ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ವಾಯು ಮಾಲಿನ್ಯ ನಿಯಂತ್ರಣ ಉದ್ದೇಶದಿಂದ ಸ್ಮಾರ್ಟ್ ಸಿಟಿ ಯೋಜನೆಯಡಿ ಒಟ್ಟಾರೆಯಾಗಿ 120 ಕಿಮೀ ಉದ್ದ ಪ್ರತ್ಯೇಕ ಸೈಕಲ್ ಲೇನ್ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ವಟಾರೆ ಅವರು ತಿಳಿಸಿದರು.
ಅವರು ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ವಿವಿಧ ಕಾಮಗಾರಿಗಳ ಹಾಗೂ ಕಾರ್ಯಕ್ರಮಗಳ ಮಾಹಿತಿಯನ್ನು ನೀಡಿದರು.
ಪ್ರತ್ಯೇಕ ಸೈಕಲ್ ಲೇನ್ ನಿರ್ಮಾಣದಿಂದ ಸೈಕಲ್ ಸವಾರರಿಗೆ ಉತ್ತೇಜನ ದೊರೆಯಲಿದೆ. ಇದೇ ರೀತಿ ಸ್ಮಾರ್ಟ್ ಸಿಟಿ ಯೋಜನೆಯಡಿ ಮೈಸೂರು ನಗರದಲ್ಲಿರುವ ಟ್ರಿಣ್ ಟ್ರಿಣ್ ಮಾದರಿಯಲ್ಲಿ ಸಾರ್ವಜನಿಕ ಸೈಕಲ್ ಶೇರಿಂಗ್ ವ್ಯವಸ್ಥೆಯನ್ನು ಸಹ ಅನುಷ್ಟಾನಗೊಳಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಮೋಟಾರು ರಹಿತ ದಿನ
ಗಾಂಧೀ ಜಯಂತಿ ಅಂಗವಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮೋಟಾರು ರಹಿತ ಸಂಚಾರವನ್ನು ಉತ್ತೇಜಿಸಲು ಇನ್ನು ಮುಂದೆ ಪ್ರತಿ ಮೂರನೆಯ ಶನಿವಾರ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ತುರ್ತು ಸಂದರ್ಭ ಹೊರತುಪಡಿಸಿ ಮೋಟಾರು ವಾಹನ ಬಳಸದೇ ಇರಲು ನಿರ್ಧರಿಸಲಾಗಿದೆ.
ಸೈಕ್ಲಥಾನ್ ಮತ್ತು ವಾಕಥಾನ್
ಸಾರ್ವಜನಿಕರಲ್ಲಿ ಪರಿಸರ ಮಾಲಿನ್ಯದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಅಕ್ಟೋಬರ್ 1ರಂದು ನಗರದ ಗಾಂಧೀ ಉದ್ಯಾನದಿಂದ ವಿನೋಬಾ ನಗರದ ಫ್ರೀಡಂ ಪಾರ್ಕ್‌ವರೆಗೆ ವಾಕಥಾನ್ ಮತ್ತು ಸೈಕ್ಲಥಾನ್ ಆಯೋಜಿಸಲಾಗಿದೆ. ಬೆಳಿಗ್ಗೆ 7.30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಶಿವಮೊಗ್ಗ ಸೈಕಲ್ ಕ್ಲಬ್ ಸಹಯೋಗದಲ್ಲಿ ಸೈಕ್ಲಥಾನ್ ನಡೆಸಲಾಗುವುದು. ಆಸಕ್ತ ಸಾರ್ವಜನಿಕರು ಸಹ ಇದರಲ್ಲಿ ಭಾಗವಹಿಸುವಂತೆ ಆಯುಕ್ತರು ಮನವಿ ಮಾಡಿದರು.
ಸ್ಮಾರ್ಟ್ ಸಿಟಿ ಕಾಮಗಾರಿ ಚುರುಕು
ಲಾಕ್‌ಡೌನ್ ಬಳಿಕ ಕಾರ್ಮಿಕರ ಕೊರತೆಯಿಂದ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಸ್ವಲ್ಪ ಹಿನ್ನಡೆ ಉಂಟಾಗಿತ್ತು. ಈಗ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರನ್ನು ಕರೆಯಿಸಿ ಕಾಮಗಾರಿಗಳಿಗೆ ಚುರುಕು ಮೂಡಿಸಲಾಗಿದೆ. ಶಿವಮೊಗ್ಗ ಸ್ಮಾರ್ಟ್ ಸಿಟಿ ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿದ್ದು, ರಾಷ್ಟ್ರ ಮಟ್ಟದಲ್ಲಿ 21ನೇ ಸ್ಥಾನದಲ್ಲಿದೆ. ಇದುವರೆಗೆ ಸರ್ಕಾರದಿಂದ 307ಕೋಟಿ ರೂ. ಬಿಡುಗಡೆಯಾಗಿದ್ದು, 157ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದರು.
ಟುಲಿಪ್ ಯೋಜನೆಯಡಿ ತರಬೇತಿ
ಅರ್ಬನ್ ಲರ್ನಿಂಗ್ ಇಂಟರ್ನ್‌ಶಿಪ್ ಯೋಜನೆಯಡಿ ಇಂಜಿನಿಯರಿಂಗ್ ಹಿನ್ನೆಲೆಯ ಅಭ್ಯರ್ಥಿಗಳಿಗೆ ತಿಂಗಳಿಗೆ 5 ಸಾವಿರ ರೂ. ಸ್ಟೈಫಂಡ್ ನೀಡಲಾಗುತ್ತಿದೆ. ಒಟ್ಟು 50 ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅವಕಾಶವಿದ್ದು, ಇದೀಗ 6ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಯನ್ನು https://internship.aicte-india.org ಜಾಲತಾಣದಲ್ಲಿ ಪಡೆಯಬಹುದಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಅಕ್ಟೋಬರ್ 15 ಕಡೆ ದಿನಾಂಕವಾಗಿದೆ ಎಂದು ಅವರು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post