ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಈ ನೆಲದ ಭವ್ಯ ಪರಂಪರೆ ಮತ್ತು ಶ್ರೀಮಂತ ಸಂಸ್ಕೃತಿಯ ಪ್ರತೀಕವಾಗಿರುವ, ಕನ್ನಡಿಗರ ಅಸ್ಮಿತತೆಯ ಪ್ರತಿಬಿಂಬವಾಗಿರುವ ಕನ್ನಡ ರಾಜ್ಯೋತ್ಸವವನ್ನು #Kannada Rajyothsava ನ.1ರಂದು ನಾಡಿನ ಎಲ್ಲರೂ ಪಾಲ್ಗೊಂಡು ಸಂಭ್ರಮ-ಸಡಗರಗಳಿಂದ ಅದ್ಧೂರಿಯಾಗಿ ಆಚರಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಅಂದು ಬೆಳಿಗ್ಗೆ 8ಗಂಟೆಗೆ ನಗರದ ಸೈನ್ಸ್ ಮೈದಾನದಿಂದ ಕಲಾ ತಂಡಗಳೊಂದಿಗೆ ಹೊರಡುವ ಭುವನೇಶ್ವರಿಯ ಭವ್ಯ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಅಂತಿಮವಾಗಿ ನೆಹರೂ ಕ್ರೀಡಾಂಗಣದಲ್ಲಿ ಸಂಪನ್ನಗೊಳ್ಳಲಿದೆ ಎಂದರು.
ರಾಜ್ಯೋತ್ಸವ ದಿನದಂದು ನಗರದ ಪ್ರಮುಖ ರಸ್ತೆ, ವರ್ತುಲಗಳು, ಸರ್ಕಾರಿ ಮತ್ತು ಖಾಸಗಿ ಕಚೇರಿ-ಕಟ್ಟಡಗಳಿಗೆ ವಿದ್ಯುತ್ ಅಲಂಕಾರಗೊಳಿಸಿ, ತಳಿರು- ತೋರಣಗಳಿಂದ ಶೃಂಗರಿಸುವ ಮೂಲಕ ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಿದರು.
ನಗರದ ಪ್ರಮುಖ ಬೀದಿಗಳಲ್ಲಿರುವ ಅಂಗಡಿಗಳಿಗೆ ಅಳವಡಿಸಿರುವ ನಾಮಫಲಕ ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಕನ್ನಡದಲ್ಲಿರುವಂತೆ ಸಾರ್ವಜನಿಕರು ಕ್ರಮಕೈಗೊಳ್ಳಬೇಕು. ತಪ್ಪಿದಲ್ಲಿ ಸ್ಥಳೀಯ ಸಂಸ್ಥೆಯಿಂದ ನೀಡಲಾಗಿರುವ ವಾಣಿಜ್ಯ ಪರವಾನಿಗೆಯನ್ನು ನಿರ್ದಾಕ್ಷಿಣ್ಯವಾಗಿ ವಜಾಗೊಳಿಸಲಾಗುವುದು ಎಂದರು.

ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಸ್ಥಳೀಯ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಎಲ್ಲಾ ಮಕ್ಕಳನ್ನು ಅಂದು ಸಕಾಲದಲ್ಲಿ ಹಾಜರಿರುವಂತೆ ನೋಡಿಕೊಳ್ಳಬೇಕು. ಮಕ್ಕಳನ್ನು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಕರೆದುಕೊಂಡು ಹೋಗಿ ಬರಲು ವಾಹನ ವ್ಯವಸ್ಥೆ ಹಾಗೂ ಲಘು ಉಪಹಾರದ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು.
ಅಂದು ಸಂಜೆ ಕುವೆಂಪು ರಂಗಮಂದಿರದಲ್ಲಿ ಸ್ಥಳೀಯ ಶಾಲಾ ವಿದ್ಯಾರ್ಥಿಗಳು ಹಾಗೂ ಪ್ರತಿಭಾವಂತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ ಎಂದರು.

ನಗರದ ಪ್ರಮುಖ ರಸ್ತೆಗಳ ಅಂಗಡಿ ಮುಂಗಟ್ಟುಗಳಿಗೆ ಅಳವಡಿಸಿರುವ ನಾಮಫಲಕಗಳು ಕನ್ನಡದಲ್ಲಿರುವಂತೆ ಜಿಲ್ಲಾಡಳಿತದ ವತಿಯಿಂದ ಸೂಚನೆ ನೀಡಬೇಕು. ರಾಜ್ಯೋತ್ಸವ ಆಚರಿಸುವ ಮಾಸದಲ್ಲಿ ನಗರದ ಪ್ರಮುಖ ವರ್ತುಲಗಳಿಗೆ ವಿದ್ಯುದ್ದೀಪಗಳಿಂದ ಅಲಂಕೃತಗೊಳಿಸಲು ಕ್ರಮ ವಹಿಸಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ವಿ., ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಎ.ಜಿ.ಕಾರಿಯಪ್ಪ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸುಜಾತಾ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು, ಕನ್ನಡಪರ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post