ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮನುಕುಲಕ್ಕೆ ಮಾರಕವಾದ ಕೊರೋನಾ ಸಾಂಕ್ರಾಮಿಕ ವೈರಾಣುಗಳ ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹೋರಾಡುತ್ತಾ ಬಸವಳಿಯುತ್ತಿರುವ ಸರ್ಕಾರ-ಸಾರ್ವಜನಿಕರಿಗೆ ಆಶಾದಾಯಕವಾದ ಪರಿಹಾರವೊಂದನ್ನು ಶಿವಮೊಗ್ಗದ ಉತ್ಸಾಹಿ ವಿಜ್ಞಾನಿಗಳ ತಂಡವೊಂದು ಸಂಶೋಧನೆ ಮೂಲಕ ಅಭಿವೃದ್ಧಿಪಡಿಸಿರುವುದು ವೈದ್ಯಕೀಯ ಲೋಕದಲ್ಲಿ ಕುತೂಹಲ ಮೂಡಿಸಿದೆ.
ಶಿವಮೊಗ್ಗದಲ್ಲಿರುವ ಬಾಲಜಿ ಪೊಲಿ ಪ್ಯಾಕ್ ಎಂಬ ಸಂಸ್ಥೆಯು ಆಡ್ ನ್ಯಾನೊ ಟೆಕ್ನೊಲೊಜೀಸ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯ ಸಹಯೋಗದಲ್ಲಿ ಈ ಸಂಶೋಧನೆಯನ್ನು ಕೈಗೆತ್ತಿಕೊಂಡು ಫಲಶೃತಿ ಕಂಡಿವೆ.
ಸಾಮಾನ್ಯವಾಗಿ ಸರ್ಕಾರದ ಈಗಿನ ವೈದ್ಯಕೀಯ ಕ್ಷೇತ್ರದ ಪ್ರಕಾರ ಯಾವುದಾದರೂ ವಸ್ತುಗಳ ಮೇಲ್ಮೈ ಮೇಲೆ ಕೊರೊನಾ ವೈರಸ್ ಅಂಟಿಕೊಂಡರೆ ಅದರ ಆಯಸ್ಸು ಸುದೀರ್ಘ ಮೂರು ದಿನಗಳವರೆಗೆ ಇರುತ್ತದೆ. ಆದರೆ ತಾವು ಸಂಶೋಧನೆಯ ಮೂಲಕ ಕಂಡುಹಿಡಿದ ಈ ಪೋಲಿಮರ್ ಇಥೆಲಿನ್ ಶೀಟ್ ಮೇಲೆ ಅಂಟಿಕೊಂಡಿರುವ ಕೊರೋನಾ ವೈರಾಣು ಕೇವಲ 2 ಗಂಟೆ 54 ನಿಮಿಷದಲ್ಲಿ ಸತ್ತು ಹೋಗುತ್ತವೆ. ಬೇರೆಯವರಿಗೆ ಹರಡುವುದನ್ನು ತಪ್ಪಿಸುತ್ತವೆ ಎಂದು ಬಾಲಾಜಿ ಪಾಲಿ ಪ್ಯಾಕ್‌ನ ಸಿ.ಇ.ಒ. ವಿನಯ್ ಜಿ. ಹಾಗೂ ಯ್ಯಡ್ ನ್ಯಾನೋ ಟಕ್ನಾಲಜಿಸ್ ಪೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಅದ್ನಾನ್ ಜಾವಿದ್ ಅವರ ಅಂಬೋಣವಾಗಿದೆ.
ವರದಿಯೊಂದರ ಪ್ರಕಾರ ಕೋವಿಡ್-19 ವೈರಾಣುಗಳು ವಿವಿಧ ವಸ್ತುಗಳ ಮೇಲ್ಮೈಯಲ್ಲಿ ಒಂದರಿಂದ ಮೂರು ದಿವಸಗಳವರೆಗೆ ಜೀವಂತವಾಗಿರುತ್ತವೆ. ಇದರಿಂದ ಪಾರಾಗುವುದು ವೈದ್ಯ ಲೋಕಕ್ಕೆ ಒಂದು ದೊಡ್ಡ ಸವಾಲೇ ಆಗಿದೆ. ಈ ಸಂಧಿಗ್ದತೆಯಿಂದ ಪಾರಾಗಲು ತಾವು ಕಂಡು ಹಿಡಿದಿರುವುದೇ ಅತ್ಯಂತ ಕಡಿಮೆ ಅವಧಿಯಲ್ಲಿ ಈ ವೈರಾಣುಗಳನ್ನು ನಾಶ ಮಾಡುವ ಪಾಲಿಮರ್ ಇಥೆಲಿನೆ ಶೀಟ್ ಇದಾಗಿದೆ ಎಂದು ತಿಳಿಸಿದ್ದಾರೆ.
