ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಳೆಹಾನಿಯಿಂದ ಇಡೀ ರಾಜ್ಯವೇ ತತ್ತರಿಸಿ ಹೋಗಿದ್ದು, ಸರ್ಕಾರ ಅವರ ಜೊತೆಗಿದೆ ಎಂದು ಸಚಿವ ಮಧು ಬಂಗಾರಪ್ಪ #Minister Madhu Bangarappa ಹೇಳಿದರು.
ರಾಜ್ಯದಲ್ಲಿ ಈ ಬಾರಿ ಹೆಚ್ಚಿನ ಮಳೆಯಿಂದಾಗಿ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಕೆರೆ ಕಟ್ಟೆಗಳು ತುಂಬಿವೆ. ರೈತರು ಹರ್ಷಿತರಾಗಿದ್ದಾರೆ. ಆದರೆ, ಇದರ ಜೊತೆ ಜೊತೆಗೇ ನೋವುಗಳು ಸಂಭವಿಸಿವೆ. ಅನೇಕ ಕಡೆ ಗುಡ್ಡಗಳು ಕುಸಿದಿವೆ. ಬೆಳೆ ಹಾನಿಯಾಗಿದೆ. ಹಲವು ಕಡೆ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಶಿವಮೊಗ್ಗ ಜಿಲ್ಲೆಯೂ ಇದಕ್ಕೆ ಹೊರತಾಗಿಲ್ಲ. ಮಲೆನಾಡು ಭಾಗಗಳೂ ಸೇರಿದಂತೆ ಭದ್ರಾವತಿಯಲ್ಲೂ ಕೂಡ ಸಾಕಷ್ಟು ಹಾನಿಯಾಗಿದೆ. ಜಿಲ್ಲಾಧಿಕಾರಿಗಳು ಸೇರಿದಂತೆ ಆಯಾ ಭಾಗದ ಅಧಿಕಾರಿಗಳು ಅಲರ್ಟ್ ಆಗಿರುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.
ಮಳೆಹಾನಿಯಿಂದ ಜಿಲ್ಲೆಯಲ್ಲಿ ಅನೇಕ ಮನೆಗಳು ಸಂಪೂರ್ಣ ಇಲ್ಲವೇ ಭಾಗಶಃ ನಾಶವಾಗಿವೆ. ಈ ಹಿಂದೆ ಮನೆ ಹಾನಿಗೆ ಬಿಜೆಪಿ ಸರ್ಕಾರ 5 ಲಕ್ಷ ನೀಡಿತ್ತು. ಇದನ್ನು ಹಲವರು ದುರುಪಯೋಗಪಡಿಸಿಕೊಂಡಿದ್ದರು. ಅದು ಗಮನಕ್ಕೆ ಬಂದಿದೆ. ಈ ಬಾರಿ ಹಾನಿಯಾದ ಪ್ರತಿ ಮನೆಗೆ 1.20 ಲಕ್ಷ ರೂ. ನೀಡಲು ತೀರ್ಮಾನಿಸಿದ್ದೇವೆ. ತಾತ್ಕಾಲಿಕವಾಗಿ ರೇಷನ್ ತೆಗೆದುಕೊಳ್ಳಲು 5 ಸಾವಿರ ರೂ. ನೀಡಲಾಗುವುದು. ಕೇಂದ್ರ ಸರ್ಕಾರ ಕೂಡ 6500 ರೂ. ಕೊಡುತ್ತದೆ. ಸಂಪೂರ್ಣ ಮನೆ ಕಳೆದುಕೊಂಡವರಿಗೆ ವಿವಿಧ ಯೋಜನೆಗಳಡಿ ಅಲ್ಲಿಯೇ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದಲೇ ನೆರವು ನೀಡಲಾಗುವುದು ಎಂದರು.
Also read: ಬಿಜೆಪಿ-ಜೆಡಿಎಸ್ ಪಾದಯತ್ರೆ | ಅವರದ್ದೇ ಕರ್ಮಕಾಂಡ ಬಯಲಿಗೆ | ಸಚಿವ ಮಧು ಬಂಗಾರಪ್ಪ
ಶಾಲೆಗಳ ದುರಸ್ತಿ ಕೂಡ ಆಗುತ್ತಿದೆ. ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಮುಖ್ಯವಾಗಿ ಶರಾವತಿ ಸೇರಿದಂತೆ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ಹಲವು ಬಾರಿ ಸಭೆ ನಡೆಸಿದೆ. ಅವರ ಪರವಾಗಿ ಸುಪ್ರೀಂ ಕೋರ್ಟ್ನಲ್ಲಿ ವಾದ ಮಾಡಲು ದೇವದಾಸ್ ಕಾಮತ್ ಅವರನ್ನು ನೇಮಕ ಮಾಡಲಾಗಿದೆ. ಕೇಂದ್ರ ಸರ್ಕಾರ ಇದಕ್ಕೆ ಸಹಕರಿಸಬೇಕು. ರಾಜ್ಯದಿಂದ ಆಯ್ಕೆಯಾದ ಸಂಸದರು ಶಾಶ್ವತವಾಗಿ ಈ ಸಮಸ್ಯೆ ಬಗೆಹರಿಸಲು ಸಹಕಾರ ನೀಡಬೇಕು. ಸರ್ಕಾರ ಯಾವತ್ತೂ ರೈತರ ಪರವಾಗಿ ಇದೆ ಎಂದರು.
ಕಾಗೋಡು ತಿಮ್ಮಪ್ಪ ಅವರನ್ನು ನೆನಪಿಸಿಕೊಳ್ಳುತ್ತೇವೆ. ಅವರಷ್ಟು ಕಮಿಟ್‌ಮೆಂಟ್ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಇಲ್ಲ. ಈಗಲಾದರೂ ರೈತರ ಪರವಾಗಿ ಬರಲಿ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post