ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನವೋದಯ ಶಾಲೆಗಳು, ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಆರಿಸಿ, ಅವರಲ್ಲಿ ಅಡಗಿದ್ದ ಸುಪ್ತ ಪ್ರತಿಭೆ ಗಳನ್ನು ಗುರುತಿಸಿ, ಒಳ್ಳೆಯ ಸಂಸ್ಕೃತಿ ಕಲಿಸಿ, ದೇಶಕ್ಕೆ ಉತ್ತಮ ನಾಗರಿಕರನ್ನಾಗಿಸುವ ಒಂದು ಅತ್ಯುತ್ತಮ ಸಂಸ್ಥೆಯಾಗಿ ಬೆಳೆದಿದೆ ಎಂದು ಜಿಲ್ಲಾಧಿಕಾರಿ ಸೆಲ್ವಮಣಿ ಹೇಳಿದರು.
ಗಾಜನೂರಿನ ಜವಾಹರ ನವೋದಯ ವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ “ಹಳೆ ವಿದ್ಯಾರ್ಥಿಗಳ ಮಿಲನ” ಮತ್ತು “13ನೇ ಬ್ಯಾಚ್ ವತಿಯಿಂದ ಬೆಳ್ಳಿಹಬ್ಬ ಸಂಭ್ರಮ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ರೀತಿಯ ಕಾರ್ಯಕ್ರಮಗಳು ನವೋದಯ ಶಾಲೆಯ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಒಂದು ಸ್ಪೂರ್ತಿ. ಇದರಿಂದ ಮುಂದಿನ ದಿನಗಳಲ್ಲಿ ಯಾವ ಕ್ಷೇತ್ರ ಆರಿಸಿಕೊಂಡರೆ ತಮಗೆ ಉತ್ತಮ ಭವಿಷ್ಯ ಇದೆ ಎಂಬ ಕಲ್ಪನೆ ಬರಲಿದೆ ಎಂದರು.

ಕಾರ್ಯಕ್ರಮದಲ್ಲಿ ಜವಾಹಾರ್ ನವೋದಯ ವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ರವಿ, ಉಪ ಪ್ರಾಂಶುಪಾಲ ಜಾನ್ಸನ್ ಪಿ ಜೇಮ್ಸ್ ಅವರುಗಳು ಉಪಸ್ಥಿತರಿದ್ದರು.

ಈ ವರ್ಷದ ಬೆಳ್ಳಿ ಹಬ್ಬವನ್ನು ಆಚರಿಸಿದ 13ನೇ ಬ್ಯಾಚ್ ವಿದ್ಯಾರ್ಥಿಗಳು ತಮ್ಮ ಮೆಚ್ಚಿನ ಶಾಲೆಗೆ 1.10 ಲಕ್ಷ ರೂ ವ್ಯಯಿಸಿ ಎರಡು ಶಾಲಾ ಕೊಠಡಿಗಳಿಗೆ ಚಾವಣಿಯ ಒಳಮೈ (ಸೀಲಿಂಗ್) ನಿರ್ಮಾಣಕ್ಕೆ ಸಹಕರಿಸಿದರು. ಹಳೆ ವಿದ್ಯಾರ್ಥಿಗಳ ಈ ಕೊಡುಗೆಗೆ, ಪ್ರಾಂಶುಪಾಲರಾದ ಜಿ ವಲ್ಲಿಯಮೈ ಅವರು 13ನೇ ಬ್ಯಾಚ್ ಕಾರ್ಯವನ್ನು ಶ್ಲಾಘಿಸಿದರು. ಜೊತೆಗೆ ಬೆಂಗಳೂರಿನ ಖ್ಯಾತ ಪಾದಗಳ ಆರೈಕೆಯ ಸಂಸ್ಥೆಯಾದ – ಆಪ್ಟ್ ಫುಟ್ ಸೆಕ್ಯೂರ್ (Apta Foot Secure) ವತಿಯಿಂದ ಉಚಿತವಾಗಿ ಪಾದಗಳ ತಪಾಸಣೆ, ಅದರ ನಿರ್ವಹಣೆ ಮತ್ತು ಸಮಗ್ರ ಆರೈಕೆ ಬಗ್ಗೆ ಜಾಗೃತಿ ಮೂಡಿಸಲಾಯಿತು.
