ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹಾನಗರ ಪಾಲಿಕೆಯಿಂದ ಹಮ್ಮಿಕೊಂಡಿರುವ ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾದಲ್ಲಿ ಯುವ ದಸರಾ ವತಿಯಿಂದ ಅ.15 ಹಾಗೂ ಅ.17ರಿಂದ 21ರವರೆಗೆ ವಿವಿಧ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಯುವ ದಸರಾ ಸಮಿತಿ ಅಧ್ಯಕ್ಷ ನಾಗರಾಜ ಕಂಕಾರಿ ತಿಳಿಸಿದರು.
ಅವರು ಇಂದು ಪಾಲಿಕೆ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅ.15ರ ಸಂಜೆ 4-30ಕ್ಕೆ ಕುವೆಂಪು ರಂಗಮಂದಿರದಲ್ಲಿ ನಡೆಯುವ ದೇಹದಾಢ್ರ್ಯ ಸ್ಪರ್ಧೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಉದ್ಘಾಟಿಸಲಿದ್ದು, ಅ.17ರ ಬೆಳಿಗ್ಗೆ 10-30ಕ್ಕೆ ಮಹಾನಗರ ಪಾಲಿಕೆ ಆವರಣದಲ್ಲಿ ನಡೆಯುವ ಟ್ರಸರ್ ಹಂಟ್ ಅನ್ನು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್‍ಕುಮಾರ್ ಉದ್ಘಾಟಿಸಲಿದ್ದಾರೆ ಎಂದರು.
ಅ.18 ರ ಸಂಜೆ 5-30ಕ್ಕೆ ಶಿವಪ್ಪ ನಾಯಕ ಮಾಲ್‍ನಲ್ಲಿ ನಡೆಯುವ ಟ್ಯಾಲೆಂಟ್ ಹಂಟ್ ಅನ್ನು ಮೇಯರ್ ಎಸ್. ಶಿವಕುಮಾರ್ ಉದ್ಘಾಟಿಸಲಿದ್ದಾರೆ. 19ರಂದು ಸಂಜೆ 4ಗಂಟೆಗೆ ನೆಹರೂ ಕ್ರೀಡಾಂಗಣದಲ್ಲಿ ನಡೆಯುವ ಕಬಡ್ಡಿ ಪಂದ್ಯಾವಳಿಯನ್ನು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಉದ್ಘಾಟಿಸುವರು ಎಂದರು.
ಅ.20ರ ಸಂಜೆ 5 ಗಂಟೆಗೆ ಫ್ರೀಡಂ ಪಾರ್ಕ್‍ನಲ್ಲಿ ನಡೆಯುವ ಮ್ಯೂಸಿಕಲ್ ನೈಟ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧುಬಂಗಾರಪ್ಪ ಉದ್ಘಾಟಿಸಲಿದ್ದು, ಬಸವಕೇಂದ್ರದ ಶ್ರೀ ಬಸವಮರುಳಸಿದ್ದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಯಾಗಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಡಿ.ಎಸ್. ಅರುಣ್, ಎಸ್. ರುದ್ರೇಗೌಡ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಇನ್ನಿತರರು ಆಗಮಿಸಲಿದ್ದಾರೆ. ನಂತರ ನಡೆಯುವ ಮ್ಯೂಸಿಕಲ್ ನೈಟ್‍ನಲ್ಲಿ ಖ್ಯಾತ ಪಾಪ್ ಗಾಯಕ್ ಚಂದನ್ ಶೆಟ್ಟಿ, ಅನನ್ಯ ಭಟ್, ಐಶ್ವರ್ಯ, ಅಜಯ್, ದೀಪುಜಯಶೀಲನ್ ಭಾಗವಹಿಸಲಿದ್ದಾರೆ ಎಂದ ಅವರು, ಅ.21ಸಂಜೆ 5-30ಕ್ಕೆ ಫ್ರೀಡಂ ಪಾರ್ಕ್‍ನಲ್ಲಿ ನಡೆಯುವ ಜಿಲ್ಲಾಮಟ್ಟದ ನೃತ್ಯ ಸ್ಪರ್ಧೆಯನ್ನು ಶಾಸಕಿ ಶಾರದಾ ಪೂರ್ಯಾ ನಾಯ್ಕ ಉದ್ಘಾಟಿಸಲಿದ್ದಾರೆ ಎಂದರು.