ಕೋವಿಡ್-19 ವೈರಾಣುಗಳನ್ನು ಅತಿ ಕಡಿಮೆ ಅವಧಿಯಲ್ಲಿ ಸಾಯಿಸುವ ಈ ಪಾಲಿಥಿನ್ ಹಾಳೆಯ ಅಧಿಕೃತತೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್)ಗೆ ಈ ಹೊಸ ಸಂಶೋಧನೆ ಕುರಿತು ಮಾಹಿತಿ ನೀಡಲಾಗಿತ್ತು. ಅದರ ಸಲಹೆಯಂತೆ ತಮಿಳುನಾಡಿನ ಕೊಯಿಮತ್ತೂರಿನಲ್ಲಿರುವ ಕೋಲ್ಕತ್ತಾ ಮೂಲಕ ಟೆಕ್ನಿಕಲ್ ಯ್ಯಂಡ್ ಇನ್ನೊವೇಶನ್ ಟೆಕ್ಸ್‌ಟೈಲ್ಸ್ ಸೊಲ್ಯೂಶನ್ ಕೇಂದ್ರ (ಟಿಐಟಿಎಸ್‌ಸಿ)ದಲ್ಲಿ ಈ ಸಂಶೋಧನೆಯ ಕುರಿತು ಸ್ಯಾಂಪಲ್ ಪರೀಕ್ಷೆ ಮಾಡಿಸಲಾಗಿದೆ. ಈ ಕೇಂದ್ರವು ಆಂಟಿ ವೈರಲ್ ಚಟುವಟಿಕೆಗಳ ಕುರಿತ ರಾಷ್ಟ್ರೀಯ ಪರಿಕ್ಷೆ ಮತ್ತು ಕೆಲಿಬ ರೇಶನ್ ಪ್ರಯೋಗಾಲಯದ ಮಂಡಳಿಯಾಗಿದ್ದು (ಎನ್’ಎಬಿಎಲ್) ಸಾರ್ಸ್ (ಎಸ್‌ಎಆರ್’ಎಸ್) ಕೋವಿಡ್-2 ಚಟುವಟಿಕೆಗಳ ಹಿನ್ನೆಲೆಯಲ್ಲಿ ಸದರಿ ಸಂಶೋಧನೆಗೆ ಪ್ರಮಾಣ ಪತ್ರ ಲಭಿಸಿದೆ ಎಂದು ಅವರು ಹೇಳಿದ್ದಾರೆ.
ಈ ವರದಿಯ ಪ್ರಕಾರ ಈ ಬಾಲಾಜಿ ಪಾಲಿ ಪ್ಯಾಕ್ ಸಂಸ್ಥೆಯವರು ಸಿದ್ಧಪಡಿಸಿದ ಪಾಲಿಮರ್ ಇಥೆಲಿನ್ ಹಾಳೆಯ ಮೇಲೆ ಅಂಟಿಕೊಳ್ಳುವ ಕೊರೋನಾ ವೈರಾಣುಗಳು ಅತ್ಯಂತ ಕಡಿಮೆ ಸಮಯದಲ್ಲಿ ಅಂದರೆ ಕೇವಲ 2 ಗಂಟೆ 54 ನಿಮಿಷಗಳಲ್ಲಿ ಸಂಪೂರ್ಣ ಸತ್ತು ಹೋಗುತ್ತವೆ. ಈ ಸಾಯುವಿಕೆಯ ಪ್ರಮಾಣ ಶೇ.99.99ರಷ್ಟಿರುತ್ತದೆ ಎಂದು ಆ ವರದಿ ತಿಳಿಸಿದೆ ಎಂದು ಅವರು ಮಾಹಿತಿ ನೀಡಿದರು.
ಈ ಸಂಶೋಧನೆಗೆ ಟಿ.ಐ.ಟಿ.ಎಸ್.ಸಿ. ಪ್ರಯೋಗಾಲಯವು ಐ.ಎಸ್.ಒ. 21702 ಅಡಿಯಲ್ಲಿ ಪ್ರಯೋಗಕ್ಕೆ ಒಳಪಡಿಸಿದ ಪರಿಣಾಮೇ ಈ ಅಧಿಕೃತ ಪ್ರಮಾಣಪತ್ರ ಲಭಿಸಲು ಕಾರಣ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಆಂಟಿ ವೈರಸ್ ಹಾಳೆಯ ಕಾರ್ಯ ವಿಧಾನದ ಬಗ್ಗೆ ಮಾಹಿತಿ ನೀಡಿದ ಅವರು, ಈ ಹಾಳೆಯ ಮೇಲ್ಮೈ ಮೇಲೆಯೇ ಕೋವಿಡ್ ವಿರೋಧಿ ಅಂಶ ಇರುತ್ತಿದ್ದು ಇದು ಕೋವಿಡ್ ಸೋಂಕು ಹರಡುವಿಕೆಯನ್ನು ತಡೆಯುತ್ತದೆ ಅಥವಾ ನಿಯಂತಿಸುತ್ತದೆ ಎಂದು ವಿವರಿಸಿದರು.
