ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಹೊರವಲಯದಲ್ಲಿರುವ ಸುಬ್ಬಯ್ಯ ದಂತ ವೈದ್ಯಕೀಯ ಕಾಲೇಜಿಗೆ ಫೆ.22-23ರಂದು ನ್ಯಾಷನಲ್ ಅಸೆಸ್ಮೆಂಟ್ ಮತ್ತು ಅಕ್ರೆಡಿಟೇಶನ್ ಕೌನ್ಸಿಲ್ ಕಮಿಟಿ #NAAC ಭೇಟಿ ನೀಡಲಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಸುಬ್ಬಯ್ಯ ದಂತ ವೈದ್ಯಕೀಯ ಕಾಲೇಜಿನ #SubbaiahInstituteofDentalSciences ಪ್ರಾಂಶುಪಾಲ ಡಾ.ಬಿ.ಎಸ್. ಸುರೇಶ್, ನ್ಯಾಕ್ ಮಾನ್ಯತೆಯ ಹಂತಕ್ಕೆ ತಲುಪಿದ್ದು, ಇದಕ್ಕಾಗಿ ನಮ್ಮ ಸಂಸ್ಥೆಯ ಸ್ವಯಂ ಅಧ್ಯಯನ ವರದಿಯನ್ನು ಇತ್ತೀಚೆಗೆ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪರಿಶೀಲನೆಗಾಗಿ ನ್ಯಾಕ್ ಕಮಿಟಿಯು ಕಾಲೇಜಿಗೆ ಭೇಟಿ ನೀಡಲಿದೆ ಎಂದಿದ್ದಾರೆ.
ಕಾಲೇಜಿನಲ್ಲಿ ನಿರ್ಮಿಸಲಾಗಿರುವ ಮೂಲಸೌಕರ್ಯ, ಶೈಕ್ಷಣಿಕ ಅಗತ್ಯತೆಗಳ ಅನ್ವಯ ಲಭ್ಯವಿರುವ ಭೌತಿಕ ಸೌಲಭ್ಯಗಳು, ಅಧ್ಯಾಪಕರು ನಡೆಸಿದ ಸಂಶೋಧನೆ ಮತ್ತು ಪ್ರಕಟಣೆಗಳು, ಕಾಲೇಜಿನ ಸಾಮುದಾಯಿಕ ಹೊಣೆಗಾರಿಕೆಯ ಅಭಿವೃದ್ಧಿ ಕಾರ್ಯಗಳು, ವಿದ್ಯಾರ್ಥಿಗಳ ಪ್ರಗತಿಗಾಗಿ ಕಲ್ಪಿಸಿರುವ ಪೂರಕ ಅನುಕೂಲಗಳು, ಆಡಳಿತ ಕಾರ್ಯವಿಧಾನ, ಕಾಲೇಜಿನ ಒಳಗೆ ಮತ್ತು ಹೊರಗಿನ ಕ್ಯಾಂಪಸ್’ ಆವರಣದಲ್ಲಿ ನಿರ್ಮಿಸಲಾಗಿರುವ ಪರಿಸರ ಸ್ನೇಹಿ ವಾತಾವರಣ, ಎಲ್ಲ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕಾರ್ಯಚಟುವಟಿಕೆಗಳಲ್ಲಿ ಅನುಸರಿಸುತ್ತಿರುವ ಅತ್ಯುತ್ತಮ ಅಭ್ಯಾಸಗಳು ಮೊದಲಾದುವುಗಳನ್ನ ಎಲ್ಲ ಆಯಾಮದಲ್ಲಿ ಪರಿಶೀಲನೆ ನಡೆಯಲಿದೆ ಎಂದಿದ್ದಾರೆ.
ಲಕ್ನೋ ಕಿಂಗ್ ಜಾರ್ಜಸ್ ಮೆಡಿಕಲ್ ಯುನಿರ್ವಸಿಟಿಯ ದಂತ ವೈದ್ಯಕೀಯ ವಿಭಾಗದ ಡೀನ್ ಪ್ರೊ.ರಂಜಿತ್ ಕುಮಾರ್ ಪಾಟೀಲ್ ಅವರು ನ್ಯಾಕ್ ಕಮಿಟಿ ಅಧ್ಯಕ್ಷರಾಗಿದ್ದು, ಸದಸ್ಯ ಸಂಯೋಜಕರಾಗಿ ಪೂನಾದ ಡಾ.ಡಿ. ವೈ. ಪಾಟೀಲ್ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರೊ.ಸಚಿನ್ ಸರೋದೆ, ಸದಸ್ಯರಾಗಿ ಚೆನ್ನೈ ಚೆಟ್ಟಿನಾಡು ದಂತ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಪ್ರಾಂಶುಪಾಲ ಡಾ.ಪಿ. ರಾಜೇಶ್ ಅವರುಗಳು ಕಾಲೇಜಿಗೆ ಭೇಟಿ ನೀಡುವ ಸಮಿತಿಯಲ್ಲಿದ್ದಾರೆ ಎಂದರು.
ಈ ಸಮಿತಿ ನೀಡುವ ವರದಿ ಅನುಸರಿಸಿ ಕಾಲೇಜಿಗೆ ಗುಣಮಟ್ಟಕ್ಕೆ ಸಂಬಧಿಸಿದಂತೆ ಶ್ರೇಣಿ ದೊರೆಯಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