ಆಹಾರ ದಸರಾ
ಆಹಾರ ದಸರಾ ಸಮಿತಿಯ ಅಧ್ಯಕ್ಷೆ ಆಶಾ ಚಂದ್ರಪ್ಪ ಮಾತನಾಡಿ, ಮಹಾನಗರ ಪಾಲಿಕೆಯಿಂದ ದಸರಾ ಅಂಗವಾಗಿ ಹಮ್ಮಿಕೊಂಡಿರುವ ಆಹಾರ ದಸರಾ ಸಮಿತಿ ವತಿಯಿಂದ ಅ.16 ಮತ್ತು 17ರಂದು ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಅ.16ರಂದು ಬೆಳಿಗ್ಗೆ 11 ಗಂಟೆಗೆ ಶಿವಪ್ಪ ನಾಯಕ ವೃತ್ತದಲ್ಲಿ ಸಾರ್ವಜನಿಕರಿಗೆ 2 ನಿಮಿಷದಲ್ಲಿ ಕೊಟ್ಟೆ ಕಡುಬು, ಅವರೆಕಾಳು ಸಾಂಬಾರ್ ತಿನ್ನುವ ಸ್ಪರ್ಧೆಯನ್ನು ಪುರುಷರು ಮತ್ತು ಮಹಿಳೆಯರಿಗೆ ಹಾಗೂ ಹಣ್ಣು ತಿನ್ನುವ ಸ್ಪರ್ಧೆಯನ್ನು ಮಹಿಳಾ ಮತ್ತು ಪುರುಷ ಪೊಲೀಸರಿಗೆ ಆಯೋಜಿಸಲಾಗಿದೆ ಎಂದರು.
17ರಂದು ಮಧ್ಯಾಹ್ನ 12-30ಕ್ಕೆ ಶಿವಪ್ಪ ನಾಯಕ ವೃತ್ತದಲ್ಲಿ ಅಡುಗೆ ಮಾಡುವ ಸ್ಪರ್ಧೆ(ಅಪ್ಪ-ಮಗಳು-ಗೋಧಿರವೆ ಮತ್ತು ಫೇಣಿ ರವೆ ಉಪಯೋಗಿಸಿ ತಯಾರಿಸುವ ಖಾದ್ಯಗಳು) ಆಯೋಜಿಸಿದ್ದು, ಸ್ಪರ್ಧಿಗಳಿಗೆ ಗ್ಯಾಸ್ ಹಾಗೂ ಗ್ಯಾಸ್ ಸ್ಟವ್ ನೀಡಲಾಗುವುದು. ಇತರೆ ಪದಾರ್ಥಗಳನ್ನು ಸ್ಪರ್ಧಿಗಳೇ ತರಬೇಕಾಗುತ್ತದೆ ಎಂದರು.
ಅ.16ರಿಂದ 24ರ ವರೆಗೆ ಫ್ರೀಡಂ ಪಾರ್ಕ್‍ನಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ 25 ಸ್ಟಾಲ್‍ಗಳಲ್ಲಿ ವಿವಿಧ ರೀತಿಯ ಸಾಂಪ್ರದಾಯಿಕ ವಿಶಿಷ್ಟ ಅಡುಗೆ ತಯಾರಿಕೆ ಹಾಗೂ ತಿನಿಸುಗಳ ಅಂಗಳ ಇದ್ದು, ಸ್ಟಾಲ್‍ಗಳನ್ನ ಉಚಿತವಾಗಿ ನೀಡಲಾಗುವುದು ಎಂದರು.