Also read: ಪ್ರಯೋಗಾತ್ಮಕ ಕಲಿಕೆಯಿಂದ ಮಾತ್ರ ನಿಜವಾದ ಜ್ಞಾನದ ವಿಕಸನ: ಪ್ರವೀಣ್ ಉಡುಪ ಅಭಿಪ್ರಾಯ
ಕಾರ್ಯಕ್ರಮದಲ್ಲಿ ನವೋದಯ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕ ವೃಂದದ ವಿ ಎಸ್ ಹೆಗಡೆ, ಮನೋಜ್ ಪವಾಸ್ಕರ್, ರಾಜಕುಮಾರ್ ಕಡೆಮನಿ, ಸುರೇಶ್, ಹಳೆ ವಿದ್ಯಾರ್ಥಿ ಸಂಘ ಮಿಲನದ ಅಧ್ಯಕ್ಷರಾದ ತಾರಾನಾಥ್, ಅರುಣ್ ಕುಮಾರ್, ಡಾ. ಸುನಿಲ್ ಕುಮಾರ್, ಎಂ ಪಿ ನವೀನ್ ಕುಮಾರ್, ಪ್ರಕಾಶ್ ಜೋಯ್ಸ್ ಮತ್ತು ಗಾಜನೂರು ನವೋದಯ ಶಾಲೆಯ ಹಳೆ ವಿದ್ಯಾರ್ಥಿಗಳು ಹಾಜರಿದ್ದರು.

ಗಾಜನೂರು ಹಳೆ ನವೋದಯ ವಿದ್ಯಾರ್ಥಿಗಳ ಸಾಧನೆ :
- ಸಮಾಜದ ಪ್ರಮುಖ ಕ್ಷೇತ್ರಗಳಾದ ಮೆಡಿಸಿನ್, ಇಂಜಿನಿಯರಿಂಗ್ , ಡಿಫೆಂನ್ಸ್ ಸರ್ವಿಸ್ , ಲೀಗಲ್ ಸರ್ವಿಸ್ , ಚಾರ್ಟೆಡ್ ಅಕೌಂಟ್, ಶಿಕ್ಷಣ ಸಂಸ್ಥೆಗಳಲ್ಲಿ ಪ್ರೊಫೆಸರ್, ಲೆಕ್ಚರರ್, ಟೀಚರ್, ಕೃಷಿ ಮತ್ತು ತೋಟಗಾರಿಕೆ ಗಳಲ್ಲಿ ವಿಜ್ಞಾನಿ, ರಾಜಕೀಯ, ಬ್ಯಾಂಕಿಂಗ್, ಕ್ರೀಡೆ, ಸಂಗೀತ ಪ್ರತಿಯೊಂದು ಕ್ಷೇತ್ರಗಳಲ್ಲಿ ತಮ್ಮ ಚಾಪು ಮೂಡಿಸಿದ್ದಾರೆ.
