ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪುಸ್ತಕಗಳಲ್ಲಿ ಬದುಕಿಗೆ ಬೇಕಾಗಿರುವ ಸಾತ್ವಿಕತೆಯ ಅಂಶಗಳಿರುತ್ತಿದ್ದು ಅವುಗಳ ಬಗ್ಗೆ ಚಿಂತನೆ ಮಾಡುವ ಮನಸುಗಳು ಬೇಕಾಗಿವೆ ಎಂದು ಕಮಲಾ ನೆಹರು ಮಹಿಳಾ ಕಾಲೇಜಿನ ಕನ್ನಡ ನಿವೃತ್ತ ಪ್ರಾಧ್ಯಾಪಕ ಡಿ.ಎಂ. ಅಣ್ಣಯ್ಯ ನಾಯಕ ಹೇಳಿದರು.
ಕಾಲೇಜಿನ ಕುವೆಂಪು ಗ್ರಂಥಾಲಯವು ಇಂದಿನಿಂದ ಹಮ್ಮಿಕೊಂಡ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇಂದು ಯುವ ಸಮೂಹ ಅತಿಯಾದ ಆಧುನಿಕ ತಂತ್ರಜ್ಞಾನದ ಬಳಕೆಯಿಂದಾಗಿ ಓದುವ ಹವ್ಯಾಸವನ್ನೇ ಮರೆತಂತಾಗಿದೆ. ಮಾನಸಿಕ ನೆಮ್ಮದಿ ಪಡೆದು ಜೀವನ ನಡೆಸಲು ಅವಶ್ಯಕವಾಗಿರುವ ಪುಸ್ತಕ ಓದಿನಿಂದ ಜನರು ದೂರವಾಗುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಈ ಕಾಲೇಜು ವಿದ್ಯಾರ್ಥಿಗಳಿಂದಲೇ ಆಯ್ದ ಪುಸ್ತಕಗಳನ್ನು ಓದಿಸಿ ಅವುಗಳ ಬಗ್ಗೆ ಇತರರಿಗೆ ಮಾಹಿತಿ ನೀಡುವ ಕೆಲಸ ಆರಂಭಿಸಿದ್ದು ಶ್ಲಾಘನೀಯ ಎಂದು ಅವರು ಬಣ್ಣಿಸಿದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ದ.ರಾ. ಬೇಂದ್ರೆ, ಕುವೆಂಪು ಮತ್ತಿತರ ಪ್ರಸಿದ್ಧ ಸಾಹಿತಿಗಳು ಆಯಾ ಕಾಲ ಘಟ್ಟಗಳಲ್ಲಿ ಜನಸಾಮಾನ್ಯರಿಗೆ ಓದಲು ಸಾಧ್ಯವಾಗುವ ಕೃತಿಗಳನ್ನು ರಚಿಸಿ ನಮಗೆ ಬಳುವಳಿಯಾಗಿ ನೀಡಿ ಹೋಗಿದ್ದಾರೆ. ಅವುಗಳ ಪ್ರಯೋಜನವನ್ನು ಇಂದಿನ ವಿದ್ಯಾಥಿ ವಿದ್ಯಾರ್ಥಿನಿಯರು ಪಡೆದುಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ಪ್ರಾಚಾರ್ಯ ಡಾ.ಎಸ್.ಎಸ್. ನಾಗಭೂಷಣ ಮಾತನಾಡಿ, ಒಂದು ದಿನದ ಸಂತೋಷಕ್ಕೆ ಒಂದು ಊಟ, ಒಂದು ತಿಂಗಳ ಸಂತೋಷಕ್ಕೆ ಒಂದು ಪ್ರವಾಸ, ಒಂದು ವರ್ಷದ ಸಂತೋಷಕ್ಕೆ ಮದುವೆ ಆಗಬೇಕು. ಅಷ್ಟಕ್ಕೇ ಆ ಸಂತೋಷಗಳು ಸೀಮಿತವಾಗುತ್ತವೆ. ಆದರೆ ಪಂದು ಪುಸ್ತಕದ ಓದು ಮಸ್ತಕಕ್ಕೆ ಹೋಗಿ ಇಡೀ ಜೀವನ ಪರ್ಯಂತ ಮನುಷ್ಯ ಸಂತೋಷದಿಂದ ಇರುವಂತೆ ಮಾಡುತ್ತದೆ ಎಂದು ಇಂಗ್ಲೀಷಿನ ಪ್ರಸಿದ್ಧ ಕವಿ ವರ್ಡ್ಸ್ ವರ್ಥ್’ನ ಸಾಲುಗಳನ್ನುದ್ಧರಿಸಿ ಮಾತನಾಡಿದರು.
ದ್ವಿತೀಯ ಬಿಎ ವಿದ್ಯಾರ್ಥಿನಿ ಎ.ಕೆ. ಅಶ್ವಿನಿ ಅವರು ಆನಂದಕಂದರ ‘ನಾ ಕೊಂದ ಹುಡುಗಿ’ ಕೃತಿ ಕುರಿತು ಮಾತನಾಡಿದರು. ಪ್ರಾಧ್ಯಾಪಕರು, ಸಿಬ್ಬಂದಿಗಳಾದ ನಾರಾಯಣ, ಭಾರತಿ ಮೊದಲಾದವರು ಇದ್ದರು. ಗ್ರಂಥಪಾಲಕರಾದ ಎಚ್.ಎಸ್. ರವಿಕುಮಾರ ಸ್ವಾಗತಿಸಿ, ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post