ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೊಗ ಖಾತ್ರಿ ಯೋಜನೆಗೆ ಕೇಂದ್ರ ಸರ್ಕಾರ ದುರುದ್ದೇಶ ಪೂರ್ವಕವಾಗಿ ಹೆಸರು ಬದಲಾಯಿಸಿ, ಅದಕ್ಕೆ ರಾಮನ ಹೆಸರು ಜೋಡಿಸುವ ಮೂಲಕ ಅನಗತ್ಯ ಗೊಂದಲ ಸೃಷ್ಟಿಮಾಡಿದೆ ಎಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಆರೋಪಿಸಿದ್ದಾರೆ.
ಅವರು ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ರಾಮನೇ ಇಲ್ಲದ ಹೆಸರಲ್ಲಿ ರಾಜಕೀಯಗೋಸ್ಕರ ರಾಮನನ್ನು ಸೇರಿಸಲಾಗಿದೆ. ವಿಬಿಜಿ ರಾಮ್-ಜಿ ಹೆಸರಲ್ಲಿ ರಾಮ ಎಲ್ಲಿದ್ದಾನೆ ? ಯೋಜನೆಯ ಪೂರ್ಣ ಹೆಸರಲ್ಲಿ ರಾಮನೇ ಇಲ್ಲ. ಅದಾಗ್ಯೂ ಕೂಡ ರಾಮನ ಹೆಸರಿಗೇಕೆ ಕಾಂಗ್ರೆಸ್ಸಿಗರ ವಿರೋಧ ಎಂದು ಬಿಜೆಪಿ ಶಾಸಕರೊಬ್ಬರು ಪ್ರಶ್ನಿಸುತ್ತಾರೆ. ಈಗ ರಾಮ, ಮುಂದೆ ಕೃಷ್ಣನನ್ನು ತರುತ್ತೇವೆ ಎನ್ನುತ್ತಾರೆ. ಇಂತಹ ಗೊಂದಲ ಸೃಷ್ಟಿಸುವ ಹೇಳಿಕೆಗಳನ್ನು ಬಿಜೆಪಿ ನಾಯಕರು ನಿಲ್ಲಿಸಬೇಕೆಂದು ಕಿವಿಮಾತು ಹೇಳಿದರು.
ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಗ್ರಾಮೀಣ ಜನರಿಗೆ ಉದ್ಯೋಗದ ಖಾತರಿ ನೀಡಿತ್ತು. ಗ್ರಾಮ ಪಂಚಾಯಿತಿಗಳಿಗೂ ಬಲಪಡಿಸುವ ಯೋಜನೆಯಾಗಿತ್ತು. ಗಾಂಧಿ ಕಂಡಿದ್ದ ಗ್ರಾಮ ರಾಜ್ಯದ ಕನಸು ನನಸಾಗಿಯೂ ನಿಟ್ಟಿನಲ್ಲಿ ಮಹತ್ವದ ಯೋಜನೆಯಾಗಿತ್ತು. ಆದರೆ ಈಗ ಉದ್ಯೋಗ ಖಾತರಿ ಯೋಜನೆಯ ಮೂಲ ಸ್ವರೂಪವನ್ನೇ ಬದಲಾಯಿಸಿ ಗ್ರಾಮ ಪಂಚಾಯಿತಿಗಳ ಅಧಿಕಾರ ಕಿತ್ತುಕೊಳ್ಳಲಾಗಿದೆ. ವಿಕೇಂದ್ರಿಕರಣ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಹುನ್ನಾರ ನಡೆದಿದೆ ಎಂದು ದೂರಿದರು.
ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಈ ಹಿಂದೆ ಕೇಂದ್ರ ಸರ್ಕಾರವೇ ಶೇ.100ರಷ್ಟು ಅನುದಾನ ನೀಡುತ್ತಿತ್ತು. ಯುಪಿಎ ಸರ್ಕಾರ ಇದ್ದಾಗ ಆದೇ ರೀತಿ ನಡೆದುಕೊಂಡು ಬಂದಿತು. ಈಗ ಕೇಂದ್ರದ ಬಿಜೆಪಿ ಸರ್ಕಾರ, ಈ ಯೋಜನೆಗೆ ಪೂರ್ಣ ಪ್ರಮಾಣದ ಅನುದಾನ ಹಾಕಲಾಗದೆ ತನ್ನ ಪಾಲು ಶೇ60, ರಾಜ್ಯದ ಪಾಲು ಶೇ.40ರ ಅನುಪಾತದಲ್ಲಿ ಯೋಜನೆ ಜಾರಿಗೆ ಕಾಯ್ದೆ ತಂದಿದೆ. ಆದರೆ ಈ ಯೋಜನೆಯ ಸಂಪೂರ್ಣ ನಿಯಂತ್ರಣದ ಅಧಿಕಾರ ಕೇಂದ್ರ ಸರ್ಕಾರದ್ದೇ ಆಗಿದೆ. ಇದು ಯಾಕೆ ? ಪೂರ್ಣ ಪ್ರಮಾಣದಲ್ಲಿ ತಾನೇಕೆ ಹಣ ಹಾಕಬೇಕೆನ್ನುವ ತಾರತಮ್ಯದ ಧೋರಣೆಯಿಂದಲೇ ಈ ರೀತಿಮಾಡಿದೆ ಎಂದು ಆರೋಪಿಸಿದರು.
