ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಜಿಲ್ಲೆಯಲ್ಲಿ ಕೋವಿಡ್ ಸೋಂಕು ಕನಿಷ್ಟ ಪ್ರಮಾಣಕ್ಕೆ ತಲುಪಿದ್ದು, ಜಿಲ್ಲೆಯ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರುಗಳು ಈವರೆಗೆ ಕೊರೋನ ಸೋಂಕು ನಿಯಂತ್ರಣಕ್ಕೆ ಶ್ರಮಿಸಿದ ಮಾದರಿಯಲ್ಲಿಯೇ ಇಲಾಖೆಯ ಉಳಿದ ಎಲ್ಲಾ ಕಾರ್ಯಕ್ರಮಗಳ ಅನುಷ್ಠಾನಕ್ಕೂ ವಿಶೇಷ ಗಮನಹರಿಸಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್.ವೈಶಾಲಿ ಅವರು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಇದೆ ಮಾಹೆಯ 19 ಮತ್ತು 22ರಂದು ಜಿಲ್ಲೆಯ 150 ಪರೀಕ್ಷಾ ಕೇಂದ್ರಗಳಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ವಿಶೇಷ ಕ್ರಮವಹಿಸಲು ನಿರ್ಧರಿಸಲಾಗಿದೆ. ಈ ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ ಪ್ರತಿ ವಿದ್ಯಾರ್ಥಿಯು ಮಾಸ್ಕ್ ಧರಿಸಲು, ಸ್ಯಾನಿಟೈಜರ್ ಬಳಸಲು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿದೆ. ಅಲ್ಲದೆ ಪ್ರತಿ ಪರೀಕ್ಷಾ ಕೇಂದ್ರಕ್ಕೆ ಆರೋಗ್ಯ ಇಲಾಖೆಯಿಂದ ಇಬ್ಬರು ಸ್ಟಾಫ್ ನರ್ಸ್‌ಗಳು ಹಾಗೂ ಓರ್ವ ವೈದ್ಯಾಧಿಕಾರಿಯನ್ನು ನಿಯೋಜಿಸಲಾಗುವುದು.
ಡಾ. ರಾಜೇಶ್ ಸುರಗೀಹಳ್ಳಿ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ.
ಅವರು ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ ಅನುಷ್ಠಾನದಲ್ಲಿರುವ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸಾರ್ವಜನಿಕ ಸೇವೆಗೆ ಶ್ರಮಿಸಿದ ವೈದ್ಯರ ಶ್ರಮ ಅಭಿನಂದನೀಯ. ಕೇವಲ ಕಾರ್ಯನಿರ್ವಹಿಸುವುದು ಮಾತ್ರವಲ್ಲ ದಾಖಲೀಕರಣದ ಕಡೆಯೂ ಗಮನಹರಿಸಬೇಕಾದ ಅಗತ್ಯವಿದೆ ಎಂದರು.
ಗರ್ಭಿಣಿ ಮಹಿಳೆಯರು ಕೂಡ ಕೋವಿಡ್ ನಿಯಂತ್ರಣ ಲಸಿಕೆ ಪಡೆಯಲು ಸರ್ಕಾರ ಆದೇಶ ಹೊರಡಿಸಿದೆ. ಅರ್ಹ ಗರ್ಭಿಣಿ ಮಹಿಳೆಯರು ಲಸಿಕೆಯನ್ನು ಪಡೆಯಬಹುದಾಗಿದೆ.
ಡಾ. ನಾಗರಾಜ ನಾಯ್ಕ್, ಆರ್.ಸಿ.ಹೆಚ್. ಅಧಿಕಾರಿ.
ಶಿವಮೊಗ್ಗ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿ-ಸಿಬ್ಬಂಧಿಗಳ ಶ್ರಮ ವಿಶೇಷವಾಗಿದ್ದು, ಆರೋಗ್ಯ ಇಲಾಖೆಯ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಶಿವಮೊಗ್ಗ ಜಿಲ್ಲೆ ರಾಜ್ಯದಲ್ಲಿ ಅಗ್ರಪಂಕ್ತಿಯಲ್ಲಿರುವಂತೆ ನೋಡಿಕೊಳ್ಳಬೇಕೆಂದವರು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಮಾದಕ ವ್ಯಸನಗಳಿಂದಾಗುವ ಅನಾಹುತಗಳ ಬಗ್ಗೆ ಬಿತ್ತಿಚಿತ್ರಗಳು ಹಾಗೂ ವಿಡಿಯೋಗಳ ಮೂಲಕ ಪ್ರಚಾರ ಕೈಗೊಂಡು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಕಾಲೇಜು ಹಂತದ ವಿದ್ಯಾರ್ಥಿಗಳಲ್ಲಿ ಧೂಮ್ರಪಾನ ಮೊದಲು ಆರಂಭಗೊಂಡು ಅಂತಿಮವಾಗಿ ಗಾಂಜಾ, ಅಫೀಮಿನಂತಹ ಮಾದಕ ವ್ಯಸನಗಳತ್ತ ತಿರುಗುತ್ತದೆ. ಈ ಹಂತದಲ್ಲಿ ಮಾದಕ ವ್ಯಸನಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಡಾ. ಶೇಖರ್ ತೆಕ್ಕಣ್ಣನವರ್, ಜಿಲ್ಲಾ ಹೆಚ್ಚುವರಿ ರಕ್ಷಣಾಧಿಕಾರಿ.
ಜಿಲ್ಲೆಯ ಆರೋಗ್ಯ ಕೇಂದ್ರಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಹಿಳೆ ಮತ್ತು ಮಕ್ಕಳ ಆರೋಗ್ಯ ತಪಾಸಣೆ ಹಾಗೂ ಹೆರಿಗೆ ನಡೆಸಿರುವ, ಹಾಗೂ ಜನಿಸಿರುವ ಅಭಿಜಾತ ಶಿಶುಗಳಿಗೆ ಲಸಿಕೆ ಹಾಕಿರುವ ಬಗ್ಗೆ ನಮೂದಿಸಿರುವ ದಾಖಲೆಗಳು ತೃಪ್ತಿಕರವಾಗಿಲ್ಲ. ಈ ಬಗ್ಗೆ ವಿವರವಾದ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲು ಮಹಿಳಾ ಮತ್ತು ಮಕ್ಕಳ ವೈದ್ಯಾಧಿಕಾರಿಗಳ ಸಭೆ ಕರೆದು ಸಮಾಲೋಚನೆ ನಡೆಸಲಾಗುವುದು ಎಂದರು.
ಮಳೆಗಾಲ ಆರಂಭವಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಸಂಭವವಿದ್ದು, ಅವುಗಳ ನಿಯಂತ್ರಣಕ್ಕಾಗಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ವೈದ್ಯಾಧಿಕಾರಿಗಳಿಗೆ ಅವರು ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶ್ರೀಮತಿ ಜಿ.ಅನುರಾಧ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೇಖರ್ ತೆಕ್ಕಣ್ಣನವರ್, ಡಾ. ರಘುನಂದನ್ ಮುಂತಾದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post