ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನೇತಾಜಿ ಸುಭಾಷ್ ಚಂದ್ರ ಬೋಸ್ ಸೇರಿದಂತೆ ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಯಾವುದೇ ಹೋರಾಟಗಾರರ ಬಗ್ಗೆ ಹಗುರವಾಗಿ ಮಾತನಾಡುವ ಪ್ರವೃತ್ತಿ ಸರಿಯಲ್ಲ ಎಂದು ಸಿಮ್ಸ್ ವೈದ್ಯಕೀಯ ಅಧೀಕ್ಷರರಾದ ಡಾ.ಕೆ. ಶ್ರೀಧರ್ ಅಭಿಪ್ರಾಯಪಟ್ಟರು.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೆಯ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ ಹಾಗೂ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶಕ್ಕೆ ಸ್ವತಂತ್ರ ತಂದುಕೊಟ್ಟ ಹೋರಾಟಗಾರರನ್ನು ನೆನಪಿಸಿಕೊಳ್ಳುವುದು ನಮಗೆ ಹೆಮ್ಮೆಯ ಸಂಗತಿ. ಸ್ವತಂತ್ರ ಹೋರಾಟಗಾರರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಲಘುವಾಗಿ ಮಾತನಾಡುವ ಚಾಳಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಆದರೆ, ಇಂದು ನಾವು ಸ್ವತಂತ್ರವನ್ನು ಅನುಭವಿಸುತ್ತಾ, ನೆಮ್ಮದಿಯಿಂದ ಇದ್ದೇವೆ ಎಂದು ಸುಭಾಷ್ ಚಂದ್ರ ಬೋಸ್ ಅವರಂತಹ ತ್ಯಾಗ, ಬಲಿದಾನಗಳೇ ಕಾರಣ. ಹೀಗಾಗಿ ಯಾವುದೇ ಸ್ವತಂತ್ರ ಹೋರಾಟಗಾರರ ಬಗ್ಗೆ ಹಗುರವಾಗಿ ಮಾತನಾಡುವುದು ಸಲ್ಲ ಎಂದರು.
ಕಾಲೇಜಿನ ಕಾರ್ಯ ನಿರ್ವಾಹಕ ನಿರ್ದೇಶಕರಾದ ಡಾ.ವಿನಯಾ ಶ್ರೀನಿವಾಸ್ ಮಾತನಾಡಿ, ಸ್ವಾತಂತ್ರ ಎನ್ನುವುದು ಬ್ರಿಟೀಷರು ಕೊಡುವುದಲ್ಲ ಬದಲಾಗಿ ತೆಗೆದುಕೊಳ್ಳುವುದು ಎನ್ನುವ ಸಂದೇಶವನ್ನು ಅಖಂಡ ಭಾರತಕ್ಕೆ ಸಾರಿದ್ದರು ನೇತಾಜಿಯವರು. ಇಡಿಯ ಸ್ವತಂತ್ರ ಹೋರಾಟದ ಸ್ಪೂರ್ತಿ ಚಿಲುಮೆಯಾಗಿದ್ದ ಅವರ ಇಂದಿಗೂ ಇಡಿಯ ವಿಶ್ವಕ್ಕೇ ಆದರಲ್ಲೂ ಯುವ ಸಮುದಾಯಕ್ಕೆ ಆದರ್ಶಪ್ರಾಯರಾಗಿದ್ದಾರೆ ಎಂದರು.
ನೇತಾಜಿಯವರ ಜೀವನ, ಹೋರಾಟ ಹಾಗೂ ತ್ಯಾಗ ಬಲಿದಾನಗಳು ನಮಗೆಲ್ಲಾ ಸ್ಪೂರ್ತಿ ಆಗರವಾಗಿದೆ. ಜೈ ಹಿಂದ್ ಎಂಬ ಘೋಷಣೆಯನ್ನು ದೇಶಕ್ಕೆ ನೀಡಿದ ಇಂತಹ ಧೀಮಂತ ನಾಯಕರನ್ನು ಯುವಕರು ಸರ್ವಥಾ ಆದರ್ಶವಾಗಿಟ್ಟುಕೊಂಡು ದೇಶ ಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು.

ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ, ರಕ್ತನಿಧಿ ಹಾಗೂ ದಂತ ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದಲ್ಲಿ ವೇದಿಕೆ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಸುಬ್ಬಯ್ಯ ದಂತ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ, ಭಾರತೀಯ ದಂತ ವೈದ್ಯಕೀಯ ಪರಿಷತ್ ಸದಸ್ಯರಾದ ಡಾ. ಬಿ.ಎಸ್. ಸುರೇಶ್, ಪೆಥಾಲಜಿ ವಿಭಾಗದ ಮುಖ್ಯಸ್ಥ ಡಾ.ವಿನೀತ್ ಆನಂದ್, ಡಾ.ಬಿ.ಕೆ. ಶೃತಿ, ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಸ್.ಎಂ. ಕಟ್ಟಿ, ಉಪಪ್ರಾಂಶುಪಾಲ ಡಾ.ಮಿಥುನ್ ಸೇರಿದಂತೆ ಹಲವರು ಇದ್ದರು.








Discussion about this post