ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮಹಿಳೆಯರಿಗೆ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದರೆ ನಮಗೇ ತರಬೇತಿ ನೀಡಿ, ಬಂದೂಕು ಕೊಡಿ. ನಮ್ಮ ಹೆಣ್ಣು ಮಕ್ಕಳನ್ನು ನಾವೇ ರಕ್ಷಣೆ ಮಾಡಿಕೊಳ್ಳುತ್ತೇವೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಮೂರ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹತ್ರಾಸ್ ಅತ್ಯಾಚಾರ ವಿರೋಧಿಸಿ, ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಅವರು ಮಾತನಾಡಿದರು.
ಉತ್ತರ ಪ್ರದೇಶದಲ್ಲಿ ಮನಿಶಾ ವಾಲ್ಮೀಕಿ ಎಂಬ ದಲಿತ ಯವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಭೀಕರವಾಗಿ ಆಕೆಯನ್ನು ಹತ್ಯೆ ಮಾಡಿರುವ ಕೃತ್ಯ ನಾಗರಿಕ ಸಮಾಜಕ್ಕೆ ಕಳಂಕವಾಗಿದೆ. ಯುವತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ನಂತರ ಆಕೆಯ ಶವವನ್ನು ಮಧ್ಯರಾತ್ರಿಯಲ್ಲಿ ಪೊಲೀಸರೇ ಅಂತ್ಯ ಸಂಸ್ಕಾರ ನಡೆಸಿರುವುದು ಏಕೆ ಎಂದು ಪ್ರಶ್ನಿಸಿದರು.
ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಹಾಗೂ ಸಂಘ ಪರಿವಾರದ ಮರೆಯಲ್ಲೇ ದಲಿತರ ಮಾರಣಹೋಮ ನಡೆಯುತ್ತಿದೆ. ಕಾನೂನು ಸುವ್ಯವಸ್ಥೆ, ದಲಿತರು ಹಾಗೂ ಹೆಣ್ಣುಮಕ್ಕಳಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿರುವ ಯೋಗಿ ಆದಿತ್ಯನಾಥ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಡಿಎಸ್’ಎಸ್’ನ ಶಿವಬಸಪ್ಪ, ವಿ. ವಿನೋದ್, ಎ. ಅರ್ಜುನ್, ಎಂ. ಏಳುಕೋಟಿ, ಏಳುಮಲೈ, ಆರ್. ಸುವರ್ಣಮ್ಮ, ಬಿ. ಕೃಷ್ಣಪ್ಪ, ಎನ್. ಮಂಜುನಾಥ್, ಯು. ಮಹದೇವಪ್ಪ, ಸಿ. ಚನ್ನಪ್ಪ, ನಾಗರಾಜ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post