- ರಾಜ್ಯಾದ್ಯಂತ ಸೀಡ್‌ಬಾಲ್ (ಬೀಜದ ಉಂಡೆ) ನಿಸರ್ಗವನ್ನು ಹಸಿರಾಗಿಸುವ ಒಂದು ಯೋಜನೆ ಮಾಡಿ, ಕಾರ್ಯಾಗಾರದ ಅರಿವು ಮೂಡಿಸಿ, ಪರಿಸರದ ಬಗ್ಗೆ ಕಾಳಜಿ ವಹಿಸಿದ್ದು ಇನ್ಫಿನಿಟಿ ಕಾರ್ತಿಕ್ – ಬ್ರೈನ್ ಸೈಂಟಿಸ್ಟ್
- ಡಾ. ಚಿನ್ನಬಾಬು ಸಿಇಓ – ಗ್ರೇಸ್ ಕ್ಯಾನ್ಸರ್ ಫೌಂಡೇಶನ್ ಅವರಿಂದ ಶಿವಮೊಗ್ಗ ನವೋದಯಲ್ಲಿ, ಕಳೆದ ವರ್ಷ ಗ್ರಾಮೀಣ ಭಾಗದವರಿಗೆ ಉಚಿತವಾಗಿ ಕ್ಯಾನ್ಸರ್ ತಪಾಸಣೆ ಮತ್ತು ವೈದ್ಯಕೀಯ ಸೌಲಭ್ಯ ನೀಡಲಾಯಿತು
- ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರನ್ನು ಒಂದು ಚೌಕಟ್ಟಿನಲ್ಲಿ ಹೊಂದುವ ಆಶಯದೊಂದಿಗೆ ಜೆಎನ್‌ವಿ ಶಿವಮೊಗ್ಗದಲ್ಲಿ “ಕವಿ ವನ” ನಿರ್ಮಿಸಲಾಗಿದೆ. ಇಲ್ಲಿ ಕನ್ನಡದ 8 ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿಗಳ ಮೂರ್ತಿ ನಿರ್ಮಿಸಿ, ಅವರ ನುಡಿಗಳನ್ನು ಕೆತ್ತಲಾಗಿದೆ.
- ನವೋದಯ ದಿನಗಳ ನಂತರ ಹೊರಬಂದ ಹಲವು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ಶೈಕ್ಷಣಿಕ ಬೆಂಬಲವಾಗಿ ಪ್ರತಿವರ್ಷ 2ರಿಂದ 3ಲಕ್ಷ ಅನುದಾನ ಮೀಸಲಿಟ್ಟು, ತಮ್ಮ ಜೀವನವನ್ನು ನೀರೂಪಿಸುತ್ತಿರುವ ಕಾರ್ಯ ಮಾಡುತ್ತಿದ್ದಾರೆ ಈ ಶಾಲೆಯ ಆಲೂಮ್ನಿ ಬಳಗ.
- ನವೋದಯ ಮತ್ತು ಮೊರಾರ್ಜಿ ಪರೀಕ್ಷೆಗಳಿಗೆ, ಕರ್ನಾಟಕ ರಾಜ್ಯದಲ್ಲಿ ಪ್ರಪ್ರಥಮವಾಗಿ ಗ್ರಾಮೀಣ ಭಾಗದ ಮಕ್ಕಳಿಗೆ ಕಳೆದ ಮೂರು ವರ್ಷಗಳಿಂದ ಉಚಿತ ತರಬೇತಿ ಶಿಬಿರ (4 ತಿಂಗಳು) ನಡೆಸಲಾಗುತ್ತಿದೆ. ಈ ಶಿಬಿರಕ್ಕೆ 149 ವಿದ್ಯಾರ್ಥಿಗಳು ಭಾಗವಹಿಸಿದ್ದು, ಇಲ್ಲಿಯವರೆಗೆ 4 ವಿದ್ಯಾರ್ಥಿಗಳು ನವೋದಯ ಮತ್ತು 26 ಮಕ್ಕಳು ಮೊರಾರ್ಜಿ ಶಾಲೆಗಳಿಗೆ ತೇರ್ಗಡೆ ಆಗಿದ್ದು, 76.4 ಲಕ್ಷ ಶೈಕ್ಷಣಿಕ ಉಪಯೋಗ ಪಡೆದಿದ್ದಾರೆ. ಈ ಶಿಬಿರ ಶಿವಮೊಗ್ಗ ಜಿಲ್ಲೆಯ ಹುಂಚ, ನೆಲವಾಗಿಲು ಮತ್ತು ಕೋಣಂದೂರು ಸ್ಥಳಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ.









Discussion about this post