ನೀಡುವುದಿಲ್ಲ. ನಮ್ಮ ಸಂಸ್ಕೃತಿ ಸಂಸ್ಕಾರಗಳ ಮೇಲೆ ನಂಬಿಕೆ ಇಡಿ, ಅದು ಸದಾ ನಮ್ಮ ಕೈ ಹಿಡಿಯಲಿದೆ ಎಂದು ಹೇಳಿದರು.
ಖ್ಯಾತ ವೈದ್ಯೆ ಡಾ. ರಕ್ಷಾರಾವ್ ಮಾತನಾಡಿ, ಗ್ರಾಜುಯೇಷನ್ ದಿನ ಎಂಬುದು ವಿದ್ಯಾರ್ಥಿ ಜೀವನದ ಸಾರ್ಥಕತೆಯ ಸಂದರ್ಭ. ಪದವಿಯೊಂದಿಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳಿ. ಅದು ನಾವು ಮಾಡುವ ದೇಶ ಸೇವೆ ಎಂಬುದನ್ನು ಅರಿಯಿರಿ. ಜೀವನ ಪಥದಲ್ಲಿ ಯಶಸ್ಸಿಗೆ ಐಕ್ಯೂ, ಇಕ್ಯೂ ಜೊತೆಗೆ ಪರಿಸ್ಥಿತಿಗಳ ನಿರ್ವಹಣಾ ಕೌಶಲ್ಯವು ನಿಮ್ಮದಾಗಲಿ ಎಂದು ಹಾರೈಸಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ ಗ್ರಾಜುಯಂಡ್ಸ್ ದಿನದ ಪ್ರಸ್ತಾವನೆ ಮಂಡಿಸಿದರು.
ಪ್ರಾಂಶುಪಾಲೆ ಪ್ರೊ.ಪಿ.ಆರ್.ಮಮತ ವಿದ್ಯಾರ್ಥಿಗಳಿಗೆ ಪ್ರತಿಜ್ಞೆ ವಿಧಿ ಬೋಧಿಸಿದರು. ವೇದಿಕೆಯಲ್ಲಿ ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಕೆ.ಎಂ.ನಾಗರಾಜು, ವಾಣಿಜ್ಯ ವಿಭಾಗದ ನಿರ್ದೇಶಕ ಮಂಜುನಾಥ. ಎನ್, ನಿರ್ವಹಣಾ ವಿಭಾಗದ ನಿರ್ದೇಶಕ ಶ್ರೀಲಲಿತ.ಎಂ.ಕೆ, ನಿವೃತ್ತ ಪ್ರಾಧ್ಯಾಪಕ ಜಗದೀಶ್.ಎಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post