ಅತ್ಯಂತ ಕ್ಲಿಷ್ಟಕರ ಸನ್ನಿವೇಶದಲ್ಲಿ ಜೀವದ ಹಂಗು ತೊರೆದು ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಯೋಧರಿಗೆ ಇದು ಶ್ರೀರಕ್ಷೆಯಂತಿದ್ದು, ಆರೋಗ್ಯ ಕಾರ್ಯಕರ್ತರಿಗೆ ಸ್ವಚ್ಛಪರಿಸರದಲ್ಲಿ ಸುರಕ್ಷಿತವಾಗಿ, ಅತಿ ಕಡಿಮೆ ಅಪಾಯ ಹೊಂದುವುದಲ್ಲದೆ ಸೋಂಕು ತಪ್ಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ವಿವರಿಸಿದರು.
ತಾವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಯಾವುದೇ ವಸ್ತುಗಳ ಮೇಲ್ಮೈ ಮೇಲೆ ಕೋವಿಡ್-19 ವೈರಾಣುಗಳು ಇದ್ದರೆ ಅವುಗಳನ್ನು ಕೇವಲ ಹತ್ತೇ ನಿಮಿಷಗಳಲ್ಲಿ ಸಾಯಿಸುವ ತಂತ್ರ ಜ್ಞಾನವನ್ನು ಅಭಿವೃದ್ಧಿಪಡಿಸಿರುವುದಾಗಿ ತಿಳಿಸಿದ ಅವರು, ಸರ್ಕಾರ, ಸಂಬಂಧಿಸಿದವರು ಸಹಕಾರ ನೀಡಿದರೆ ಅದನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧವಿರುವುದಾಗಿ ವಿವರಿಸಿದರು.
ನೂತನವಾಗಿ ಸಿದ್ಧಪಡಿಸಿದ ಈ ಪಾಲಿಮರ್ ಹಾಳೆಗಳನ್ನು ಕೊವಿಡ್ ಆಸ್ಪತ್ರೆಗಳಲ್ಲಿ, ಧಾರ್ಮಿಕ ಸ್ಥಳಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಟ್ರಾನ್ಸ್ ಪೋರ್ಟ್ ಸಂಸ್ಥೆಗಳಲ್ಲಿ, ನೆಲ ಹಾಸುವಾಗಿ, ಪಿಪಿಇ ಕಿಟ್‌ಗಳಿಗೆ ಮತ್ತು ಗೋಡೆ ಮುಚ್ಚುವ ಹಾಳೆಗಳನ್ನಾಗಿ, ಸೀಟ್ ಕವರುಗಳನ್ನಾಗಿ ಉಪಯೋಗಿಸಬಹುದು ಎಂದು ಮಾಹಿತಿ ನೀಡಿದರು.
ಉಪಯೋಗಿಸಿದ ಈ ಪಾಲಿಮರ್ ಹಾಳೆಗಳನ್ನು ವಿಲೇವಾರಿ ಮಾಡುವುದೂ ಸುಲಭವಾಗಿದ್ದು ಯಾವುದೇ ತೊಂದರೆ, ಅಪಾಯವಿಲ್ಲದೆ ಸೋಂಕು ತಗುಲದಂತೆ ವಿಲೇವಾರಿ ಮಾಡಬಹುದು ಎಂದೂ ಅವರು ತಿಳಿಸಿದರು.
ಕೋವಿಡ್-19 ನಿಯಂತ್ರಣಕ್ಕೆ ತಾವು ಅಭಿವೃದ್ಧಿಪಡಿಸಿದ ತಂತ್ರಜ್ಞಾನವು ಅತ್ಯಂತ ಕೈಗೆಟುಕುವ ಬೆಲೆಗೆ ಲಭ್ಯವಿದ್ದು ಸರ್ಕಾರ-ವೈದ್ಯಕೀಯ ಕ್ಷೇತ್ರವು ಅದರ ಸದುಪಯೋಗಕ್ಕೆ ಮುಂದಾಗಿ ತಮ್ಮಂತಹ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಅವರು ವಿನಂತಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post