ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣ ಕ್ರಮವಾಗಿ ಮಹಾನಗರ ಪಾಲಿಕೆಯು ಪ್ರಸಕ್ತ ಸಾಲಿನಲ್ಲಿ ನಾಡಹಬ್ಬ ದಸರಾವನ್ನು ಸರಳವಾಗಿ ಆಚರಿಸಲು ನಿರ್ಣಯ ಕೈಗೊಂಡಿದೆ ಎಂದು ಮೇಯರ್ ಸುವರ್ಣ ಶಂಕರ್ ಹೇಳಿದರು.
ಅವರು ಇಂದು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಈ ಕುರಿತು ಮಾಹಿತಿ ನೀಡಿ ಮಾತನಾಡಿದ ಅವರು, ಅತ್ಯಂತ ಕಡಿಮೆ ಬಜೆಟ್‌ನಲ್ಲಿ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಅಕ್ಟೋಬರ್ 17ರಂದು ಕೋಟೆ ರಸ್ತೆಯ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೇವಿ ಪ್ರತಿಷ್ಠಾಪನೆ ಮಾಡಲಾಗುವುದು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ವಿವಿಧ ಇಲಾಖೆಗಳ ಕೊರೋನ ವಾರಿಯರ್ಸ್‌ಗಳಾದ ಪೌರಕಾರ್ಮಿಕರು, ನೀರು ಸರಬರಾಜು ಸಿಬ್ಬಂದಿಗಳು, ಒಳಚರಂಡಿ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಆರೋಗ್ಯ ಇಲಾಖೆಯ ಶುಶ್ರೂಷಕಿಯರು ಹಾಗೂ ವೈದ್ಯರುಗಳಿಂದ ಚಾಲನೆ ನೀಡಲಾಗುವುದು ಎಂದರು.
ಅಲ್ಲದೇ ಪ್ರತಿವರ್ಷದಂತೆ ಸ್ವಾಗತ ಸಮಿತಿಯಡಿಯಲ್ಲಿ ವಿವಿಧ ದಸರಾ ಸಮಿತಿಗಳನ್ನು ರಚಿಸದೇ ಸರಳವಾಗಿ ಆಚರಣೆ ಮಾಡುವ ಸಂಬಂಧ ದಸರಾ ಸ್ವಾಗತ ಮತ್ತು ಉತ್ಸವ ಸಮಿತಿಯನ್ನು ಮಹಾಪೌರರ ಅಧ್ಯಕ್ಷತೆಯಲ್ಲಿ ಹಾಗೂ ಅಲಂಕಾರ ಸಮಿತಿಯನ್ನು ವಿರೋಧ ಪಕ್ಷದ ನಾಯಕ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ. ಪಾಲಿಕೆಯ ಎಲ್ಲಾ ಸದಸ್ಯರುಗಳು ಈ ಸಮಿತಿಗಳಿಗೆ ಸದಸ್ಯರಾಗಿರುತ್ತಾರೆ ಎಂದವರು ತಿಳಿಸಿದರು.
ಅಕ್ಟೋಬರ್ 26ರಂದು ವಿಜಯ ದಶಮಿ ಪ್ರಯುಕ್ತ ಈ ಬಾರಿ ಮೆರವಣಿಗೆ ಇರುವುದಿಲ್ಲ. ಆದರೆ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳ ಸಮಿತಿಗಳಿಂದ ಮಾತ್ರ ತಮ್ಮ ದೇವರುಗಳನ್ನು ಬನ್ನಿ ಮುಡಿಯುವ ಸ್ಥಳವಾದ ಫ್ರೀಡಂ ಪಾರ್ಕ್‌ಗೆ ಮೆರವಣಿಗೆ ಇಲ್ಲದೇ ನೇರವಾಗಿ ಕರೆತರುವಂತೆ ಮನವಿ ಮಾಡಲಾಗಿದೆ. ಹಾಗಾಗಿ ಖಾಸಗಿ ದೇವಸ್ಥಾನಗಳ ದೇವರು ಈ ಬಾರಿ ಬನ್ನಿ ಮುಡಿಯವ ಸ್ಥಳಕ್ಕೆ ಬರುವುದಿಲ್ಲ ಎಂದರು.
ಈ ವರ್ಷವೂ ಎಲ್ಲ ದೇವಸ್ಥಾನಗಳ ಅಲಂಕಾರಕ್ಕಾಗಿ ಪಾಲಿಕೆ ವತಿಯಿಂದ ಧನಸಹಾಯ ನೀಡಲಾಗುವುದು ಹಾಗೂ ನಗರದಾದ್ಯಂತ ದೀಪಾಲಂಕಾರ ಮಾಡಲಾಗುವುದು. ಸಾರ್ವ ಜನಿಕರಿಗೆ ಬನ್ನಿ ಮುಡಿಯುವ ಸ್ಥಳಕ್ಕೆ ಪ್ರವೇಶ ಇರುವುದಿಲ್ಲ. ಆದರೆ ಸ್ಥಳೀಯ ಟಿವಿ ಚಾಲನ್‌ಗಳ ಮೂಲಕ ನೇರ ಪ್ರಸಾರ ಮಾಡಲಾ ಗುವುದು. ಸಾರ್ವಜನಿಕರು ತಮ್ಮ ಮನೆಯಲ್ಲಿಯೇ ಕುಳಿತು ಕಾರ್ಯಕ್ರಮ ವೀಕ್ಷಿಸಬಹುದು. ಕಳೆದ ವರ್ಷ ದಸರಾ ಆಚರಣೆಗೆ 163 ಲಕ್ಷ ರೂ.ವೆಚ್ಚ ಮಾಡಲಾಗಿತ್ತು. ಈ ಬಾರಿ 38 ಲಕ್ಷ ರೂ.ಗಳನ್ನು ತೆಗೆದಿರಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪಮೇಯರ್ ಸುರೇಖಾ ಮುರಳೀಧರ್, ಸದಸ್ಯರುಗಳಾದ ಎಸ್.ಎನ್. ಚನ್ನಬಸಪ್ಪ, ಇ.ವಿಶ್ವಾಸ್, ಯು.ಎಚ್. ವಿಶ್ವನಾಥ್, ಕೆ.ಟಿ. ಶ್ರೀನಿವಾಸ್, ಆಯುಕ್ತ ಚಿದಾನಂದ ವಟಾರೆ ಮುಂತಾದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post