ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರದಲ್ಲಿ ಫೆ. 25 ರಿಂದ 29ರವರೆಗೆ ಕೋಟೆ ಶ್ರೀ ಮಾರಿಕಾಂಬ ಜಾತ್ರೆ ಅಂಗವಾಗಿ ರಾಜಬೀದಿ ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪೂಜೆ/ಹರಕೆ/ಪ್ರಸಾದ ವಿನಿಯೋಗ, ರಾಜ್ಯ ಮಟ್ಟದ ಬಯಲು ಕುಸ್ತಿ ನಡೆಯಲಿದ್ದು, ಸದರಿ ಜಾತ್ರಾ ಮಹೋತ್ಸವದಲ್ಲಿ ಪ್ರತಿದಿನ ಹತ್ತು ಸಾವಿರದಿಂದ 15 ಸಾವಿರ ಜನರ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ನಗರದ ಗಾಂಧಿ ಬಜಾರ್ ಮತ್ತು ಕೋಟೆ ಮಾರಿಕಾಂಬ ದೇವಸ್ಥಾನದ ಸುತ್ತ ಹಾಗೂ ಎಸ್’ಪಿಎಂ ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಫೆ.25 ರಿಂದ 29ರವರೆಗೆ 5 ದಿನಗಳು ವಾಹನಗಳ ಸಂಚಾರ ಮತ್ತು ನಿಲುಗಡೆ ನಿಷೇಧಿಸಿ ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಅಧಿಸೂಚನೆಯಲ್ಲಿ ಆದೇಶಿಸಿದ್ದಾರೆ.
ವಾಹನ ಸಂಚಾರ ಮತ್ತು ನಿಲುಗಡೆ ನಿಷೇಧಿಸಿರುವ ಮಾರ್ಗಗಳು
ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನದ ಸುತ್ತ ಇರುವ ಎಲ್ಲಾ ರಸ್ತೆಯ 500 ಮೀಟರ್ ವ್ಯಾಪ್ತಿಯಲ್ಲಿ ಎಲ್ಲಾ ವಾಹನಗಳ ಸಂಚಾರ ಮತ್ತು ನಿಲುಗಡೆ ನಿಷೇಧಿಸಿದೆ.
ಫೆ. 25 ರಂದು ಬೆಳಗ್ಗೆ 3.00 ಗಂಟೆಯಿಂದ ರಾತ್ರಿ 11.00 ರವರೆಗೆ ಬಿಬಿ ಸ್ಟ್ರೀಟ್‌ನಿಂದ ರಾಮಣ್ಣ ಶ್ರೇಷ್ಠಿ ಪಾರ್ಕ್‌ವರೆಗೆ ಎಲ್ಲಾ ವಾಹನಗಳ ಸಂಚಾರ ಮತ್ತು ನಿಲುಗಡೆ ನಿಷೇಧಿಸಿದೆ. ನಗರದ ಗಾಂಧಿಬಜಾರ್ ಮತ್ತು ಕೋಟೆ ಶ್ರೀಮಾರಿಕಾಂಬ ದೇವಸ್ಥಾನದ ಸುತ್ತ ಹಾಗೂ ಎಸ್’ಪಿಎಂ ರಸ್ತೆಯಲ್ಲಿ ಎಲ್ಲಾ ವಾಹನಗಳ ಸಂಚಾರ ಮತ್ತು ನಿಲುಗಡೆ ನಿಷೇಧಿಸಿದೆ.
ವಾಹನ ಸಂಚಾರಕ್ಕೆ ಮಾರ್ಗ ಬದಲಾವಣೆ
ಬೆಂಗಳೂರು, ಭದ್ರಾವತಿ, ಎನ್’ಆರ್ ಪುರ ಕಡೆಗಳಿಂದ ಬರುವ ಎಲ್ಲಾ ಭಾರಿ ವಾಹನಗಳು ಮತ್ತು ಬಸ್’ಗಳು ಬೈಪಾಸ್ ರಸ್ತೆ ಮುಖಾಂತರ ಹೋಗುವುದು.
