ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೈತ ಸಂಘದ ಸಂಸ್ಥಾಪಕರಾದ ಎನ್.ಡಿ. ಸುಂದರೇಶ್‍ರವರ #N D Sundaresh ನೆನಪಿನ ಸಭೆ ಡಿ.21ರ ಭಾನುವಾರ ಬೆಳಿಗ್ಗೆ 10ಗಂಟೆಗೆ ಆರ್‍ಟಿಓ ಕಛೇರಿ ರಸ್ತೆಯಲ್ಲಿರುವ ಪತ್ರಿಕಾ ಭವನದಲ್ಲಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಹೆಚ್.ಆರ್. ಬಸವರಾಜಪ್ಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕದ ಹಳ್ಳಿ ಹಳ್ಳಿಗಳ ಮೂಲೆ ಮೂಲೆಗೆ ತಿರುಗಾಡಿ 13 ವರ್ಷಗಳ ಕಾಲ ಅವಶ್ರಾಂತವಾಗಿ ದುಡಿದು, ಕೃಷಿ ಕಾರ್ಮಿಕರನ್ನು, ಮಹಿಳೆಯರನ್ನು, ಯುವಕರನ್ನು ಸಂಘಟಿಸಿ ಹೋರಾಟದ ಮೂಲಕ ರೈತರಿಗೆ ನ್ಯಾಯ ಒದಗಿಸಿದ ರೈತನಾಯಕ ಎನ್.ಡಿ. ಸುಂದರೇಶ್‍ರವರ 33ನೇ ನೆನಪಿನ ಸಭೆ ಹಮ್ಮಿಕೊಳ್ಳಲಾಗಿದ್ದು ಅವರ ನೆನಪಿನಲ್ಲಿ ಅವರು ಹಾಕಿಕೊಟ್ಟ ಶಿಸ್ತು, ಪ್ರಾಮಾಣಿಕತೆ ಮತ್ತು ವೈಚಾರಿಕ ವಿಚಾರಗಳ ಮಾರ್ಗದರ್ಶನದಲ್ಲಿ ಸಂಘಟನೆಯನ್ನು ಬಲಪಡಿಸಲು ನಾವೆಲ್ಲರೂ ಪಣತೊಡಬೇಕು ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗಾರಿಕೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಇಡೀ ದೇಶ ಕೃಷಿಯನ್ನೇ ಅವಲಂಭಿಸಿದ್ದರೂ ಕೂಡ ರೈತರಿಂದ ಬಲವಾಗಿ ಭೂಮಿಯನ್ನು ಕಸಿದುಕೊಂಡು ನೂರಾರು ಎಕರೆ ಭೂಮಿಯನ್ನು ಕೇವಲ 1 ರೂ.ಗೆ ಅದಾನಿಯಂತಹ ಕಾರ್ಪೋರೇಟ್ ಕಂಪನಿಗಳಿಗೆ ನೀಡುತ್ತಿದ್ದು, ರೈತರಿಗೆ ಅನ್ಯಾಯ ಮಾಡುತ್ತಿದೆ. ಇದೀಗ ವಿದ್ಯುಚ್ಛಕ್ತಿಯ ಖಾಸಗೀಕರಣದ ತೂಗುಗತ್ತಿಯನ್ನು ಕೂಡ ನಮ್ಮ ತಲೆಯ ಮೇಲೆ ಇಡಲು ಸರ್ಕಾರಗಳು ಹೊರಟಿದ್ದು, ಫ್ರೀಡಂಪಾರ್ಕ್‍ನಲ್ಲಿ ನವೆಂಬರ್ 26ರಂದು ಬೃಹತ್ ಸಭೆನಡೆಸಿ ಮುಖ್ಯಮಂತ್ರಿಗಳ ಜೊತೆ ಮಾತುಕತೆ ಮಾಡಿದ್ದೆವು. ಆದರೂ ಅದು ಫಲಪ್ರದವಾಗಲಿಲ್ಲ ಅದಕ್ಕಾಗಿ ಈ ನೆನಪಿನ ಸಭೆಯ ನಂತರ ರಾಜ್ಯ ಸಮಿತಿಯ ಸಭೆ ಕರೆಯಲಾಗಿದ್ದು ಹಲವಾರು ಒತ್ತಾಯಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಕೇಂದ್ರ ಸರ್ಕಾರ ಅವೈಜ್ಞಾನಿಕವಾಗಿ ಬೆಲೆನಿಗಧಿಮಾಡಿದ್ದು ಭತ್ತಕ್ಕೆ 6000 ಮತ್ತು ಜೋಳಕ್ಕೆ 5100 ಎಂಎಸ್‍ಪಿ ನಿಗಧಿಪಡಿಸಬೇಕು. ಬೆಳೆವಿಮೆ ಮತ್ತು ಹವಮಾನ ಆಧಾರಿತ ವಿಮೆ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು. ಭೂಸಾಗುವಳಿ ಹಕ್ಕುಪತ್ರ ಕೊಟ್ಟ ಖಾತೆದಾರರಿಗೆ ನೋಟೀಸು ನೀಡದೆ ಸಾಗುವಳಿ ಮಾಡಲು ಅನುಕೂಲ ಮಾಡಬೇಕು. ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸಬಾರದು. ಐಪಿಸೆಟ್ ಹೊಂದಿದ ರೈತರಿಗೆ 10 ಗಂಟೆಗೆ ನಿರಂತರ ವಿದ್ಯುತ್ ಕೊಡಬೇಕು. ರೈತರ ಸ್ವಯಂವೆಚ್ಛ ಯೋಜನೆಯನ್ನು ಕೈಬಿಡಬೇಕು ಎಂದರು.
