ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಜಿಲ್ಲೆಯಲ್ಲಿ ಎಲ್ಲಾ ತಾಲೂಕುಗಳಲ್ಲಿರುವ ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಿಸಿದ ದೇವಸ್ತಾನಗಳ ನಿರ್ವಹಣೆ ಹಾಗೂ ಉಸ್ತುವಾರಿಗಾಗಿ ವ್ಯವಸ್ಥಾಪನಾ ಸಮಿತಿ ರಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಹೇಳಿದರು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಧಾರ್ಮಿಕ ಪರಿಷತ್‌ನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮುಜರಾಯಿ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗೆ ನಿರ್ದೇಶಕರನ್ನು ಆಯ್ಕೆ ಮಾಡುವ ಸಂಬಂಧ ಸೆಪ್ಟಂಬರ್ 15ರಿಂದ ಅಕ್ಟೋಬರ್ 15ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡುವಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.


ಹೊರಡಿಸಲಾಗುವ ಪ್ರಕಟಣೆಯನ್ನು ಗ್ರಾಮ ಪಂಚಾಯಿತಿ, ತಹಶೀಲ್ದಾರರ ಕಚೇರಿ ಹಾಗೂ ಉಪವಿಭಾಗಾಧಿಕಾರಿಗಳ ಕಚೇರಿಯ ಸೂಚನಾ ಫಲಕಗಳಲ್ಲಿ ಪ್ರಕಟಿಸುವಂತೆ ಹಾಗೂ ಸಂಬಂಧಿಸಿದ ಗ್ರಾಮಸ್ಥರಿಗೆ ತಿಳಿಸುವಂತೆ ಸೂಚಿಸಲಾಗಿದೆ. ತಾಲೂಕು ಕೇಂದ್ರಗಳಲ್ಲಿ ಸಕಾಲಿಕವಾಗಿ ಸಭೆಗಳು ನಡೆಯುತ್ತಿಲ್ಲ ಹಾಗೂ ನಿರೀಕ್ಷಿತ ಸಂಖ್ಯೆಯಲ್ಲಿ ಅರ್ಜಿಗಳು ಆಸಕ್ತರಿಂದ ಸಲ್ಲಿಕೆಯಾಗುತ್ತಿಲ್ಲ ಎಂಬ ಬಗ್ಗೆ ಬಂದಿರುವ ದೂರಿನನ್ವಯ ಈ ಕ್ರಮ ವಹಿಸಲಾಗಿದೆ ಎಂದರು.


ಜಿಲ್ಲೆಯ ಮುಜರಾಯಿ ದೇವಸ್ಥಾನಗಳಿಗೆ ಸಂಬಂಧಿಸಿದ ಆಸ್ತಿಪಾಸ್ತಿಗಳು ಅನ್ಯರ ಕೈವಶವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ಬರುತ್ತಿರುವ ದೂರುಗಳನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ವ್ಯವಸ್ಥಾಪನಾ ಸಮಿತಿ ರಚನೆಯಾದ ನಂತರ ಈ ಬಗ್ಗೆ ಕ್ರಮ ವಹಿಸಲಾಗುವುದು. ರಚನೆಯಾಗುವ ವ್ಯವಸ್ಥಾಪನಾ ಸಮಿತಿ ಪದಾಧಿಕಾರಿಗಳು ಜವಾಬ್ದಾರಿಯುತವಾಗಿ ದೇವಸ್ಥಾನಗಳ ಆಸ್ತಿಪಾಸ್ತಿಗಳ ದಾಖಲೆಗಳನ್ನು ನಿರ್ವಹಿಸಲು ಕ್ರಮ ವಹಿಸಬೇಕು. ಅಲ್ಲಿನ ಚರಾಸ್ತಿ ಮತ್ತು ಸ್ಥಿರಾಸ್ತಿಗಳ ಕುರಿತು ದಾಖಲೆಗಳನ್ನು ಹೊಂದಬೇಕು. ದೇವಸ್ಥಾನಗಳ ಭೂಮಿ ಒತ್ತುವರಿ, ದುರ್ಬಳಕೆ ಮುಂತಾದವುಗಳ ಬಗ್ಗೆ ಪ್ರತ್ಯೇಕ ಸಮಿತಿ ರಚಿಸಿ, ಅವರಿಂದ ವರದಿ ಪಡೆದು, ಕ್ರಮಕೈಗೊಳ್ಳಲಾಗುವುದು ಎಂದರು.


ಈ ಎಲ್ಲಾ ಕ್ರಮಗಳು ನಿರಂತರವಾಗಿರುವಂತೆ ನೋಡಿಕೊಳ್ಳಲು ಜಿಲ್ಲಾ ಮಟ್ಟದ ಧಾರ್ಮಿಕ ದತ್ತಿಪರಿಷತ್‌ನ ಸಭೆಯನ್ನು ಪ್ರತಿ ಮಾಹೆ ಕರೆಯಲು ಕ್ರಮ ಕೈಗೊಳ್ಳುವಂತೆ ಹಾಗೂ ಈಗಾಗಲೇ ಆಯ್ಕೆಗೊಂಡು ಸೇವೆ ಸಲ್ಲಿಸುತ್ತಿರುವ ಸದಸ್ಯರಿಗೆ ಗುರುತಿನ ಚೀಟಿ ನೀಡುವಂತೆ ಮುಜರಾಯಿ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಎಫ್.ಹೊನ್ನಳ್ಳಿ ಸೇರಿದಂತೆ ಧಾರ್ಮಿಕ ಪರಿಷತ್ ಸದಸ್ಯರಾದ ಶ್ರೀಮತಿ ಕಿರಣ್ ಪೈ., ಜಿ.ಚಂದ್ರಶೇಖರ್, ವಿಜಯೇಂದ್ರ ಬಿ.ಸುರಕೇರಿ, ರಾಘವೇಂದ್ರಭಟ್, ಮುಜರಾಯಿ ಇಲಾಖೆಯ ವ್ಯವಸ್ಥಾಪಕ ಕಿರಣ್‌ಸಾತಪ್ಪಗೋಳ ಮುಂತಾದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















