ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯುಗಾದಿಯಂದು ಮಾವು,ಬೇವು, ಹೊಂಗೆಯ ಚಿಗುರು ಪರಿಸರವನ್ನು ಹಸಿರು ಮಾಡಿ ಹೊಸ ಚೈತನ್ಯ ತುಂಬುವಂತೆ ಕಾಂತೇಶ್ ಅವರ ಹುಟ್ಟು ಹಬ್ಬ ಯುಗಾದಿಯಂದು ಬರುವುದರಿಂದ ಅವರು ಕೂಡ ಹೊಸ ಚೈತನ್ಯದಿಂದ ಸಾಮಾಜಿಕ ಸೇವೆ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡುವಂತಾಗಲಿ. ಅವರ ಇಡೀ ಕುಟುಂಬ ಸಮಾಜಮುಖಿಯಾಗಿ ಧಾರ್ಮಿಕವಾಗಿ, ಸೇವಾಕಾರ್ಯ ಮಾಡಿಕೊಂಡು ಬಂದಿದ್ದು, ಅವರಿಗೆ ಇನ್ನು ಹೆಚ್ಚಿನ ಯಶಸ್ಸು ಸಿಗಲಿ ಎಂದು ಚಿತ್ರದುರ್ಗ ಮಠದ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿಗಳು ಹೇಳಿದ್ದಾರೆ.
ಅವರು ಇಂದು ನಗರದ ಗುರುಪುರದ ನಂಜುಂಡೇಶ್ವರ ಸಭಾಂಗಣದಲ್ಲಿ ಕೆ.ಈ.ಕಾಂತೇಶ್ ಅವರ 43ನೇ ಹುಟ್ಟು ಹಬ್ಬದ ಅಂಗವಾಗಿ 2,500ಕ್ಕೂ ಹೆಚ್ಚು ನಿವಾಸಿಗಳಿಗೆ ಸೊಳ್ಳೆ ಪರದೆ ವಿತರಿಸುವ ಸೇವಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ, ಹುಟ್ಟಿದ ಹಬ್ಬ ಸಮಾಜ ಸೇವೆ ಮಾಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಒಂದು ಸಮಾಜಕ್ಕೆ ಮಾದರಿ ಎಂದರು.
ಜಡೆ ಮಠದ ಮಹಾಂತ ಸ್ವಾಮೀಜಿಗಳು ಮಾತನಾಡಿ, ಜನಪರ ಕಾಳಜಿಯಿಂದ ಬದುಕನ್ನು ಯಾವ ರೀತಿ ಮನುಷ್ಯ ಅರ್ಥಪೂರ್ಣವಾಗಿಸಿದ್ದಾನೆ ಎಂಬುದು ಮುಖ್ಯ. ಮನುಷ್ಯನಿಗೆ ತಿಳುವಳಿಕೆ ಬಂದ ಮೇಲೆ ಸಾರ್ಥಕತೆಗೆ ಹಲವಾರು ಅವಕಾಶ ಭಗವಂತ ಕಲ್ಪಿಸುತ್ತಾನೆ. ಆಗ ಅದನ್ನು ಸದವಕಾಶ ಎಂದು ಭಾವಿಸಿ ಸೇವೆ ಸಲ್ಲಿಸಿದಾಗ ಅದು ಭಗವಂತನಿಗೆ ಅರ್ಪಿತವಾಗುತ್ತದೆ. ದೇಹ ಭಾರವಾದಾಗ ಯೋಗ ಮಾಡಬೇಕು. ಮನಸ್ಸು ಭಾರವಾದಾಗ ಧ್ಯಾನಮಾಡಬೇಕು. ಸಂಪತ್ತು ಭಾರವಾದಾಗ ಧಾನವನ್ನು ಮಾಡು ಎಂದು ಹಿರಿಯರು ಹೇಳಿದ್ದಾರೆ. ಹುಟ್ಟು ಹಬ್ಬದ ದಿನದಂದು ಸಮಾಜ ಸೇವೆಯ ಮೂಲಕ ಸಿಕ್ಕಿದ ಅವಕಾಶವನ್ನು ಸದುಪಯೋಗ ಮಾಡಿದ್ದಾರೆ ಎಂದರು. ಧರ್ಮ ಮತ್ತು ಕೀರ್ತಿ ಮಾತ್ರ ಎರಡು ಉಳಿಯುತ್ತದೆ. ಇನ್ನೆಲ್ಲವೂ ನಶ್ವರ ಎಂದರು.
