ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಂಕರಘಟ್ಟ: ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಎಲ್ಲ ಸ್ನಾತಕೋತ್ತರ ವಿಭಾಗಗಳು ಮತ್ತು ಸ್ನಾತಕ ಪದವಿ ಕಾಲೇಜುಗಳನ್ನು ಆರಂಭಿಸಿದ್ದು, ಕಟ್ಟುನಿಟ್ಟಿನ ಪ್ರಮಾಣೀಕೃತ ಕಾರ್ಯಾಚರಣ ವ್ಯವಸ್ಥೆ ಅನುಸರಿಸಬೇಕು ಎಂದು ವಿವಿಯ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಸೂಚಿಸಿದ್ದಾರೆ.
ಕುವೆಂಪು ವಿಶ್ವವಿದ್ಯಾಲಯದ ಶೈಕ್ಷಣಿಕ ವಿಭಾಗವು ಎಲ್ಲ ಕಾಲೇಜುಗಳ ಪ್ರಾಂಶುಪಾಲರೊಂದಿಗೆ ಆಯೋಜಿಸಿದ್ದ ವಿಡಿಯೋ ಸಂವಾದ ಸಭೆಯಲ್ಲಿ ಕೋವಿಡ್19 ತಡೆಗಾಗಿ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿ ಮಾತನಾಡಿದರು.ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ಸ್ನಾತಕೋತ್ತರ ಕೇಂದ್ರಗಳು ಮತ್ತು ಸ್ನಾತಕ ಕಾಲೇಜುಗಳು ಕೋವಿಡ್19 ತಡೆಯುವ ಸಲುವಾಗಿ ಕರ್ನಾಟಕ ಸರ್ಕಾರ ಹೊರಡಿಸಿರುವ ಪ್ರಮಾಣಿತ ಕಾರ್ಯಾಚರಣಾ ವಿಧಾನ ಪಾಲಿಸುವುದು ಕಡ್ಡಾಯ ಎಂದು ತಿಳಿಸಿದರು.
ವಿವಿ ವ್ಯಾಪ್ತಿಯಲ್ಲಿ ಕಳೆದ ವರ್ಷ ಸ್ನಾತಕೋತ್ತರ ದ್ವಿತೀಯ ವರ್ಷ ಮತ್ತು ಸ್ನಾತಕ ತೃತೀಯ ವರ್ಷದಲ್ಲಿದ್ದ ವಿದ್ಯಾರ್ಥಿಗಳಿಗೆ 15 ದಿನಗಳ ಸಂಪರ್ಕ
ತರಗತಿಗಳನ್ನು ಕೈಗೊಂಡು ಪರೀಕ್ಷೆ ಮುಗಿಸಿ ಸುರಕ್ಷಿತವಾಗಿ ಪದವಿ ಪೂರ್ಣಗೊಳಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಮುಂದುವರಿದು ನವೆಂಬರ್ ತಿಂಗಳಿನಿಂದ ಸ್ನಾತಕೋತ್ತರ ದ್ವಿತೀಯ, ಸ್ನಾತಕ ತೃತೀಯ ವರ್ಷದ ತರಗತಿಗಳನ್ನು ಆರಂಭಿಸಲಾಗಿತ್ತು. ಪ್ರಸ್ತುತ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಕಾಲೇಜು ಕ್ಯಾಂಪಸ್‌ಗಳಿಗೆ ಬರಮಾಡಿಕೊಳ್ಳಲಾಗುತ್ತಿದೆ.ಈ ಸಂದರ್ಭದಲ್ಲಿ 6 ಅಡಿಗಳ ಅಂತರ ಕಾಯ್ದುಕೊಳ್ಳುವ ಪಟ್ಟಿಗಳು, ಕಡ್ಡಾಯವಾಗಿ ಮಾಸ್ಕ್ ಬಳಕೆ, ಪ್ರವೇಶದ್ವಾರ ಹಾಗೂ ಅಗತ್ಯವಿದ್ದೆಡೆ ಸ್ಯಾನಿಟೈಸರ್ ಅಳವಡಿಕೆ, ಕ್ಯಾಂಪಸ್ ಕಟ್ಟಡ ಹಾಗೂ ಹಾಸ್ಟೆಲ್‌ಗಳ ಸ್ಯಾನಿಟೈಸೇಶನ್, ತರಗತಿಗಳಲ್ಲಿ ಅಂತರ ಕಾಪಾಡುವಂತೆ ಕುರ್ಚಿಗಳ ಅಳವಡಿಕೆಯನ್ನು ಕಡ್ಡಾಯವಾಗಿ ಅನುಸರಿಸಲಾಗುತ್ತಿದೆ. ತರಗತಿಯಲ್ಲಿ ಶೇ. 50ಕ್ಕಿಂತ ಅಧಿಕ ವಿದ್ಯಾರ್ಥಿಗಳಿದ್ದರೆ ಮತ್ತೊಂದು ತರಗತಿ ಮಾಡುವಂತೆ ಸೂಚಿಸಲಾಗಿದೆ. ಆನ್‌ಲೈನ್ ಆಥವಾ ಆಫ್‌ಲೈನ್ ಯಾವುದಾದರೂ ಒಂದು ಮಾರ್ಗದಲ್ಲಿ ವಿದ್ಯಾರ್ಥಿಗಳು ಹಾಜರಿರುವುದನ್ನು ಕಡ್ಡಾಯಗೊಳಿಸಲಾಗಿದೆ. ಸರ್ಕಾರ ಕಳುಹಿಸಿಕೊಟ್ಟಿರುವ ಎಲ್ಲ ಪ್ರಮಾಣಿತ ಕಾರ್ಯಚರಣಾ ವಿಧಾನದ ಕ್ರಮಗಳನ್ನು ಅನುಸರಿಸುತ್ತಿರುವುದನ್ನು ಕಾಲೇಜುಗಳಿಂದ ಖಾತರಿಪಡಿಸಿಕೊಳ್ಳಲಾಗಿದೆ ಹಾಗೂ ತಪ್ಪಿದಲ್ಲಿ ಸೂಕ್ತ ಕ್ರಮದ ಎಚ್ಚರಿಕೆ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಎಲ್ಲ ಪದವಿ ಕಾಲೇಜುಗಳ ಪ್ರಾಂಶುಪಾಲರು, ಸ್ನಾತಕೋತ್ತರ ಕೇಂದ್ರಗಳ ನಿರ್ದೇಶಕರು, ಶೈಕ್ಷಣಿಕ ವಿಭಾಗದ ಉಪಕುಲಸಚಿವ ಡಾ. ಗೋವಿಂದರಾಜು ಸೇರಿದಂತೆ ಎಲ್ಲ ಸಂಬಂಧಿತ ಸಿಬ್ಬಂದಿ ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post