ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಶಿವಮೊಗ್ಗ-ರಾಣೆಬೆನ್ನೂರು ರೈಲು ಮಾರ್ಗದ ಯೋಜನೆಗೆ ಬಳಸಿಕೊಳ್ಳುವ ಕುಷ್ಕಿ ಜಮೀನಿಗೆ ಪ್ರತಿ ಎಕರೆಗೆ 1.5 ಕೋಟಿ ರೂ. ಪರಿಹಾರ ನೀಡಬೇಕು ಎಂದು ರೈತರು ಮನವಿ ಮಾಡಿದ್ದಾರೆ.
ಈ ಕುರಿತಂತೆ ನಿರಾಶ್ರಿತ ರೈತರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮನವಿ ಮಾಡಿದ್ದಾರೆ.
ಉದ್ದೇಶಿತ ರೈಲು ಮಾರ್ಗದ ಕೊನಗವಳ್ಳಿ, ಸೇವಾಲಾಲ್ ನಗರ, ಮುದುವಾಲ, ರಾಮನಗರ, ಕೊಂಡಜ್ಜಿ, ಮಲ್ಲಾಪುರ, ನಾರಾಯಣಪುರ ಮತ್ತು ನ್ಯಾಮತಿ ತಾಲೂಕಿನ ಲಕ್ಕಿನಕೊಪ್ಪ, ಸುರಗೊಂಡನಕೊಪ್ಪ ಗ್ರಾಮಗಳಲ್ಲಿ ರೈತರಿಗೆ ಮಾಹಿತಿ ಇಲ್ಲದೇ ಸರ್ವೆ ಮಾಡಿದ್ದು, ಇದನ್ನು ರೈತರು ತಡೆದಿದ್ದಾರೆ. ಅಲ್ಲದೇ ಹಾಲಿ ಸಂಸದರು, ಶಾಸಕರು ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದರು. ಆದರೆ, ದಾವಣಗೆರೆ ಜಿಲ್ಲಾಧಿಕಾರಿಗಳು ಹಾಗೂ ರೈಲ್ವೆ ಇಲಾಖೆ ಭೂಸ್ವಾಧೀನಾಧಿಕಾರಿಗಳು ಸೂಕ್ತ ಬೆಲೆ ನೀಡದೇ ರೈತರಿಗೆ ಅನ್ಯಾಯ ಮಾಡಲು ಹೊರಟಿದ್ದಾರೆ. ಅವರು ಕೊಡುವ ಬೆಲೆಯಲ್ಲಿ ಒಂದು ಸೈಟ್ ಕೂಡಾ ಬರುವುದಿಲ್ಲ. ಹೀಗಾಗಿ, ನಮ್ಮ ಮಕ್ಕಳಿಗೆ ಜೀವನಾಂಶವಾಗಿದ್ದ ಭೂಮಿಯನ್ನು ಸೂಕ್ತ ಪರಿಹಾರ ಕೊಡದೇ ಯಾವುದೇ ಕಾರಣಕ್ಕೂ ಸ್ವಾಧೀನಪಡಿಸಿಕೊಳ್ಳಲು ಬಿಡುವುದಿಲ್ಲ ಎಂದು ಆಗ್ರಹಿಸಿದ್ದಾರೆ.
ರೈತರ ಬೇಡಿಕೆಗಳೇನು?
- ಪ್ರತಿ ಎಕರೆ ಕುಷ್ಕಿ ಜಮೀನಿಗೆ 1.5 ಕೋಟಿ ಪರಿಹಾರ ನೀಡಬೇಕು
- ಇಲ್ಲವಾದಲ್ಲಿ ರೈತರಿಗೆ ಅದೇ ಗ್ರಾಮದಲ್ಲಿ ಪರ್ಯಾಯ ಜಮೀನು ನೀಡಬೇಕು
- ಪ್ರತಿ ಎಕರೆ ಅಡಕೆ ತೋಟಕ್ಕೆ 2.5 ಕೋಟಿ ಪರಿಹಾರ ನೀಡಬೇಕು
- ನಿರಾಶ್ರಿತರ ರೈತರ ಕುಟುಂಬಕ್ಕೆ ಉದ್ಯೋಗ ಕೊಡಬೇಕು
- ರೈತರು ಜಮೀನಿಗೆ ಹೋಗಲು ರಸ್ತೆ ಮಾಡಿಕೊಡಬೇಕು
- ಸರ್ಕಾರಿ ಜಮೀನು, ಸರ್ಕಾರಿ ಪಡಾ, ಬಗರ್ ಹುಕುಂ, ಗ್ರಾಮಠಾಣಾಗಳಿಗೆ ಸೂಕ್ತವಾದ ಜಮೀನು ನಿಗದಿಪಡಿಸಬೇಕು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post