ಶಿವಮೊಗ್ಗ ಕ್ಷೇತ್ರದ ಜನತೆ ಹಾಗೂ ಬಿಜೆಪಿ ಹೈಕಮಾಂಡ್ ಕೆ.ಎಸ್.ಈಶ್ವರಪ್ಪನವರ ಕೈ ಬಿಡಲ್ಲ. ಶಿವಮೊಗ್ಗ ಕ್ಷೇತ್ರದ ಜನತೆ ನಮ್ಮ ಕುಟುಂಬದ ಸದಸ್ಯರಿದ್ದ ಹಾಗೆ. ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಇರಲಿ. ೧೯೮೯ ರಿಂದ ಆಶೀರ್ವಾದ ಮಾಡುತ್ತಾ ಬಂದಿದ್ದೀರಿ. ನನಗೀಗ ೪೩ ವರ್ಷ. ನನಗೂ ಸೇವೆಗೆ ಅವಕಾಶ ನೀಡಿ. ಸಹಬಾಳ್ವೆ ನಮ್ಮ ಆಸೆ. ಆಜಾನ್ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಪಾಲಿಸಿ ಅಂದಷ್ಟೆ ನಮ್ಮ ತಂದೆಯವರು ಹೇಳಿದ್ದು, ಹಿಂದುತ್ವವನ್ನು ಉಳಿಸುವ ಕೆಲಸ ನಮ್ಮ ಕುಟುಂಬ ಮಾಡುತ್ತಾ ಬಂದಿದೆ. ಹಿಂದೂಸ್ಥಾನದಲ್ಲಿ ಹಿಂದೂಗಳೇ ತೀರ್ಮಾನ ಮಾಡುತ್ತಾರೆ. ಅಪಪ್ರಚಾರಗಳಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ .
ಕೆ.ಈ. ಕಾಂತೇಶ್, ಮಾಜಿ ಜಿಪಂ ಸದಸ್ಯ
ಈಶ್ವರಾನಂದಪುರಿ ಶ್ರೀಗಳು ಮಾತನಾಡಿ, ಕಾಂತೇಶ್ ಅವರಿಗೆ 2018ರಲ್ಲೇ ಚುನಾವಣೆಗೆ ನಿಲ್ಲುವ ಅವಕಾಶ ಸಿಕ್ಕಿತ್ತು. ಬಳಿಕ ವಿಧಾನ ಪರಿಷತ್ತಿಗೂ ಆಯ್ಕೆಯಾಗುವ ಸಂಭವವಿತ್ತು. ಆದರೆ ಅವರ ಅಪ್ಪಾಜಿಯ ಸೂಚನೆ ಮೇರೆಗೆ ಅವರು ಕಣದಿಂದ ಹಿಂದೆ ಸರಿದಿದ್ದರು. ಶಾಸಕ ಕೆ.ಎಸ್.ಈಶ್ವರಪ್ಪನವರು ಬಿಜೆಪಿ ಬೆಳೆಸುವಲ್ಲಿ ಬಿ.ಎಸ್.ಯಡಿಯೂರಪ್ಪನವರಷ್ಟೆ ಶ್ರಮ ಹಾಕಿದ್ದಾರೆ. 5 ಬಾರಿಗೆ ಶಾಸಕರಾಗಿ ಆಯ್ಕೆಯಾಗಿ. ಉಪಮುಖ್ಯಮಂತ್ರಿ, ಮಂತ್ರಿಯಾಗಿ ಅನೇಕ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ. ಮಠ ಮಾನ್ಯಗಳಿಗೆ ಅನುದಾನ ನೀಡಿದ್ದಾರೆ. ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಿಂದೂ ಧರ್ಮದ ಬೆನ್ನುಲುಬಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಬಾರಿ ಕೂಡ ಈಶ್ವರಪ್ಪನವರೇ ನಿಲ್ಲಲಿ ಎಂದು ನಾನು ಕಾಂತೇಶ್‌ಗೆ ಸಲಹೆ ನೀಡಿದ್ದೇನೆ. ಅವರಿಗೆ ಇನ್ನು ಮುಂದೆ ವಿಫುಲ ಅವಕಾಶವಿದ್ದು, ತಂದೆಯ ಹಾದಿಯಲ್ಲೇ ರಾಜ್ಯದ ಯುವ ನಾಯಕರಾಗಿ ಮುಂದುವರಿಯಲಿ ನೀವು ಮುನ್ನುಗ್ಗಿ ನಿಮ್ಮ ಬೆಂಬಲಕ್ಕೆ ಇಡೀ ಸಮಾಜವಿದೆ ಎಂದು ಆಶೀರ್ವಾದ ಮಾಡಿದರು.
