ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಬಹುನಿರೀಕ್ಷಿತ ಸಿಎಂ ಬೊಮ್ಮಾಯಿ ಸಂಪುಟ ಇಂದು ವಿಸ್ತರಣೆಯಾಗುತ್ತಿದ್ದು, ಸಾಗರ ಶಾಸಕ ಹರತಾಳು ಹಾಲಪ್ಪ ಹಾಗೂ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರುಗಳಿಗೆ ಸಚಿವ ಸ್ಥಾನ ಕೈತಪ್ಪಿರುವುದು ನಿಜಕ್ಕೂ ಒಂದು ರೀತಿಯ ಅನ್ಯಾಯವೇ ಎನ್ನಬಹುದು.
ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಬಣದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡು ಅವರ ರಾಜಕೀಯ ಕಾರ್ಯದರ್ಶಿಯಾಗಿಯೂ ಕೆಲಸ ನಿರ್ವಹಿಸಿ ಯಡಿಯೂರಪ್ಪ ರಾಜೀನಾಮೆಗೂ ಮುನ್ನ ಅವರ ಪರವಾಗಿ, ಮಠಾಧೀಶರನ್ನು ಸೇರಿಸಿ ಒತ್ತಡ ಹೇರಿದ್ದ ರೇಣುಕಾಚಾರ್ಯ ಅವರಿಗೆ ಸಚಿವ ಸ್ಥಾನ ಸಿಗದೇ ಇರುವುದು ನಿಜಕ್ಕೂ ಆಶ್ಚರ್ಯ ಮೂಡಿಸಿದೆ.
ಒಂದೆಡೆ ಯಡಿಯೂರಪ್ಪ ಅವರ ಆಪ್ತರಾಗಿರುವ ರೇಣುಕಾಚಾರ್ಯ, ಇನ್ನೊಂದೆಡೆ ತಮ್ಮ ಇಡೀ ಕ್ಷೇತ್ರದಲ್ಲಿ ಜನಾನುರಾಗಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಅಧಿಕಾರವಿರಲಿ ಅಥವಾ ಇಲ್ಲದಿರಲಿ ಜನಸೇವೆಗೆ ದಿನದ 24 ಗಂಟೆಯೂ ತೊಡಗಿಸಿಕೊಳ್ಳುವ ಇವರು ತಮ್ಮ ಸರಳ ವ್ಯಕ್ತಿತ್ವ ಹಾಗೂ ಜನರಿಗಾಗಿ ಮಿಡಿಯುವ ಪರಿಯಿಂದಲೇ ಮನೆ ಮಾತಾದವರು. ಅತ್ಯಂತ ಪ್ರಮುಖವಾಗಿ ಕೊರೋನಾ ಸಂಕಷ್ಟ ಕಾಲದಲ್ಲಿ ರೇಣುಕಾಚಾರ್ಯ ಕೈಗೊಂಡಂತಹ ಕಾರ್ಯಗಳು, ಕ್ರಮಗಳು ಬಹುತೇಕ ಇಡೀ ರಾಜ್ಯದಲ್ಲಿ ಯಾವುದೇ ಶಾಸಕ ಮಾಡಿದ ಸಾಧ್ಯತೆಗಳು ಕಡಿಮೆ. ಪ್ರತಿನಿತ್ಯ ಸಂಕಷ್ಟದಲ್ಲಿರುವವರಿಗೆ ದಾಸೋಹ, ಕೊರೋನಾ ರೋಗಿಗಳಿಗೆ ಅತ್ಯುತ್ತಮ ದರ್ಜೆಯ ಚಿಕಿತ್ಸೆ, ಕೊರೋನಾ ವಾರಿಯರ್ಸ್‌ಗಳಿಗೆ ಎಲ್ಲಾ ರೀತಿಯ ಧೈರ್ಯ ತುಂಬಿದ್ದ ರೇಣುಕಾಚಾರ್ಯ ಹಲವು ಬಾರಿ ಕೋವಿಡ್ ಆಸ್ಪತ್ರೆಯಲ್ಲಿ ತಂಗುವ ಮೂಲಕ ಜನಸಾಮಾನ್ಯರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ಕಾರ್ಯ ಮಾಡಿದ್ದರು.
ಜನಾನುರಾಗಿ ನಾಯಕ ಹಾಲಪ್ಪ:
ಇನ್ನು ಸಾಗರ ಕ್ಷೇತ್ರದ ಹರತಾಳು ಹಾಲಪ್ಪ ಅವರಿಗೆ ಸಚಿವ ಸ್ಥಾನ ದೊರೆಯದೇ ಇರುವುದು ಅವರ ಅಭಿಮಾನಿಗಳಲ್ಲಿ ಹಾಗೂ ಕ್ಷೇತ್ರದ ಜನರಲ್ಲಿ ನಿರಾಸೆ ಮೂಡಿಸಿದೆ. ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿರುವ ಹಾಲಪ್ಪ ಸಾಗರ ಹಾಗೂ ಹೊಸನಗರ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ.
ತಮ್ಮ ಕ್ಷೇತ್ರ ವ್ಯಾಪ್ತಿಯ ಎರಡು ತಾಲೂಕುಗಳಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಪ್ರವಾಸ ಕೈಗೊಳ್ಳುವ ಹಾಲಪ್ಪ ಮಲೆನಾಡಿನ ಕಟ್ಟಕಡೆಯ ವ್ಯಕ್ತಿಗೂ ಸಂಪರ್ಕಕ್ಕೆ ಸಿಗುವ ಜನನಾಯಕ ಎಂದು ಹೆಸರುವಾಸಿಯಾಗಿದ್ದಾರೆ.
ಈ ಭಾಗದ ರಸ್ತೆ, ಸೇತುವೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳು ತ್ವರಿತಗತಿಯಲ್ಲಿ ನಡೆಯುತ್ತಿದ್ದು, ನೆಟ್‌ವರ್ಕ್ ಸಮಸ್ಯೆ ಪರಿಹಾರಕ್ಕೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ.
ಈಡಿಗ ಸಮಾಜದ ಮುಖಂಡರಾಗಿದ್ದರೂ, ಯಾವುದೇ ರೀತಿಯ ಜಾತಿ-ಧರ್ಮ, ಭೇದ ತೋರದೆ ಸರ್ವರನ್ನು ಸಮನಾಗಿ ಕಾಣುವ ವ್ಯಕ್ತಿತ್ವದ ಅವರು, ಪ್ರಮುಖವಾಗಿ ಕೊರೋನಾ, ಲಾಕ್‌ಡೌನ್ ಅವಧಿಯಲ್ಲಿ ಆಸ್ಪತ್ರೆಯಲ್ಲಿ ಉತ್ಕೃಷ್ಟ ಚಿಕಿತ್ಸೆ ದೊರೆಯುವಂತೆ ಹಾಲಪ್ಪ ನವರ ನೆರವು ದೊಡ್ಡದಿದೆ. ಒಟ್ಟಾರೆಯಾಗಿ ಸಾಗರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸರ್ಕಾರದ ತಾಲೂಕು ಮಟ್ಟದಲ್ಲಿ ಶತ ಪ್ರಯತ್ನಪಟ್ಟು ಹಲವಾರು ಯೋಜನೆಗಳನ್ನು ತಂದಿರುವ ಹಾಲಪ್ಪನವರಿಗೆ ಮಂತ್ರಿಗಿರಿ ದೊರೆಯದೆ ಇರುವುದು, ಈ ಭಾಗಕ್ಕಾದ ಅನ್ಯಾಯ ಎಂದೇ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post