ಚಿತ್ರದುರ್ಗ, ಹೊಳೆಹೊನ್ನೂರಿನಿಂದ ಬರುವ ಎಲ್ಲಾ ಭಾರಿ ವಾಹನ, ಬಸ್‌ಗಳು, ಎಂಆರ್’ಎಸ್ ಸರ್ಕಲ್ ಮಾರ್ಗವಾಗಿ ಬೈಪಾಸ್ ರಸ್ತೆ ಮುಖಾಂತರ ಹೋಗುವುದು.
ಹೊನ್ನಾಳಿ, ದಾವಣಗೆರೆಯಿಂದ ಬರುವ ಎಲ್ಲಾ ಭಾರಿ ವಾಹನ, ಬಸ್‌ಗಳು, ಎಂಆರ್’ಎಸ್ ಸರ್ಕಲ್ ಮಾರ್ಗವಾಗಿ ಬೈಪಾಸ್ ರಸ್ತೆ ಮುಖಾಂತರ ಹೋಗುವುದು.
ಶಿಕಾರಿಪುರ, ಸವಳಂಗದಿಂದ ಬರುವ ಎಲ್ಲಾ ಭಾರಿ ವಾಹನ, ಬಸ್’ಗಳು, ಉಷಾ ನರ್ಸಿಂಗ್ ಹೋಂ, ಲಕ್ಷ್ಮೀ ಟಾಕೀಸ್, ಪೊಲೀಸ್ ಚೌಕಿ, ಆಲ್ಕೊಳ ಮುಖಾಂತರ ಸಾಗರ ರಸ್ತೆಯಲ್ಲಿ ಸಾಗುವುದು.
ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಹೊನ್ನಾಳಿ, ಶಿಕಾರಿಪುರ, ಸೊರಬ, ಹರಿಹರ, ದಾವಣಗೆರೆ ಹೋಗುವ ಎಲ್ಲಾ ಭಾರಿ ಸರಕು ವಾಹನಗಳು, ಬಸ್‌ಗಳು, ಸಾಗರ ರಸ್ತೆ ಮುಖಾಂತರ ಹೆಲಿಪ್ಯಾಡ್ ಸರ್ಕಲ್, ಆಲ್ಕೋಳ ಸರ್ಕಲ್, ಪೊಲೀಸ್ ಚೌಕಿ, ಉಷಾ ನರ್ಸಿಂಗ್ ಹೋಂ, ಸವಳಂಗ ರಸ್ತೆ ಮಾರ್ಗವಾಗಿ ಹೋಗುವುದು.
ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಬೆಂಗಳೂರು, ಭದ್ರಾವತಿ ಕಡೆಗೆ ಹೋಗುವ ಎಲ್ಲಾ ವಾಹನಗಳು ಬೈಪಾಸ್ ಮುಖಾಂತರ ಎಂಆರ್’ಎಸ್ ಸರ್ಕಲ್ ಕಡೆಗೆ ಹೋಗುವುದು.
ಈ ಎಲ್ಲಾ ಮಾರ್ಗ ಬದಲಾವಣೆಗಳು ಪೊಲೀಸ್ ವಾಹನಗಳು, ಅತೀಗಣ್ಯ ವ್ಯಕ್ತಿಗಳ ವಾಹನಗಳು, ಆಂಬ್ಯುಲನ್ಸ್ ಹಾಗೂ ಮೂಲಭೂತ ಸೌಕರ್ಯ ಒದಗಿಸುವ ವಾಹನಗಳನ್ನು ಅನುಕೂಲಕ್ಕೆ ತಕ್ಕಂತೆ ಹೊರತುಪಡಿಸಿದೆ.
ಸಾರ್ವಜನಿಕರು ಈ ತಾತ್ಕಾಲಿಕ ಮಾರ್ಗ ಬದಲಾವಣೆಯನ್ನು ಅನುಸರಿಸಿ ಸಹಕರಿಸುವಂತೆ ಜಿಲ್ಲಾಧಿಕಾರಿಗಳು ಅಧಿಸೂಚನೆಯಲ್ಲಿ ಸೂಚಿಸಿರುತ್ತಾರೆ.
Get in Touch With Us info@kalpa.news Whatsapp: 9481252093
Discussion about this post