ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ : ಜಿಲ್ಲೆಯಲ್ಲಿ ಮೊಬೈಲ್ ನೆಟ್‌ವರ್ಕ್ ವ್ಯವಸ್ಥೆಯಲ್ಲಿ ಇನ್ನಷ್ಟು ಸುಧಾರಣಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ವಿವಿಧ ಮೊಬೈಲ್ ಕಂಪನಿಗಳ ವ್ಯವಸ್ಥಾಪಕರೊಂದಿಗೆ ನಿರಂತರವಾಗಿ ಸಮಾಲೋಚನೆ ನಡೆಸಲಾಗುತ್ತಿದ್ದು, ವ್ಯವಸ್ಥಿತ ಮೊಬೈಲ್ ಹಾಗೂ ಇಂಟರ್‌ನೆಟ್ ಸೇವೆ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಅವರು ಹೇಳಿದರು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಅವರು ಇಂದು ಜಿಲ್ಲೆಯಲ್ಲಿ ಮೊಬೈಲ್ ನೆಟ್‌ವರ್ಕ್ ಹಾಗೂ ಇಂಟರ್‌ನೆಟ್ ಸೇವೆ ಒದಗಿಸುತ್ತಿರುವ ಜಿಲ್ಲೆಯ ವಿವಿಧ ಕಂಪನಿಗಳ ವ್ಯವಸ್ಥಾಪಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈ ಸಂಬಂಧ ಈಗಾಗಲೇ ವಿವಿಧ ಮೊಬೈಲ್ ಕಂಪನಿಗಳಿಗೆ ತಾಲೂಕುಗಳನ್ನು ಹಂಚಿಕೆ ಮಾಡಿ, ಟವರ್‌ಗಳನ್ನು ನಿರ್ಮಿಸಿ, ಉತ್ತಮ ಸೇವೆ ಒದಗಿಸುವಂತೆ ಸೂಚಿಸಲಾಗಿದೆ ಎಂದರು.
ಮಲೆನಾಡು ಭಾಗ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ನೆಟ್‌ವರ್ಕ್‌ಗಳಲ್ಲಿ ವ್ಯತ್ಯಯವಾಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ದೂರುಗಳು ಬರುತ್ತಿರುವುದನ್ನು ಜಿಲ್ಲಾಡಳಿತ ಪರಿಗಣಿಸಿದೆ. ಉತ್ತಮ ಸೇವೆ ಒದಗಿಸಲು ಟವರ್‌ಗಳನ್ನು ನಿರ್ಮಿಸುವ ಸಂಬಂಧ ಎದುರಾಗಿರುವ ತಾಂತ್ರಿಕ ಮತ್ತು ಆಡಳಿತಾತ್ಮಕ ಸಮಸ್ಯೆಗಳ ಇತ್ಯರ್ಥಕ್ಕೆ ಆಯಾ ವಿಭಾಗದ ಉಪವಿಭಾಗಾಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವಂತೆ ಹಾಗೂ ತ್ವರಿತಗತಿಯಲ್ಲಿ ಟವರ್‌ಗಳನ್ನು ನಿರ್ಮಿಸುವಂತೆ ಸೂಚಿಸಲಾಗಿದೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್‌ನೆಟ್ ಸೌಲಭ್ಯ ಪಡೆಯಲಿಚ್ಚಿಸುವ ಸರ್ಕಾರಿ ಕಚೇರಿಗಳು, ಗ್ರಾಮ ಪಂಚಾಯಿತಿಗಳು, ಶಾಲಾ-ಕಾಲೇಜುಗಳು ಹಾಗೂ ಸಾರ್ವಜನಿಕರ ಅಗತ್ಯಗಳಿಗೆ ಕೂಡಲೆ ಸೇವೆ ಲಭ್ಯವಾಗಬೇಕು. ಕೊರೋನದಂತಹ ಕಾರಣಗಳಿಂದಾಗಿ ನಗರಗಳಿಂದ ಗ್ರಾಮೀಣ ಪ್ರದೇಶಗಳಿಗೆ ಹಿಂದಿರುಗಿರುವ ಯುವ ಉದ್ಯೋಗಿಗಳಿಗೆ ನೆಟ್‌ವರ್ಕ್‌ನ ಅಗತ್ಯವಿದ್ದು, ಅಂತಹ ಯುವಕರಿಗೆ ಯಾವುದೇ ಅಡಚಣೆ ಉಂಟಾಗದಂತೆ ಸೇವೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಸಭೆಯಲ್ಲಿ ಬಿ.ಎಸ್.ಎನ್.ಎಲ್., ಜಿಯೋ ಸೇರಿದಂತೆ ಎಲ್ಲಾ ಮೊಬೈಲ್ ಕಂಪನಿಗಳ ವ್ಯವಸ್ಥಾಪಕರು, ಕಂಪನಿಗಳ ಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post