ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿಕ್ಷಣಕ್ಕೆ ಅದ್ಭುತವಾದ ಶಕ್ತಿಯಿದ್ದು, ಪರಿಣಾಮಕಾರಿ ಶಿಕ್ಷಣದಿಂದ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜಣ್ಣ ಸಂಕಣ್ಣನವರ್ ಅಭಿಪ್ರಾಯಪಟ್ಟರು.
ಗುರುವಾರ ಸಂಜೆ ನಗರದ ಜೀವನ ಸಂಜೆ ವೃದ್ಧಾಶ್ರಮದಲ್ಲಿ ಕಸ್ತೂರಬಾ ಬಾಲಿಕಾ ಪದವಿ ಪೂರ್ವ ಕಾಲೇಜಿನ ವತಿಯಿಂದ ಏರ್ಪಡಿಸಿದ್ದ ಎನ್.ಎಸ್.ಎಸ್ ಶಿಬಿರದಲ್ಲಿ ಮಹಿಳಾ ಸಬಲೀಕರಣದಲ್ಲಿ ಕಾನೂನಿನ ಅರಿವು ಕುರಿತು ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳಿಗೆ ಕಾನೂನಿನ ಅರಿವು ಅತ್ಯವಶ್ಯಕ. ಯಾವುದೇ ಕಾನೂನುಗಳನ್ನು ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬ ಪ್ರಜೆಗಿದೆ. 1937 ರ ನಂತರ ಮಹಿಳಾ ಪರವಾಗಿ ಅನೇಕ ಕಾನೂನುಗಳು ಜಾರಿಯಾಗಿದೆ. ಗಂಡು ಮಕ್ಕಳಿಗೆ ಸಿಗುವ ಪ್ರತಿಯೊಂದು ಹಕ್ಕುಗಳು ಸಮಾನಂತರವಾಗಿ ಹೆಣ್ಣು ಮಕ್ಕಳಿಗೆ ದೊರೆತಿದೆ. ಕೌಟುಂಬಿಕ ದೌರ್ಜನ್ಯಗಳಿಂದ ರಕ್ಷಣೆ ಪಡೆಯುವ ಅವಕಾಶಗಳು ಲಭ್ಯವಿದೆ. ಅಂತಹ ಅನೇಕ ಮಹಿಳಾ ಪರ ಕಾನೂನುಗಳ ಅರಿವು ವಿದ್ಯಾರ್ಥಿನಿಯರು ಪಡೆಯಬೇಕಿದೆ.
ಪೊಕ್ಸೊ ಕಾಯ್ದೆಯಡಿ ನೊಂದ ಮಹಿಳೆಯರಿಗೆ ಆಶಾಕಿರಣವಾಗಿ ಸಮಗ್ರ ಅಭಿವೃದ್ದಿಗೆ ಕಾನೂನು ಅವಕಾಶ ಮಾಡಿಕೊಡುತ್ತಿದೆ. ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಅವಕಾಶಗಳು ವಿಫುಲವಾಗಿ ಲಭ್ಯವಿದ್ದು, ಸೀಮಿತತೆಗೆ ಒಳಗಾಗದೇ ಪ್ರತಿಯೊಂದು ಕ್ಷೇತ್ರಗಳಲ್ಲಿಯು ಉತ್ತಮ ಸಾಧಕರಾಗಿ ಹೊರಹೊಮ್ಮಿ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ್ ಮಾತನಾಡಿ ಹಣಕ್ಕಿಂತ ಮಾನವೀಯ ಸಂಬಂಧಗಳ ಜರೂರು ಸಮಾಜಕ್ಕಿದೆ. ಅಂತಹ ಅನಿರ್ವಾಯತೆಗಳಿಂದ ಸಮಾಜವನ್ನು ಹೊರತರಲು ಮಹಿಳೆಯಿಂದ ಮಾತ್ರ ಸಾಧ್ಯ. ದಶಕಗಳ ಹಿಂದೆ ಇದ್ದ ಮಹಿಳೆಯ ಪರಿಸ್ಥಿತಿ ಬದಲಾಯಿಸಿದೆ. ಅಂತಹ ಸುಧಾರಣೆ ಸಾಧ್ಯವಾಗಿದ್ದು ಶಿಕ್ಷಣದಿಂದ. ಹಿಂದೆ ಶಿಕ್ಷಣ ಉಳ್ಳವರ ಹಕ್ಕಾಗಿತ್ತು, ಅದರೇ ಇಂದು ಕೈಗೆಟುಕುವ ಸೌಲಭ್ಯವಾಗಿದೆ. ಅಂತಹ ಶೈಕ್ಷಣಿಕ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ನಾವೆಲ್ಲ ಬಳಸಿಕೊಳ್ಳುವ ಮೂಲಕ ಜಾಗೃತ ಸಮಾಜವನ್ನು ನಿರ್ಮಾಣ ಮಾಡೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಬಿ.ರಂಗಪ್ಪ, ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಡಿ.ಹೆಚ್.ರಾಘವೇಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post