ಮಹಾತ್ಮ ಗಾಂಧಿಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಭಾರೀ ಭ್ತಷ್ಟಚಾರ ನಡೆದಿದೆ. ಕೆಲಸ ಮಾಡದಿದ್ದರೂ ಹಾಜರಾತಿ ತೋರಿಸಿ ಹಣ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಕೋಟ್ಯಂತರ ರೂ. ಬಾಕಿ ಉಳಿಸಿಕೊಂಡಿದೆ ಎನ್ನುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕಳೆದ 11 ವರ್ಷಗಳಿಂದ ಕೇಂದ್ರದಲ್ಲಿ, ಈ ಹಿಂದೆ ರಾಜ್ಯದಲ್ಲಿ ಅವರದೇ ಸರ್ಕಾರ ಇತ್ತಲ್ಲವೇ ಆಗಲೇ ಭ್ರಷ್ಟಚಾರ ನಡೆದಿದೆ ಎಂದ ಮೇಲೆ ಅದಕ್ಕೆ ಯಾರು ಹೊಣೆ ? ಆಗ ಆವರಿಗೆ ಇದು ಗೊತ್ತಿರಲಿಲ್ಲವೇ ಎಂದು ಕಿಡಿಕಾರಿದರು.
ಯೋಜನೆಯ ಅನುಷ್ಟಾನವು ಇದುವರೆಗೂ ಗ್ರಾಮ ಪಂಚಾಯಿತಿಗಳ ಮೂಲಕವೇ ಆಗುತ್ತಿತ್ತು. ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂದರ್ಭಕ್ಕನುಸಾರ ಜನರಿಗೆ ಕೆಲಸಗಳನ್ನು ಕೊಡುವ ಕೆಲಸ ಆಗುತ್ತಿತ್ತು. ಆದರೆ ಈಗ 6 ತಿಂಗಳ ಮೊದಲೇ ಯೋಜನಾ ವರದಿ ನೀಡಿ, ಆಮೇಲ ಅನುಮತಿ ಪಡೆಯಬೇಕು. ಅಲ್ಲದೆ ಅನುದಾನಕ್ಕೆ ಕಾಯಬೇಕು. ಅಷ್ಟು ಮಾತ್ರವಲ್ಲದೆ ಜನರಿಗೆ ಸಿಗುತ್ತಿದ್ದ ಮಾನವ ದಿನಗೂಲಿಯ ಸಂಖ್ಯೆಯೂ ಕಡಿಮೆ ಆಗಿದೆ. ಇದನ್ನು ಯಾಕಾಗಿ ಮಾಡಿದ್ದೀರಿ ಎಂದು ಪ್ರಶ್ನಿಸಿದ ಆಯನೂರು ಮಂಜುನಾಥ ಅವರು, ವಿಬಿಜಿ ರಾಮ್ ಯೋಜನೆ ರದ್ದಾಗಬೇಕು, ಹಿಂದಿನ ಮಹಾತ್ಮ ಗಾಂಧಿ ಗ್ರಾಮೀ ಉದ್ಯೋಗ ಖಾತರಿ ಯೋಜನೆ ಜಾರಿಗೆ ಬರಬೇಕೆಂದು ಅವರು ಒತ್ತಾಯಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಚೇತನ್‍ಗೌಡ, ಮುಖಂಡರಾದ ಕಲಗೋಡು ರತ್ನಾಕರ್, ಎಸ್.ಕೆ.ಮರಿಯಪ್ಪ, ಪುಷ್ಪಾ ಶಿವಕುಮಾರ್, ವೈ.ಹೆಚ್. ನಾಗರಾಜ್, ಶ್ವೇತಾಬಂಡಿ, ಹರ್ಷಿತ್‍ಗೌಡ, ಧೀರರಾಜ್ ಹೊನ್ನವಿಲೆ, ಜಿ.ಡಿ.ಮಂಜುನಾಥ್, ರಾಘವೇಂದ್ರ, ಶಿವಣ್ಣ, ಹಾಲಪ್ಪ, ರಮೇಶ್‍ಶಂಕರಘಟ್ಟ, ವಿಜಯಕುಮಾರ್, ಶಿವಾನಂದ, ಮಂಜುನಾಥ್‍ಬಾಬು ಮತ್ತಿತರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















