ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಈಗಾಗಲೇ ಬಹಳಷ್ಟು ರಜೆಯನ್ನು ಅನುಭವಿಸಿದ್ದೀರಿ. ಈಗ ಒಳ್ಳೆಯ ಶಾಲೆಯಲ್ಲಿ ಓದುವ ಭಾಗ್ಯ ನಿಮಗೆ ದೊರೆತಿದ್ದು, ಚೆನ್ನಾಗಿ ಕಲಿಯಿರಿ ಎಂದು ಶಾಲಾ ಮಕ್ಕಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕರೆ ನೀಡಿದರು.
ದುರ್ಗಿಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ಹೊಸದಾಗಿ ಆರಂಭಿಸಲಾಗಿರುವ ಸ್ಮಾರ್ಟ್ ಕ್ಲಾಸ್ ವೀಕ್ಷಿಸಿ ಅವರು ಮಾತನಾಡಿದರು.
ಜೂನ್ ತಿಂಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ನಿಗದಿ ಪಡಿಸಲಾಗಿದೆ. ಇನ್ನುಳಿದ 4-5 ತಿಂಗಳಲ್ಲಿ ಕೇವಲ ಓದಿನ ಕಡೆಗೆ ಮಾತ್ರ ಗಮನ ನೀಡಿ. ಈಗಾಗಲೇ ಸಾಕಷ್ಟು ರಜೆ ಅನುಭವಿಸಿದ್ದೀರಿ. ಒಳ್ಳೆ ಶಾಲೆಯಲ್ಲಿ ಕಲಿಯುವ ಭಾಗ್ಯ ನಿಮಗೆ ದೊರೆತಿದೆ. ಚೆನ್ನಾಗಿ ಕಲಿತರೆ ನಿಮಗೆ ಮಾತ್ರವಲ್ಲ, ನಿಮ್ಮ ತಂದೆ ತಾಯಂದಿರಿಗೆ, ಶಿಕ್ಷಕರಿಗೆ ಎಲ್ಲರಿಗೂ ಸಂತೋಷ. ವಿಶೇಷವಾಗಿ ಹೆಣ್ಣು ಮಕ್ಕಳ ಶಿಕ್ಷಣ ಎಸ್‌ಎಸ್‌ಎಲ್‌ಸಿಗೆ ಕೊನೆಯಾಗಬಾರದು. ಮುಂದೆಯೂ ಛಲದಿಂದ ಕಲಿಯಬೇಕು. ಶಾಲೆಗೆ ಉತ್ತಮ ಫಲಿತಾಂಶವನ್ನು ತನ್ನಿ’ ಎಂದು ಹಾರೈಸಿದರು.
ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ವಟಾರೆ ಅವರು ಸ್ಮಾರ್ಟ್ ಕ್ಲಾಸ್ ಯೋಜನೆ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು.
ಒಟ್ಟು 45 ಶಾಲೆಗಳಲ್ಲಿ ಡಿಜಿಟಲ್ ಕ್ಲಾಸ್ ರೂಂ ಸಜ್ಜುಗೊಳಿಸಲಾಗಿದೆ. ಅತ್ಯಾಧುನಿಕ ಡಿಜಿಟಲ್ ಕ್ಲಾಸ್‌ನಲ್ಲಿ ಇಂಟರ್ಯಾಕ್ಟೀವ್ ಬೋರ್ಡ್, ವಿದ್ಯಾರ್ಥಿಗಳಿಗೆ ಲ್ಯಾಟ್‌ಟಾಪ್, ಸಿಸಿ ಕ್ಯಾಮರಾ ಸೇರಿದಂತೆ ಎಲ್ಲಾ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಡಿಜಿಟಲ್ ಕ್ಲಾಸ್‌ರೂಂ ಬಳಕೆ ಬಗ್ಗೆ ಈಗಾಗಲೇ 300
ಶಿಕ್ಷಕರಿಗೆ ತರಬೇತಿಯನ್ನು ಸಹ ನೀಡಲಾಗಿದೆ ಎಂದು ಹೇಳಿದರು.ಸ್ಮಾರ್ಟ್ ಕ್ಲಾಸ್‌ನಿಂದಾಗಿ ನಮ್ಮ ಕಲಿಕೆಗೆ ಅನುಕೂಲವಾಗಿದೆ. ಪ್ರಾಯೋಗಿಕವಾಗಿ ನೋಡಿ ತಿಳಿದುಕೊಳ್ಳಲು ಸಾಧ್ಯವಾಗಿದೆ. ವಿಡಿಯೊಗಳು ನಮ್ಮ ಕಲಿಕೆಯನ್ನು ಸುಲಭಗೊಳಿಸಿದೆ. ಇಂತಹ ಶಾಲೆಯಲ್ಲಿ ಕಲಿಯುತ್ತಿರುವುದು ಹೆಮ್ಮೆ ತಂದಿದೆ ಎಂದು ಏಳನೆ ತರಗತಿ ವಿದ್ಯಾರ್ಥಿನಿ ವೇದಿಕಾ ಸಚಿವರೊಂದಿಗೆ ಅನುಭವ ಹಂಚಿಕೊಂಡರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಮೇಯರ್ ಸುವರ್ಣಾ ಶಂಕರ್, ಉಪಮೇಯರ್ ಸುರೇಖಾ ಮುರಳೀಧರ್, ರಾಜ್ಯ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್, ಪ್ರಮುಖರಾದ ಎಸ್.ಎನ್. ಚನ್ನಬಸಪ್ಪ(ಚೆನ್ನಿ) ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post