ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಅಭಿವೃದ್ಧಿಯ ಹೆಸರಿನಲ್ಲಿ ಮರಗಳ ಮಾರಣಹೋಮ, ಕಾಡುಗಳ್ಳರ ಕೈಚಳಕದಲ್ಲಿ ಕಾಡಿನ ನಾಶ. ಕಾಡನ್ನೇ ಆಶ್ರಯಿಸಿದ್ದ ಪ್ರಾಣಿಗಳು ಆಹಾರಕ್ಕಾಗಿ ನಾಡಿಗೆ ಲಗ್ಗೆ! ಬೆಳೆ ನಾಶ, ತೋಟ ಗದ್ದೆಗಳಲ್ಲಿ ಸಂಚರಿಸುವ ಕ್ರೂರ ಪ್ರಾಣಿಗಳಿಂದ ಜನ ಜಾನುವಾರುಗಳಿಗೆ ಜೀವ ಭಯ!
ಇದು ಮಲೆನಾಡಿನಾದ್ಯಂತ ಕಾಡಂಚಿನಲ್ಲಿರುವ ರೈತಾಪಿ ವರ್ಗದ ನಿತ್ಯ ಗೋಳು.
ತೋಟ, ಗದ್ದೆಗಳಿಗೆ ಲಗ್ಗೆ ಇಡುವ ಮಂಗಗಳ ಹಿಂಡು ಫಸಲು ಬಲಿಯುವ ಮುನ್ನವೇ ತಿಂದು ತೇಗಿದರೆ, ಹೊಸದಾಗಿ ನೆಟ್ಟ ಅಡಿಕೆ, ಬಾಳೆಗಳನ್ನು ಸಿಗಿದು ಸಿಪ್ಪೆಗೊಳಿಸುವ ಕಾಯಕ ಕಾಡುಕೋಣ, ಹಂದಿಗಳ ಹಿಂಡುಗಳದ್ದು! ಬೆಳಗಿನಿಂದ ಸಂಜೆಯವರೆಗೆ ಗಿಡಗಳಿಗೆ ನೀರಾಯಿಸಿದ ರೈತನಿಗೆ ಮರುದಿನ ಸಿಗುವುದು ನಿರಾಸೆ ಮಾತ್ರ! ಹುಲಿ, ಚಿರತೆಗಳ ಸಂಖ್ಯೆಯೂ ಹೆಚ್ಚಿದ್ದು ಅವುಗಳು ನೀರು, ಆಹಾರ ಹುಡುಕಿಕೊಂಡು ಬರುತ್ತಿರುವುದೂ ನಾಡಿಗೆ! ಬೆಳೆ ನಾಶದ ಜೊತೆಗೆ ಮನುಷ್ಯ, ಜಾನುವಾರುಗಳ ಜೀವ ಭಯವೂ ಸೇರಿಕೊಂಡಿದೆ.
ಕಾಡು ನಾಶ ತಡೆಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಹೊರಟ ಅರಣ್ಯ ಇಲಾಖೆಯ ಕಾನೂನಿಗೆ ಮೊದಲು ಕಾಣುವುದು ತೋಟದ ಗೊಬ್ಬರಕ್ಕಾಗಿ ದರಗೆಲೆ (ಒಣಗಿ ಬಿದ್ದ ಎಲೆಗಳು), ಒಣ ಸೌದೆಗಳನ್ನು ಸಂಗ್ರಹಿಸುವ ರೈತ ಕುಟುಂಬ! ಪರೋಕ್ಷವಾಗಿ ಕಾಡು ಬೆಳವಣಿಗೆಗೆ ಕಾರಣರಾಗುವ ಕಾಡಂಚಿನ ರೈತರಿಗೆ ಈಗ ಕಾಡಿಗೆ ಯಾವುದೇ ಪ್ರವೇಶವಿಲ್ಲ! ಹೊರಪ್ರದೇಶದಿಂದ ಅಕ್ರಮವಾಗಿ ಕಾಡು ಪ್ರವೇಶಿಸಿ ಮರಗಳ್ಳತನ ಮಾಡುವ ಖದೀಮರು ಪ್ರವೇಶದ ದಾರಿ ಕಂಡುಕೊಂಡಿರುತ್ತಾರೆ. ಅವರನ್ನು ಮಟ್ಟ ಹಾಕಲು ಇಲಾಖೆ ಸಿಬ್ಬಂದಿಗಳು ಅಸಹಾಯಕರಾಗುತ್ತಾರೆ!
ಇದಕ್ಕೆ ವಿವಿಧ ಕಾರಣಗಳೂ ಇರುತ್ತಾವಾದರೂ ಜೀವ ಭಯವೂ ಒಂದಾಗಿದೆ. ತನ್ನ ಸಿಬ್ಬಂದಿಗಳಿಗೆ ಆಧುನಿಕ ಶಸ್ತ್ರಾಸ್ತ್ರ, ಉಪಕರಣಗಳನ್ನು ಒದಗಿಸದ ಇಲಾಖೆ ಅವರಿಂದ ಪ್ರಾಣಭಯಬಿಟ್ಟು ಕೆಲಸ ನಿರೀಕ್ಷಿಸುವುದು ವಿಪರ್ಯಾಸ !