ಪರಿಸರ ದಸರಾ
ಪರಿಸರ ದಸರಾ ಸಮಿತಿ ಅಧ್ಯಕ್ಷೆ ಯಮುನಾ ರಂಗೇಗೌಡ ಮಾತನಾಡಿ, ಪರಿಸರ ದಸರಾ ಸಮಿತಿ ವತಿಯಿಂದ ಅ.15ರ ನಾಳೆ ಬೆಳಿಗ್ಗೆ 6 ಗಂಟೆಗೆ ಮಹಾನಗರ ಪಾಲಿಕೆ ಆವರಣದಿಂದ ಹಮ್ಮಿಕೊಂಡಿರುವ ಸೈಕಲ್ ಜಾಥಾವನ್ನು ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಉದ್ಘಾಟಿಸಲಿದ್ದಾರೆ ಎಂದು ಸಮಿತಿ ಅಧ್ಯಕ್ಷೆ ಯಮುನಾ ರಂಗೇಗೌಡ ತಿಳಿಸಿದರು.
ಜಾಥಾವು ಗೋಪಿ ವೃತ್ತ ಸೇರಿದಂತೆ ನಗರದ ವಿವಿಧ ಪ್ರಮುಖ ರಸ್ತೆಗಳ ಮೂಲಕ ಸಾಗಿ ಮತ್ತೆ ಪಾಲಿಕೆ ಆವರಣ ತಲುಪಲಿದೆ. ಅ.16ರ ಸಂಜೆ 5 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ನಡೆಯುವ ಪರಿಸರ ದಸರಾವನ್ನು ಬಸವಕೇಂದ್ರ ಶ್ರೀ ಬಸವಮರುಳಸಿದ್ದ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಸಹ್ಯಾದ್ರಿ ಕಾಲೇಜಿನ ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ ನಾಗರಾಜ್ ಪರಿಸರ ಹಾಗೂ ಪಾಲಿಕೆ ಸದಸ್ಯರು ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿರುವ ಶಿವಮೊಗ್ಗದ ಎನ್‍ಜಿಒ ಸಂಸ್ಥೆಗಳಾದ ಪರೋಪಕಾರಂ ತಂಡ, ಗೋ ಗ್ರೀನ್, ನಿರ್ಮಲ ತುಂಗಾ ಅಭಿಯಾನ, ಅಹ್ಮದೀಯ ಮುಸ್ಲಿಂ ಜಮಾತೆ ಹಾಗೂ ಗಿಡಗಳಿಗೆ ಪ್ರತಿದಿನ ನೀರು ಹಾಕುತ್ತಿರುವ ಮರಿಯಪ್ಪ ಅವರನ್ನು ಸನ್ಮಾನಿಸಲಾಗುವುದು ಎಂದರು.
ಅ.22ರ ಬೆಳಿಗ್ಗೆ 11 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಕುಡಿಯುವ ಹಾಗೂ ದಿನಬಳಕೆಗೆ ಉಪಯೋಗಿಸುವ ನೀರಿನ ಸಂರಕ್ಷಣೆ ಕುರಿತು ಸಾರ್ವಜನಿಕರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದು ಮುಖ್ಯ ಅತಿಥಿಯಾಗಿ ಪಾಲಿಕೆ ಆಯುಕ್ತ ಕೆ. ಮಾಯಣ್ಣ ಗೌಡ ಆಗಮಿಸಲಿದ್ದಾರೆ ಎಂದರು.
