ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅತ್ಯಂತ ಚಿಕ್ಕ ವಯೋಮಾನದಲ್ಲಿ ಸೇವೆಯಲ್ಲಿ ಮಾದರಿಯಾಗುವಂತಹ ಸೇವಾಕಾರ್ಯಗಳನ್ನು ಮಾಡಿದ ಹಿಂದೂ ಸೇವಾ ಪ್ರತಿಷ್ಠಾನದ ಸ್ಥಾಪಕ ಅಜಿತ್ ಕುಮಾರ್ ಅವರಂತೆಯೇ ಸೇವೆ ಎಲ್ಲರ ಜೀವನದ ಧ್ಯೇಯವಾಗಲಿ ಎಂದು ಆರ್’ಎಸ್’ಎಸ್ #RSS ದಕ್ಷಿಣ ಪ್ರಾಂತ ಸಹಕಾರ್ಯನಿರ್ವಾಹಕ ಟಿ. ಪಟ್ಟಾಭಿರಾಮ್ ಕರೆ ನೀಡಿದರು.
ಸಹಚೇತನ ನಾಟ್ಯಾಲಯದ ವತಿಯಿಂದ ಜರುಗಿದ ಭಾರತೀಯಂ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಜಿತ ಶ್ರೀ ಪುರಸ್ಕಾರ್ 2023 ಪ್ರದಾನ ಮಾಡಿ ಅವರು ಮಾತನಾಡಿದರು.
ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರಾಗಿ ದೇಶ ಸೇವೆಗೆ ಜಿಗಿದು ಕರ್ನಾಟಕ ಪ್ರಾಂತದಲ್ಲಿಯೇ ಮನೆಮನೆಗೆ ಸೇವೆಯ ದೀಪಪ್ರಜ್ವಲನೆ ಮಾಡಿದ ಧೀಮಂತ ನಮ್ಮ ಹಿಂದೂ ಸೇವಾ ಪ್ರತಿಷ್ಠಾನದ ಸ್ಥಾಪಕ ಶ್ರೀ ಅಜಿತ್ ಕುಮಾರ್ ಅವರು ಎಂದು ಸ್ಮರಿಸಿದರು.
ಇಲೆಕ್ಟ್ರಿಕಲ್ ಹಾಗೂ ಮೆಕ್ಯಾನಿಕಲ್ ಎರಡೂ ಇಂಜಿನಿಯರಿಂಗ್ ಪದವಿಯಲ್ಲಿ ಚಿನ್ನದ ಪದಕ ವಿಜೇತರಾಗಿ, ತಂದೆ ತಾಯಿಗೆ ತಾವು ಜನ್ಮ ನೀಡಿದ ಆರು ಮಕ್ಕಳ ಮರಣದ ನಂತರ ಬದುಕುಳಿದ ಏಕೈಕ ಕುಲಪುತ್ರನಾಗಿದ್ದರೂ ಸೇವೆಯನ್ನೇ ತಮ್ಮ ಜೀವನದ ಧ್ಯೇಯವಾಗಿಸಿದ ಧೀಮಂತರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಅವರ ತ್ಯಾಗಕ್ಕೆ ಹಾಗೂ ಶ್ರಮಕ್ಕೆ ನೀಡುತ್ತಿರುವ ಸೂಕ್ತ ಗೌರವ ಎಂದರು.
Also read: ಫೆ.26: ಸಂಸ್ಕೃತ ಬೋರ್ಡ್ ರಾರಾಜಿಸುವ 554 ಅಮೃತ್ ಭಾರತ್ ರೈಲು ನಿಲ್ದಾಣಕ್ಕೆ ಪ್ರಧಾನಿ ಶಂಕುಸ್ಥಾಪನೆ
ನೃತ್ಯಗುರು ಸಹನಾ ಚೇತನ್ ಮಾತನಾಡಿ, ಸಹಚೇತನ ಸಂಸ್ಥೆ ಹಿಂದುಳಿದ ಬಡಾವಣೆಯ ಹಾಗೂ ಸರ್ಕಾರಿ ಶಾಲಾ ಮಕ್ಕಳಲ್ಲಿ ನೃತ್ಯದ ಮೂಲಕ ದೇಶಭಕ್ತಿ ಪ್ರೇರಿತ ಕೆಲಸಗಳನ್ನು ನಡೆಸುತ್ತಿರುವುದು ಅನುಕರಣೀಯ ಎಂದರು.
