ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವೃತ್ತಿಪರ ಶಿಕ್ಷಣದ ಸೀಟು ಆಯ್ಕೆ ಪ್ರಕ್ರಿಯೆ ವೇಳೆ ಶೈಕ್ಷಣಿಕ ಶ್ರೇಷ್ಟತೆಯ ಕುರಿತು ಹೆಚ್ಚು ಪ್ರಾಮುಖ್ಯತೆ ನೀಡಿ ಎಂದು ಜೆ.ಎನ್.ಎನ್.ಸಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ನಾಗೇಂದ್ರ ಪ್ರಸಾದ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಜೆ.ಎನ್.ಎನ್.ಸಿ ಎಂಜಿನಿಯರಿಂಗ್ ಕಾಲೇಜಿನ ವತಿಯಿಂದ ವೃತ್ತಿಪರ ಶಿಕ್ಷಣಕ್ಕೆ ಸಿಇಟಿ ಮತ್ತು ಕಾಮೆಡ್-ಕೆ ಮೂಲಕ ಪ್ರವೇಶಾತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗಾಗಿ ಆನ್ಲೈನ್ ಮೂಲಕ ಏರ್ಪಡಿಸಿದ್ದ ಸಿಇಟಿ ಸಂವಾದ ಸೀಟು ಆಯ್ಕೆ ಪ್ರಕ್ರಿಯೆ ಕುರಿತ ಮಾಹಿತಿ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಅವರು ನಾವು ಆಯ್ಕೆ ಮಾಡಿಕೊಳ್ಳುವ ಕೋರ್ಸ್ ಮತ್ತು ಅಧ್ಯಯನದ ಸ್ಥಳ ಸ್ಪೂರ್ತಿದಾಯಕ ವಾತಾವರಣವನ್ನು ಒದಗಿಸುವಂತರಿಬೇಕು ಎಂದರು.
ಎಂಜಿನಿಯರಿಂಗ್ ಶಿಕ್ಷಣ ಸೃಜನಶೀಲ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಪ್ರಮುಖ ಪಾತ್ರ ವಹಿಸುತ್ತದೆ. ಎಂಜಿನಿಯರ್‌ಗಳು ನಮ್ಮ ಸುತ್ತಲಿನ ಅನೇಕ ಸಮಸ್ಯೆಗಳಿಗೆ ಪ್ರಾಯೋಗಿಕ ಪರಿಹಾರಗಳನ್ನು ಒದಗಿಸುತ್ತಿದ್ದಾರೆ. ಕೆಲವೇ ಕೋರ್ಸ್‌ಗಳಿಂದ ಉತ್ತಮ ಭವಿಷ್ಯ ಎಂಬ ಭ್ರಮೆ ಬೇಡ. ನಮ್ಮ ಸಮಾಜಕ್ಕೆ ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ನಂತಹ ಎಲ್ಲಾ ವಿಷಯಗಳ ಎಂಜಿನಿಯರ್‌ಗಳ ಅವಶ್ಯಕತೆಯಿದೆ. ನಾವು ಆಯ್ಕೆ ಮಾಡಿಕೊಂಡ ವಿಷಯಗಳ ಅಧ್ಯಯನದ ಜೊತೆಗೆ ಅಳವಡಿಕೊಂಡ ಕೌಶಲ್ಯಗಳ ಅಧಾರದ ಮೇಲೆ ವಿದ್ಯಾರ್ಥಿಯ ಮುಂದಿನ ಭವಿಷ್ಯ ರೂಪಗೊಳ್ಳುತ್ತಾ ಹೋಗುತ್ತದೆ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ ಮಾತನಾಡಿ ಕೊರೊನಾದಿಂದಾಗಿ ಪೋಷಕರು ದೂರದ ಊರುಗಳಿಗೆ ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಕಳುಹಿಸಿಕೊಡಲು ಹಿಂಜರಿಯುತ್ತಿದ್ದಾರೆ. ಇದರ ಜೊತೆಗೆ ಕಾಲೇಜು, ಕೋರ್ಸ್‌ಗಳ ಆಯ್ಕೆ ಸೇರಿದಂತೆ ಅನೇಕ ಗೊಂದಲಗಳು ಸಹಜ. ಆಯ್ಕೆ ಪ್ರಕ್ರಿಯೆಯಲ್ಲಿನ ಆದ್ಯತೆಯಲ್ಲಿ ಅಗತ್ಯ ಜಾಗರುಕತೆವಹಿಸಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಕೋರ್ಸ್‌ಗಳ ಪರಿಚಯ ಉದ್ಯೋಗವಕಾಶ ಹಾಗೂ ವಿದ್ಯಾರ್ಥಿ ವೇತನ ಕುರಿತು ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ ಮಾತನಾಡಿದರು. ಕಾಲೇಜಿನ ಅಡ್ಮೀಷನ್ ಸಮಿತಿ ಸದಸ್ಯರು ಸೀಟು ಆಯ್ಕೆ ಪ್ರಕ್ರಿಯೆ ಕುರಿತು ಪ್ರಾತ್ಯಕ್ಷಿತೆ ಸಹಿತ ಮಾಹಿತಿ ನೀಡಿದರು. ಇನ್ಫ್ರಾಸ್ಟ್ರಕ್ಚರ್ ಡೀನ್ ಡಾ.ಎಂ.ಎಂ.ರಜತ್ ಹೆಗಡೆ, ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಪ್ರಾದ್ಯಾಪಕರಾದ ಡಾ.ಎಸ್.ಸುರೇಂದ್ರ, ರಸಾಯನ ಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ.ಎಂ.ಹೆಚ್.ಮೊಯಿನುದ್ದಿನ್ ಖಾನ್, ಸಹ ಪ್ರಾದ್ಯಾಪಕರಾದ ನರೇಂದ್ರ ಕುಮಾರ್.ಎಸ್, ಸತ್ಯನಾರಾಯಣ ಕೆ.ಬಿ, ಹರೀಶ್.ಎಸ್.ಬಿ, ಅಫತಾಬ್, ವೇದಾನಂದ.ಡಿ.ಇ, ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ.ನೃಪತುಂಗ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಯುಟ್ಯೂಬ್ ಲಿಂಕ್ https://youtu.be/ZCmMGsUfM7I ಬಳಸಿ ಮುದ್ರಿತ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post