ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಂಕರಘಟ್ಟ: ಇಡೀ ಜಗತ್ತು ಕೋವಿಡ್-19 ಕಾರಣದಿಂದ ತಲ್ಲಣಗೊಂಡಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ಮುಂದುವರೆಸುವ ಗುರುತರ ಜವಾಬ್ದಾರಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಈ ಶೈಕ್ಷಣಿಕ ವರ್ಷದ ಸ್ನಾತಕೋತ್ತರ ಕೋರ್ಸ್‌ಗಳಿಗೆ ಆನ್‌ಲೈನ್ ಮೂಲಕ ಪ್ರವೇಶಾತಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ ಹೇಳಿದರು.
ವಿವಿಯ ಹೊಸ ಸಿಂಡಿಕೇಟ್ ಸಭಾಂಗಣದಲ್ಲಿ ಇಂದು ನಡೆದ 2020-21ರ ಆನ್‌ಲೈನ್ ಪ್ರವೇಶಾತಿ ವೆಬ್‌ಸೈಟ್ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ರಾಜ್ಯದಲ್ಲೇ ಪ್ರಪ್ರಥಮವಾಗಿ ಸಂಪೂರ್ಣ ಪ್ರವೇಶಾತಿ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಪರಿಚಯಿಸುತ್ತಿರುವ ಹೆಗ್ಗಳಿಕೆ ಕುವೆಂಪು ವಿವಿಗೆ ಸಲ್ಲುತ್ತದೆ. ಕೋವಿಡ್-19 ಮಾರ್ಗಸೂಚಿ ಈಗಲೂ ಅಸ್ತಿತ್ವದಲ್ಲಿರುವ ಕಾರಣ ವಿದ್ಯಾರ್ಥಿಗಳು ಪ್ರವೇಶಾತಿಗೆ ಅರ್ಜಿ ಸಲ್ಲಿಸಲು ಭೌತಿಕವಾಗಿ ಕ್ಯಾಂಪಸ್‌ಗೆ ಬರುವ ಬದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಈಗಾಗಲೇ ನವೆಂಬರ್ 17ರಿಂದ ತರಗತಿಗಳನ್ನು ಪ್ರಾರಂಭಿಸಲು ಯುಜಿಸಿ ನಿರ್ದೇಶನ ನೀಡಿದ್ದು, ಇದರ ಜೊತೆಗೆ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಪ್ರವೇಶ ಪಡೆಯಲು ಅವಕಾಶ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕುಲಸಚಿವ ಪ್ರೊ. ಎಸ್. ಎಸ್. ಪಾಟೀಲ್ ಮಾತನಾಡಿ, ಆನ್‌ಲೈನ್ ಪ್ರವೇಶಾತಿ ಪ್ರಕ್ರಿಯೆ ಒಂದು ವಿನೂತನ ಆಲೋಚನೆಯಾಗಿದ್ದು, ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಏನಾದರೂ ಸಮಸ್ಯೆಯಾದಲ್ಲಿ ಹೆಲ್ಪ್‌ಲೈನ್ ಸೌಲಭ್ಯವಿರುತ್ತದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಒಳಗೊಂಡ ಈ-ಕೈಪಿಡಿ ಮತ್ತು ವೀಡಿಯೋ ಕೂಡ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ. ವಿದ್ಯಾರ್ಥಿಗಳು ತಮ್ಮ ಇಚ್ಛೆಯ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸುವ ಮುನ್ನ ಈ ವೀಡಿಯೋ ಮತ್ತು ಕೈಪಿಡಿಯನ್ನು ನೋಡಿ ಮಾಹಿತಿ ಪಡೆಯಬಹುದು. ನಂತರವೂ ಸಮಸ್ಯೆ ಉಂಟಾದಲ್ಲಿ ಹೆಲ್ಪ್‌ಲೈನ್‌ಗೆ ಕರೆ ಮಾಡಬಹುದು ಎಂದು ಹೇಳಿದರು.
ಪರೀಕ್ಷಾಂಗ ಕುಲಸಚಿವ ಪ್ರೊ.ಪಿ. ಕಣ್ಣನ್, ಶೈಕ್ಷಣಿಕ ವಿಭಾಗದ ಉಪಕುಲಸಚಿವ ಡಾ. ಗೋವಿಂದರಾಜು, ಡಾ. ಧರಣಿಕುಮಾರ್, ವಿವಿಧ ವಿಭಾಗಗಳ ಡೀನರು, ಪ್ರವೇಶಾತಿ ಸಮಿತಿ ಸದ್ಯಸ್ಯರು ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಏನಿದು ಆನ್‌ಲೈನ್ ಪ್ರವೇಶಾತಿ?