ತೋಟಕ್ಕೆ ನುಗ್ಗಿದ ಚಿರತೆಯ ಹೆಜ್ಜೆ ಸಾಲುಗಳನ್ನರಸಿ
ಬಟಾಬಯಲಾಗುವ ಕಾಡಿನಿಂದ ಆಹಾರಕ್ಕಾಗಿ ಕಾಡುಪ್ರಾಣಿಗಳು ಊರಿಗೇ ಲಗ್ಗೆ ಇಡುತ್ತಿವೆ. ಮೊನ್ನೆ ಭಾನುವಾರ ನಮ್ಮೂರಿನ ಮನೆಗೆ ಹೋದಾಗ ಅಡಿಕೆ ತೋಟದಲ್ಲಿ ತಿರುಗಾಡಿ ಬಂದೆ. ತೋಟದ ತುಂಬೆಲ್ಲ ಕಾಡುಕೋಣ, ಹಂದಿಗಳ ಹೆಜ್ಜೆ ಗುರುತುಗಳೇ. ಹಾಗೆಯೇ ತೋಟಕ್ಕೆ ನೀರು ಹಾಯಿಸುವ ತೋಡುಗಳಲ್ಲಿ ಚಿರತೆಗಳು ಹಿಂದಿನ ರಾತ್ರಿಯಷ್ಟೇ ಓಡಾಡಿದ ಹೆಜ್ಜೆ ಗುರುತುಗಳು!
ನಿಶ್ಯಬ್ದ ಪರಿಸರದಲ್ಲಿ ಹಕ್ಕಿಗಳ ವಿವಿಧ ರೀತಿಯ ಕೂಗಾಟ. ಜೀರುಂಡೆಗಳ ಚಿರಾಟದ ನಡುವೆ ಈ ಹೆಜ್ಜೆಗಳು ಒಮ್ಮೆ ಭಯವನ್ನು ಹುಟ್ಟಿಸಿತಾದರೂ ಕುತೂಹಲ ಚಿರತೆಯ ಹೆಜ್ಜೆಗಳ ಚಿತ್ರ ಸೆರೆ ಹಿಡಿಯುವಂತೆ ಮಾಡಿತ್ತು.
ಆದರೆ ಪ್ರತಿನಿತ್ಯವೂ ಇದನ್ನು ನೋಡುತ್ತಿದ್ದ, ಕೇಳುತ್ತಿದ್ದ ಊರಿನ ಜನತೆಗೆ ಇದೊಂದು ಸಾಮಾನ್ಯ ಸಂಗತಿಯಾಗಿತ್ತು! ಕೊರೋನಾದೊಂದಿಗೇ ಜೀವಿಸುವುದನ್ನು ಕಲಿಯಿರಿ ಎಂಬ ಹೇಳಿಕೆಯಂತೆ!
ಪರಿಹಾರ ಮರೀಚಿಕೆ!
ಕಾಡುಪ್ರಾಣಿಗಳಿಂದ ಬೆಳೆ ನಾಶ, ಜಾನುವಾರು ಸಾವು ಮುಂತಾದ ಅನಾಹುತಕ್ಕೆ ಸರ್ಕಾರದಿಂದ ಪರಿಹಾರ ಇದೆಯಾದರೂ ಇದು ತೀರಾ ಅವೈಜ್ಞಾನಿಕವಾಗಿದೆ. ನಷ್ಟದ ಕಾಲು ಭಾಗವೂ ಸಿಗದ ಈ ಹಣಕ್ಕಾಗಿ ತೋಟದ ಕೆಲಸ ಬಿಟ್ಟು ದೂರದ ಸರ್ಕಾರಿ ಕಚೇರಿಗಳಿಗೆ ವಿವಿಧ ದಾಖಲೆಗಳನ್ನು ಹಿಡಿದುಕೊಂಡು ತಿರುಗಬೇಕು. ಅಷ್ಟೇ ಅಲ್ಲದೆ ಬಿಡುಗಡೆಯಾದ ಪರಿಹಾರದ ಹಣದಲ್ಲಿ ಸಂಬಂಧಪಟ್ಟ ಅಧಿಕಾರಿಯ ಪರ್ಸೆಂಟೇಜ್ ಕಡಿತವಾಗದಿದ್ದರೆ ರೈತನ ಪುಣ್ಯ! ಹಾಗಾಗಿ ಪರಿಹಾರ ಹೋರಾಟಕ್ಕಿಂತ ಹಣೆಬರಹ ಅಂತ ಸುಮ್ಮನಾಗುವ ರೈತರೇ ಅಧಿಕ!
ರೈತರು ದೇಶದ ಬೆನ್ನೆಲುಬು ಅಂತ ಹೇಳುತ್ತೇವೆ. ಬೆನ್ನೆಲುಬಿನ ಕಡೆ ಸರಿಯಾದ ನಿಗಾ ವಹಿಸದಿದ್ದರೆ ಬಾಗಬಹುದು, ಸವಕಳಿಯೂ ಆಗಬಹುದು. ಅಂತೆಯೇ ದೇಶದ ಸ್ಥಿತಿ. ಹಾಗಾಗದಿರಲಿ ಎಂಬುದು ಎಲ್ಲರ ಆಶಯ.
(ಬರಹ: ತ್ಯಾಗರಾಜ ಮಿತ್ಯಾಂತ, ಶಿವಮೊಗ್ಗ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post