ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ #National Girls’ Day ಅಂಗವಾಗಿ ಹೆಣ್ಣು ಮಕ್ಕಳ ಮಹತ್ವ, ಶಿಕ್ಷಣ, ಆರೋಗ್ಯ, ಭದ್ರತೆ ಸಮಾನತೆ ಮತ್ತು ಸಬಲೀಕರಣ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಅಕ್ಸ್‍ಫರ್ಡ್ ಎಜುಕೇಷನ್ ಟ್ರಸ್ಟ್ ವತಿಯಿಂದ ಜ.25ರಂದು ಮ್ಯಾರಥಾನ್ ಓಟವನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟ್‍ನ ಅಧ್ಯಕ್ಷ ಶ್ರೀನಿವಾಸ್ ತಿಳಿಸಿದರು.
ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೂರು ಕಿ.ಮೀ. ಮ್ಯಾರಥಾನ್ ಓಟವು ಅಂದು ಬೆಳಿಗ್ಗೆ 7 ಗಂಟೆಗೆ ಫ್ರೀಡಂ ಪಾರ್ಕ್‍ನಿಂದ ಆರಂಭವಾಗಿ ಲಕ್ಷ್ಮೀ ಟಾಕೀಸ್, ಜೈಲ್‍ವೃತ್ತ, ಶಿವಮೂರ್ತಿ ವೃತ್ತ, ಅಕ್ಕಮಹಾದೇವಿ ವೃತ್ತ ಮೂಲಕ ಸಾಗಿ ಫ್ರೀಡಂ ಪಾರ್ಕ್‍ನಲ್ಲಿ ಮುಕ್ತಾಯಗೊಳ್ಳಲಿದೆ ಎಂದರು.
ಹೆಣ್ಣುಮಕ್ಕಳ ಹಕ್ಕುಗಳು, ಮಹಿಳಾ ಸುರಕ್ಷತೆ ಮತ್ತು ಲಿಂಗ ಸಮಾನತೆ ಕುರಿತ ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದಿಂದ ಈ ಮ್ಯಾರಥಾನ್ ಓಟವನ್ನು ಹಮ್ಮಿಕೊಳ್ಳಲಾಗಿದೆ. ವಾಸನ್ ಐಕೇರ್, ಡಿಕ್ಲಾಥಾನ್, ರಾಗಾ ಸಿಲ್ಕ್, ಹೋಲಿ ಕಿಡ್ಸ್ ಪಬ್ಲಿಕೇಷನ್, ಬರಹ ಪಬ್ಲಿಕೇಷನ್, ಮಲ್ನಾಡ್ ಅಮೃತ್ ಚಹಾ, ಮಹಾಲಕ್ಷ್ಮೀ ಸ್ವೀಟ್ಸ್ ಹಾಗೂ ಜಿಲ್ಲಾ ಪೊಲೀಸ್ ವಿಭಾಗದ ಅಕ್ಕ ಪಡೆ ಇವರ ಸಹಯೋಗದಲ್ಲಿ ನಡೆಯುತ್ತಿದೆ ಎಂದರು.
10 ರಿಂದ 12 ವರ್ಷದವರಿಗೆ, 13 ರಿಂದ 16 ವರ್ಷದವರಿಗೆ ಹಾಗೂ 17 ವರ್ಷ ಮೇಲ್ಪಟ್ಟವರ ಮೂರು ವಿಭಾಗಗಳಲ್ಲಿ ಓಟ ನಡೆಯಲಿದ್ದು, ಅಂದು ಬೆಳಿಗ್ಗದ 6.30ಕ್ಕೆ ಸ್ಥಳದಲ್ಲೇ ಹೆಸರನ್ನು ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದು ಎಂದರು.
ವಾಸನ್ ಐಕೇರ್‍ನ ವ್ಯವಸ್ಥಾಪಕ ಸಂಜಯ್ ಮಾತನಾಡಿ, ಈ ಓಟದಲ್ಲಿ ಭಾಗವಹಿಸಿದವರಿಗೆ ಉಚಿತವಾಗಿ ಕಣ್ಣಿನ ತಪಾಸಣೆ ಇದ್ದು, ಶಸ್ತ್ರ ಚಿಕಿತ್ಸೆ ಹಾಗೂ ಕನ್ನಡಕಕ್ಕೆ ಶೇ.10ರಷ್ಟು ರಿಯಾಯಿತಿ ಇದೆ. ಈ ಸೌಲಭ್ಯ ಒಂದು ವರ್ಷದವರೆಗೆ ಇರುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಗಾ ಸಿಲ್ಕ್ಸ್‍ನ ಸುಜಾತಾ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