ಅಕ್ರಮ-ಸಕ್ರಮ ಯೋಜನೆಯಡಿ ಹಣ ಕಟ್ಟಿರುವ ರೈತರಿಗೆ ವಿದ್ಯುತ್ ಒದಗಿಸಬೇಕು. ತಕ್ಷಣ ಅತಿವೃಷ್ಟಿ ಹಾನಿ ಪರಿಹಾರ ಹಣವನು ನೀಡಬೇಕು. ಅಡಿಕೆ ರೋಗ ನಿಯಂತ್ರಣಕ್ಕೆ ಕ್ರಮಕೈಗೊಂಡು ತಕ್ಷಣ ಬೆಳೆನಷ್ಟ ರೈತರಿಗೆ ಪರಿಹಾರ ಕೊಡಬೇಕು. ಸ್ವಾಮಿನಾಥನ್ ವರದಿ ಪ್ರಕಾರವೇ ಬೆಲೆಗಳನ್ನು ನಿಗಧಿಮಾಡಬೇಕು. ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ವಾಪಾಸ್ಸು ಪಡೆಯಬೇಕು. ಕೇಂದ್ರ ಸರ್ಕಾರ ತರಲು ಹೊರಟಿರುವ ರಾಷ್ಟ್ರೀಯ ಕೃಷಿನೀತಿಯನ್ನು ತಿರಸ್ಕರಿಸಬೇಕು. ಮೈಕ್ರೋ ಫೈನಾನ್ಸ್ ಹಾವಳಿಯಿಂದ ಜನಸಾಮಾನ್ಯರ ಮುಕ್ತಿ ದೊರಕಬೇಕು. ಜಪ್ತಿ, ಸಾಮಾಜಿಕ ಅವಮಾನ ಮಾಡುವಂತಹ ಕ್ರಿಯೆಗಳ ಮೇಲೆ ಕಠಿಣಕ್ರಮ ಕೈಗೊಂಡು ಎಲ್ಲಾ ಕಿರು ಹಣಕಾಸು ಸಂಸ್ಥೆಗಳನ್ನು ಆರ್‍ಬಿಐ ನಿಯಂತ್ರಣಕ್ಕೆ ತರಬೇಕು. ಕೃಷಿ ಉತ್ಪನ್ನಗಳು ಮಾರುಕಟ್ಟೆಗೆ ತರುವ ಮೂದಲೇ ಖರೀದಿ ಕೇಂದ್ರ ತೆರೆಯಬೇಕು. ಹವಾಮಾನ ಮಾಪಕಗಳನ್ನು ಸರಿಪಡಿಸಬೇಕು. ರೈತರ ಎಲ್ಲಾ ಸಾಲ ಮನ್ನಾಮಾಡಿ ಹೊಸಸಾಲ ನೀಡಲು ಸಿಬಿಲ್‍ಸ್ಕೋರ್ ಪರಿಗಣಿಸಬಾರದು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೆ.ರಾಘವೇಂದ್ರ, ಟಿ.ಎಂ. ಚಂದ್ರಪ್ಪ, ಹಿಟ್ಟೂರುರಾಜು, ಇ.ಬಿ. ಜಗದೀಶ್, ಸಿ.ಬಿ.ಹನುಮಂತಪ್ಪ, ಸಿ.ಚಂದ್ರಪ್ಪ, ಎಂ. ಮಹಾದೇವಪ್ಪ, ಮಂಜಪ್ಪ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