ತಾನೂ ಸಮಾಜದ ಒಂದು ಭಾಗ, ಸಮಾಜವು ನನ್ನ ಕುಟುಂಬದಷ್ಟೇ ಪ್ರಮುಖ ಎಂಬುದು ಮನವರಿಯಾದಾಗ ಮಾತ್ರ ನಮ್ಮ ಕೆಲಸಕ್ಕೆ ಒಂದು ಸಾರ್ಥಕತೆ ದೊರಕುತ್ತದೆ ಎಂದರು.
ಅಜಿತಶ್ರೀ ಪುರಸ್ಕಾರ್ ಪುರಸ್ಕೃತ ಯೋಗಾಚಾರ್ಯೆ ವನಜಾಕ್ಷಿ ನಾಗೇಂದ್ರಪ್ಪ ಮಾತನಾಡಿ, ಸೇವೆಯೊಂದೇ ಸಮಾಜದ ಬೇಡಿಕೆಗಳಿಗೆ ಸ್ಪಂದಿಸುವ ಬಗೆ ಎಂದು ತಮ್ಮ ಸೇವಾಕಾರ್ಯಗಳಿಂದ ತೋರಿಸಿಕೊಟ್ಟವರು ಅಜಿತರು ಎಂದರು.
ಮತ್ತೋರ್ವ ಪುರಸ್ಕೃತ ಪಾಂಡುರಂಗ ಹ. ಪರಾಂಡೆ ಮಾತನಾಡಿ, ನಮ್ಮ ಮುಂದಿನ ಪೀಳಿಗೆಯಲ್ಲಿ ಸಂಸ್ಕಾರಯುತ ಶಿಕ್ಷಣ ಈಗಿನಿಂದಲೇ ಬೆರೆತರೆ, ನಾಡು ನುಡಿಯ ಬಗ್ಗೆ ಗೌರವ ಮೊಳೆತರೆ ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎಂಬ ಮಾತು ಸತ್ಯವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಶ್ರೀ ಜ್ಞಾನೇಶ್ವರಿ ಗೋ ಶಾಲೆಯ ಅಧ್ಯಕ್ಷರಾದ ಚಂದ್ರಹಾಸ ಪಿ. ರಾಯ್ಕರ್ ಅಜಿತಶ್ರೀ ಪುರಸ್ಕಾರ್ ಸ್ವೀಕರಿಸಿ ಮಾತನಾಡಿ, ಬಿಡಾಡಿ ಹಾಗೂ ವಯಸ್ಸಾಗಿರುವ ಗೋವುಗಳನ್ನು ಗೋ ಶಾಲೆಗೆ ತಂದು ಅವುಗಳ ಸ್ವಾಸ್ಥ್ಯ ರಕ್ಷಣೆ, ಪಾಲನೆ ಹಾಗೂ ಪೋಷಣೆಯಲ್ಲಿ ನಿರತರಾಗಿರುವ ನಮ್ಮ ಸಂಸ್ಥೆಗೆ ಅಜಿತರ ಆಶೀರ್ವಾದ ದೊರೆತಂತಾಗಿದೆ. ಗೋಶಾಲೆಯ ಉತ್ತರೋತ್ತರ ಅಭಿವೃದ್ಧಿಗೆ ನಮ್ಮ ಸಂಸ್ಥೆ ಮತ್ತಷ್ಟು ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದು ತಿಳಿಸಿದರು.
ಅಜಿತರಂತಹ ನಿಸ್ವಾರ್ಥ ಸೇವೆಯ ಬದುಕು ಇಂದಿನ ಯುವಪೀಳಿಗೆಗೆ ಮಾದರಿಯಾಗಬೇಕು. ಮಕ್ಕಳಲ್ಲಿನ ನೃತ್ಯದ ಬಗೆಗಿನ ಉತ್ಸಾಹ ರಾಷ್ಟ್ರಭಕ್ತಿಯಾಗಿ ಕಂಗೊಳಿಸಿದ ಬಗೆ ಅನುಕರಣೀಯ ಎಂದು ಡಾ. ನಾಗಮಣಿ ಹೇಳಿದರು.
ಸಂಸ್ಥೆಯ ಅಧ್ಯಕ್ಷರಾದ ಎನ್. ಆರ್. ಪ್ರಕಾಶ್ (ಆಚಿ) ವಂದಿಸಿ, ಡಾ. ಮೈತ್ರೇಯಿ ಆದಿತ್ಯ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post