ಮಹಿಳಾ ದಸರಾ
ಮಹಿಳಾ ದಸರಾ ಸಮಿತಿಯ ಸದಸ್ಯೆ ಆರತಿ ಆ.ಮಾ. ಪ್ರಕಾಶ್ ಮಾತನಾಡಿ, ಅ.16ರಂದು ಸಂಜೆ 5 ಗಂಟೆಗೆ ಫ್ರೀಡಂ ಪಾರ್ಕ್‍ನಲ್ಲಿ ಆಯೋಜಿಸಿರುವ ಮಹಿಳಾ ದಸರಾವನ್ನು ಭಾಗ್ಯಲಕ್ಷ್ಮಿ ಧಾರಾವಾಹಿ ನಟಿಯರಾದ ಪದ್ಮಜಾ ರಾವ್ ಹಾಗೂ ಸುಷ್ಮಾ ಅವರು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಸಂಸದ ಬಿ.ವೈ. ರಾಘವೇಂದ್ರ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಶಾರದಾ ಪೂರ್ಯಾ ನಾಯ್ಕ, ಡಿ.ಎಸ್. ಅರುಣ್, ಮೇಯರ್ ಎಸ್.ಶಿವಕುಮಾರ್, ತೇಜಸ್ವಿನಿ ಬಿ.ವೈ. ರಾಘವೇಂದ್ರ, ಪ್ರತಿಭಾ ಡಿ.ಎಸ್. ಅರುಣ್, ರೂಪಾ ಎಸ್. ಶಿವಕುಮಾರ್ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ. ನಂತರ ನಗರದ ವಿವಿಧ ಮಹಿಳಾ ಸಂಘಟನೆಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಮಕ್ಕಳ ದಸರಾ
ನಮ್ಮೂರ ನಾಡ ಹಬ್ಬ ಶಿವಮೊಗ್ಗ ದಸರಾ ಅಂಗವಾಗಿ ಮಕ್ಕಳ ದಸರಾ ವತಿಯಿಂದ ಅ.16, 17 ಹಾಗೂ 18ರಂದು ವಿವಿಧ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ಮಕ್ಕಳ ದಸರಾ ಸಮಿತಿ ಅಧ್ಯಕ್ಷೆ ರೇಖಾ ರಂಗನಾಥ್ ತಿಳಿಸಿದರು.
ಅವರು ಇಂದು ಪಾಲಿಕೆ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅ.16ರ ಬೆಳಿಗ್ಗೆ 10 ಗಂಟೆಗೆ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ 14ರಿಂದ 17 ವರ್ಷ ವಯಸ್ಸಿನ ಮಕ್ಕಳ ರಾಜ್ಯ ಮಟ್ಟದ ಸಬ್ ಜ್ಯೂನಿಯರ್ ಕರಾಟೆ ಪಂದ್ಯಾವಳಿಗಳು, ರಾಜ್ಯ ಮತ್ತು ಜಿಲ್ಲಾ ಕರಾಟೆ ಅಸೋಸಿಯೇಷನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದು, ಆಡಳಿತ ಪಕ್ಷದ ನಾಯಕ ಎಸ್.ಜ್ಞಾನೇಶ್ವರ್ ಪಂದ್ಯಾವಳಿ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ರಾಜ್ಯ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಎಂ ಅಲ್ತಾಫ್ ಪಾಶಾ, ಜಿಲ್ಲಾ ಸೀನಿಯರ್ ಕರಾಟೆ ಮಾಸ್ಟರ್ ಸುರೇಂದ್ರ ಶಾಸ್ತ್ರಿ ಹಾಗೂ ಇನ್ನಿತರರು ಭಾಗವಹಿಸಲಿದ್ದಾರೆ ಎಂದರು.
Also read: ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ: ಇಂಜಿನಿಯರ್ ವಿದ್ಯಾರ್ಥಿ ಸ್ಥಳದಲ್ಲೇ ಸಾವು
ಅ.17ರ ಬೆಳಿಗ್ಗೆ 10-30ಕ್ಕೆ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ 6ರಿಂದ 16 ವರ್ಷ ವಯಸ್ಸಿನ ಮಕ್ಕಳ ರಾಜ್ಯ ಮಟ್ಟದ ಕುಡೊ ಮಾರ್ಷಲ್ ಆಟ್ರ್ಸ್ ಪಂದ್ಯಾವಳಿ ಆಯೋಜಿಸಿದ್ದು, ವಿಧಾನ ಪರಿಷತ್ ಸದಸ್ಯ ಡಿ.ಎಸ್ ಅರುಣ್ ಪಂದ್ಯಾವಳಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಜಿಲ್ಲಾ ಕುಡೊ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಶಬ್ಬೀರ್ ಅಹ್ಮದ್, ಸೂಡಾ ಮಾಜಿ ಅಧ್ಯಕ್ಷ ಎನ್. ರಮೇಶ್ ಹಾಗೂ ಇನ್ನಿತರರು ಆಗಮಿಸಲಿದ್ದಾರೆ ಎಂದರು.