ಶಾಸಕ ಕೆ.ಎಸ್.ಈಶ್ವರಪ್ಪನವರು ಮಾತನಾಡಿ, ಜಗದ್ಗುರುಗಳು ಕಾಂತೇಶ್ ಅವರ ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಬಂದು ಒಟ್ಟಾಗಿ ಆಶೀರ್ವಾದ ಮಾಡಿರುವುದು ಪೂರ್ವಜನ್ಮದ ಪುಣ್ಯ ಆತನಿಗೆ ಸಮಾಜ ಸೇವೆ ಮಾಡಲು ಇನ್ನಷ್ಟು ಶಕ್ತಿ ಸಿಕ್ಕಿದೆ. ದೇವರು ಆತನಿಗೆ ಒಳ್ಳೆಯದು ಮಾಡಲಿ ಎಂದು ಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪಾಲಿಕೆ ಸದಸ್ಯ ಈ.ವಿಶ್ವಾಸ್, ಕಾಂತೇಶ್ ಅವರು 2 ಪ್ರಸಿದ್ಧ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅನೇಕ ಬಡ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಶಿಕ್ಷಣ ನೀಡಿದ್ದಾರೆ. ಮಾರಿಕಾಂಬ ಟ್ರಸ್ಟ್ ಮೂಲಕ ಸಾವಿರಾರು ಮಹಿಳೆಯರಿಗೆ ಸ್ವಯಂ ಆರ್ಥಿಕವಾಗಿ ಸದೃಢವಾಗಲು ನೆರವು ನೀಡಿದ್ದಾರೆ. ಅಲ್ಲದೆ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಯುವ ಕಣ್ಮಣಿಯಾಗಿದ್ದಾರೆ. ಅವರ ಹುಟ್ಟ ಹಬ್ಬದ ಅಂಗವಾಗಿ ಇಂದು ನಗರದ ಹಲವು ಅನಾಥಾಶ್ರಮಗಳಲ್ಲಿ ಊಟ, ಉಪಹಾರ ವ್ಯವಸ್ಥೆ ಮತ್ತು ಸೊಳ್ಳೆ ಪರದೆ ವಿತರಣೆ, ರಕ್ತದಾನ ಶಿಬಿರ, ಆರೋಗ್ಯ ಶಿಬಿರ ಮತ್ತು ನಾಳೆ ಸಂಜೆ ಶುಭ ಮಂಗಳ ಸಮುದಾಯ ಭವನ ಆವರಣದಲ್ಲಿ ಗಂಗಾವತಿ ಪ್ರಾಣೇಶ್ ಅವರಿಂದ ಹಾಸ್ಯ ಸಂಜೆ ಮತ್ತು ದೇವಾಲಯ ಸಮಿತಿಯಿಂದ ಪಂಚಾಂಗ ಶ್ರವಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮೂವರು ಸ್ವಾಮೀಜಿಗಳು ಹಾಗೂ ಪ್ರಮುಖರು ಕಾಂತೇಶ್ ಅವರನ್ನು ಸನ್ಮಾನಿಸಿದರು. ವೇದಿಕೆಯಲ್ಲಿ ಮೇಯರ್ ಶಿವಕುಮಾರ್, ಸೂಡ ಅಧ್ಯಕ್ಷ ನಾಗರಾಜ್, ಪಾಲಿಕೆ ಸದಸ್ಯರಾದ ಸುರೇಖಾ ಮುರುಳೀಧರ್, ವಿಶ್ವಾಸ್, ಪ್ರಭಾಕರ್, ಪ್ರಮುಖರಾದ ಮೋಹನ್‌ರೆಡ್ಡಿ, ರಘುನಾಯ್ಡು, ರಾಜಾರಾಮ್ ಭಟ್, ದರ್ಶನ್, ವಾಸು, ಮಂಜಣ್ಣ, ತಿಮ್ಮೇಗೌಡ, ಮತ್ತಿತರರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