ಇದುವರೆಗೂ ವಿವಿಧ ಸ್ಬಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶಾತಿಗೆ ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಗಳು ಭೌತಿಕವಾಗಿ ಅರ್ಜಿಯನ್ನು ಡೆದುಕೊಂಡು ಪೆನ್ ಮತ್ತು ಪೇಪರ್ ಮಾದರಿಯಲ್ಲಿ ನಿಗದಿತ ನಮೂನೆಯನ್ನು ಭರ್ತಿ ಮಾಡಿ ಆಯಾ ವಿಭಾಗಗಳಿಗೆ ಸೂಕ್ತ ದಾಖಲಾತಿಗಳೊಂದಿಗೆ ಸಲ್ಲಿಸಬೇಕಿತ್ತು. ನಂತರ ವಿದ್ಯಾರ್ಥಿಗಳ ಪದವಿ ಅಂಕಪಟ್ಟಿ ಮತ್ತಿತರ ಅಗತ್ಯ ದಾಖಲಾತಿಗಳನ್ನು ಪರಿಶೀಲಿಸಿ ಸಮಗ್ರ ಪಟ್ಟಿ ಮತ್ತು ಆಯ್ಕೆ ಪಟ್ಟಿ, ಕಾಯ್ದಿರಿಸಿರುವ ಪಟ್ಟಿ ಎಲ್ಲವನ್ನೂ ಭೌತಿಕವಾಗಿ ಪ್ರಕಟಿಸಲಾಗುತ್ತಿತ್ತು. ನಂತರ ಕೌನ್ಸಿಲಿಂಗ್ ದಿನ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ, ಸೂಕ್ತ ಶುಲ್ಕ ಪಾವತಿಸಿ ಪ್ರವೇಶವನ್ನು ಪಡೆದುಕೊಳ್ಳುತ್ತಿದ್ದರು.
ಆದರೆ ಈಗ, ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವುದರಿಂದ ಹಿಡಿದು ಶುಲ್ಕ ಪಾವತಿಸುವವರೆಗೆ ಸಂಪೂರ್ಣ ಪ್ರವೇಶಾತಿ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿಯೇ ಪೂರೈಸಿ ನೇರವಾಗಿ ವಿಭಾಗಗಳಿಗೆ ಭೇಟಿ ನೀಡುವ ವ್ಯವಸ್ಥೆ ಮಾಡಲಗಾಗಿದೆ. ವಿದ್ಯಾರ್ಥಿನಿಲಯಗಳಿಗೆ ಪ್ರವೇಶಾತಿಯನ್ನು ನೇರವಾಗಿ ಕ್ಯಾಂಪನ್‌ಗೆ ಬಂದ ನಂತರ ಪಡೆದುಕೊಳ್ಳಬಹುದು.
ಪ್ರವೇಶಾತಿ ಮೂರು ಸುತ್ತುಗಳಲ್ಲಿ ನಡೆಯಲಿದ್ದು ಪ್ರತಿ ಸುತ್ತಿಗೂ ಎರಡು ದಿನಗಳ ಕಾಲಾವಕಾಶ ಇರುತ್ತದೆ. ವಿದ್ಯಾರ್ಥಿಗಳು ಮೂರು ವಿಭಾಗಗಳಿಗೆ ಅರ್ಜಿ ಸಲ್ಲಿಸಬಹುದು. ಒಂದು ವಿಭಾಗಕ್ಕೆ ಪ್ರವೇಶಾತಿ ಪಡೆದ ನಂತರ ಉಳಿದ ಎರಡು ವಿಭಾಗಗಳ ಆಯ್ಕೆ ತಾನಾಗಿಯೇ ನಿಷ್ಕ್ರಿಯಗೊಳ್ಳುತ್ತದೆ. ಒಂದು ವೇಳೆ ವಿದ್ಯಾರ್ಥಿ ವರ್ಗಾವಣೆ ಬಯಸಿದ್ದಲ್ಲಿ ಆನ್‌ಲೈನ್‌ನಲ್ಲಿಯೇ ಅದಕ್ಕೂ ಅವಕಾಶವಿರುತ್ತದೆ.
ಪ್ರವೇಶಾತಿಗೆ ಈ ವೈಬ್‌ಸೈಟ್ ಲಿಂಕ್ ಸಂಪರ್ಕಿಸಬಹುದು: kuvempu.ac.in/admission2020-21/index.php ಹೆಚ್ಚಿನ ಮಾಹಿತಿಗಾಗಿ 08282-256301ನಿಂದ 256306 ನಂಬರ್‌ಗಳಿಗೆ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಕರೆ ಮಾಡಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post