ಅ.18ರ ಸಂಜೆ 6-30ಕ್ಕೆ ಪ್ರೀಡಂ ಪಾರ್ಕ್‍ನಲ್ಲಿ ನಡೆಯುವ ಮಕ್ಕಳ ದಸರಾ ಸಮಾರೋಪ ಸಮಾರಂಭವನ್ನು ಶಿವಮೊಗ್ಗದವರಾದ ಜ್ಯೂನಿಯರ್ ಡ್ರಾಮಾ ಸೀಸನ್-4ರ ವಿಜೇತೆ ಕು.ರಿಧಿ ಎಸ್., ಸರಿಗಮಪ ಸೀಸನ್-14ರ ಹಿನ್ನೆಲೆ ಗಾಯಕಿ ನೇಹಾ ಆರ್., ಉದ್ಘಾಟಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಶಾರದಾ ಪೂರ್ಯಾ ನಾಯ್ಕ ಮಾಜಿ ಶಾಸಕರಾದ ಆರ್. ಪ್ರಸನ್ನಕುಮಾರ್, ಆಯನೂರು ಮಂಜುನಾಥ್, ನಗರಸಭೆ ಮಾಜಿ ಅಧ್ಯಕ್ಷ ಎಂ. ಶಂಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ನಾಗರಾಜ್ ಹಾಗೂ ಇನ್ನಿತರರು ಆಗಮಿಸಲಿದ್ದು, ಈ ಸಂದರ್ಭದಲ್ಲಿ ಪ್ರಸಕ್ತ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ಶಿವಮೊಗ್ಗದ 8 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದರು.
ನಂತರ ಶಿವಮೊಗ್ಗ ನಗರ ವ್ಯಾಪ್ತಿಯ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ, ಕೊಡಗಿನ ಮ್ಯಾಜಿಕ್ ಸ್ಟಾರ್ ವಿಕ್ರಂ ಶೆಟ್ಟಿರವರಿಂದ ಮ್ಯಾಜಿಕ್ ಶೋ, ಹೆಣ್ಣು ಮಕ್ಕಳಿಂದ ಕರಾಟೆ ಹಾಗೂ ಮಾತನಾಡುವ ಗೊಂಬೆ ಪ್ರದರ್ಶನ ನಡೆಯಲಿದೆ. ಹಾಗೂ ಕ್ರೀಡಾ ವಿಜೇತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ದಸರಾ ಉತ್ಸವ
ದಸರಾ ಉತ್ಸವ ಸಮಿತಿ ಅಧ್ಯಕ್ಷ ಯು.ಹೆಚ್. ವಿಶ್ವನಾಥ್ ಮಾತನಾಡಿ, ಮಹಾನಗರ ಪಾಲಿಕೆಯಿಂದ ಹಮ್ಮಿಕೊಂಡಿರುವ ದಸರಾ ಉತ್ಸವದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಸಕ್ರೆಬೈಲಿನ ಆನೆಬಿಡಾರದ ಮೂರು ಆನೆಗಳು ಅಂಬಾರಿ ಹೊತ್ತು ಮೆರವಣಿಗೆಯಲ್ಲಿ ಸಾಗುವುದು ವಿಶೇಷ ಆಕರ್ಷಣೆಯಾಗಿದೆ ಎಂದು ದಸರಾ ಉತ್ಸವ ಸಮಿತಿ ಅಧ್ಯಕ್ಷ ಯು.ಹೆಚ್. ವಿಶ್ವನಾಥ್ ತಿಳಿಸಿದರು.
ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಇಲಾಖೆಯ ಸಹಕಾರದೊಂದಿಗೆ ಪ್ರತಿ ವರ್ಷವೂ ಮೂರು ಆನೆಗಳು ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದು, ಈ ವರ್ಷ ಪಾಲ್ಗೊಳ್ಳುವ ಸಾಗರ್, ನೇತ್ರಾವತಿ ಹಾಗೂ ಹೇಮಾವತಿ ಆನೆಗಳನ್ನು ಅ.20ರಂದು ಸಂಜೆ 5-30ಕ್ಕೆ ವಾಸವಿ ಪಬ್ಲಿಕ್ ಶಾಲೆ ಆವರಣದಲ್ಲಿ ಸ್ವಾಗತಿಸಲಾಗುವುದು ಎಂದರು.
ಅ.20ರಂದು ಆಗಮಿಸಲಿರುವ ಆನೆಗಳು ಮೂರು ದಿನಗಳ ಕಾಲ ವಾಸವಿ ಪಬ್ಲಿಕ್ ಶಾಲೆಯಿಂದ ಫ್ರೀಡಂ ಪಾರ್ಕ್‍ವರೆಗೆ ತಾಲೀಮು ನಡೆಸಲಿವೆ. ಅ.15ರಿಂದ 24ರ ವರೆಗೆ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ರಕ್ಷಣೆ ಹಾಗೂ ಭದ್ರತೆ ಒದಗಿಸಲು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದರು.
ಅ.24ರ ಮಧ್ಯಾಹ್ನ 2-30ಕ್ಕೆ ದಸರಾ ಉತ್ಸವ ಮೆರವಣಿಗೆಗೆ ನಂದೀಧ್ವಜ ಪೂಜೆಯನ್ನು ಕೋಟೆ ಶ್ರೀ ಆಂಜನೇಯ ದೇವಸ್ಥಾನದ ಎದುರು ಮೇಯರ್ ಎಸ್. ಶಿವಕುಮಾರ್ ಸಲ್ಲಿಸುವುದರ ಮೂಲಕ ಚಾಲನೆ ನೀಡಲಿದ್ದಾರೆ. ಚುನಾಯಿತ ಪ್ರತಿನಿಧಿಗಳು, ಇಲಾಖೆಯ ಅಧಿಕಾರಿಗಳು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ. ನಂತರ ನಡೆಯುವ ರಾಜಬೀದಿ ಉತ್ಸವದಲ್ಲಿ ವೀರಗಾಸೆ, ಚಂಡೆ, ಕೀಲುಕುದುರೆ, ಡೊಳ್ಳು, ಯಕ್ಷಗಾನ ಬೊಂಬೆಗಳು ಸೇರಿದಂತೆ ವಿವಿಧ ಸಾಂಸ್ಕøತಿಕ ತಂಡಗಳೊಂದಿಗೆ ಮೆರವಣಿಗೆ ಹೊರಟು ಬನ್ನಿ ಮುಡಿಯುವ ಸ್ಥಳವಾದ ಫ್ರೀಡಂ ಪಾರ್ಕಿಗೆ ತಲುಪಲಿದೆ ಎಂದರು.
ಸುಮಾರು 205 ದೇವಾನುದೇವತೆಗಳ ಉತ್ಸವ ಮೂರ್ತಿಗಳ ಪಲ್ಲಕ್ಕಿಯ ಅಲಂಕಾರಕ್ಕಾಗಿ ಪ್ರತಿ ವರ್ಷದಂತೆ ಗೌರವ ಧನ ನೀಡಲಾಗುತ್ತಿದೆ ಎಂದ ಅವರು, ತಹಶೀಲ್ದಾರ್ ಅವರು ಸಂಜೆ 6-30ಕ್ಕೆ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ನಂತರ ಆಕರ್ಷಕ ಪಟಾಕಿ -ಸಿಡಿಮದ್ದು, ರಾವಣದಹನ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಪಾಲಿಕೆ ಸದಸ್ಯರಾದ ಎಸ್. ಜ್ವಾನೇಶ್ವರ್, ಎಸ್.ಎನ್. ಮಂಜುನಾಥ್, ಎಸ್.ಜಿ. ರಾಜು, ಲಕ್ಷ್ಮೀ ಶಂಕರ ನಾಯಕ, ಅನಿತಾ ರವಿಶಂಕರ್, ರೇಖಾ ರಂಗನಾಥ್ ಇನ್ನಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post