ಕಲ್ಪ ಮೀಡಿಯಾ ಹೌಸ್
ಮನುಕುಲದ ಜೀವನಾಡಿಯೇ ಅಂತರ್ಜಲ. ಕಾಡೆಂದರೆ ನೀರು, ನೀರೆಂದರೆ ಹಸಿರು, ಹಸಿರೆಂದರೆ ಅನ್ನ, ಅನ್ನವೆಂದರೆ ಪ್ರಾಣ. ಇದು ಜೀವನ ಚಕ್ರ. ಎಲ್ಲಾ ಕಾಲಕ್ಕೂ ನೀರು ಮಾನವನ ಜೀವಾಮೃತ. ಇಂತಹ ಜೀವಸಿಂಧುವಿನ ಬಗೆಗೆ ಅತೀವ ಕಾಳಜಿ ಹೊಂದಿದ್ದ ನಮ್ಮ ಪರಿಸರಾಸಕ್ತ ತಂಡ ಈಗಾಗಲೇ ಶಿವಮೊಗ್ಗೆಯಲ್ಲಿ ಇರುವ ಕೆರೆ ಅಭಿವೃದ್ಧಿಯ ಉನ್ನತೀಕರಣಕ್ಕೆ ಶ್ರಮಿಸುತ್ತಿದ್ದು, ಶಿವಮೊಗ್ಗೆಯ ವಾಜಪೇಯಿ ಬಡಾವಣೆಯ ಒಣ ಭೂಮಿಯನ್ನು ಸೂಡಾದವರು ಪಾರ್ಕ್ ನಿರ್ಮಾಣಕ್ಕೆಂದು ಮೀಸಲಿಟ್ಟ ಜಾಗವನ್ನು ಈಗ ಸಂಪದ್ಭರಿತ ಪುಷ್ಕರಿಣಿಯಾಗಿ ಪರಿವರ್ತನೆ ಮಾಡಿದ್ದಾರೆ.
ವಿವಿಧ ಕ್ಷೇತ್ರದಲ್ಲಿ ಈಗಾಗಲೇ ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿರುವ ಈ ತಂಡದಲ್ಲಿ ಶಿಕ್ಷಣ ತಜ್ಞ ಪ್ರೊ. ಬಿ.ಎಂ. ಕುಮಾರಸ್ವಾಮಿ, ಪ್ರೊ.ಎ.ಎಸ್. ಚಂದ್ರಶೇಖರ್, ಪರಿಸರ ಪ್ರೇಮಿ ಬಾಲಕೃಷ್ಣ ನಾಯ್ಡು, ಉದ್ಯಮಿಗಳಾದ ಪ್ರಕಾಶ್ ಪ್ರಭು, ಭಾಸ್ಕರ್ ಕಾಮತ್, ಜೋಡಿಯಾಕ್ ಪ್ರಕಾಶ್, ವಿಡಿಯೋಗ್ರಾಫರ್ ಮೋಹನ್, ಭಾಸ್ಕರ್ ಕಾಮತ್, ಕಾಟನ್ ಜಗದೀಶ್, ಪರೋಪಕಾರಂ ಶ್ರೀಧರ್‌ರವರು ಸಮಾನ ಮನಸ್ಕರ ತಂಡ ಕಟ್ಟಿ ಜೊತೆಗೂಡಿ ಕಾರ್ಯನಿರತರಾಗಿದ್ದಾರೆ.
ಶಿವಮೊಗ್ಗೆಯ ವಾಜಪೇಯಿ ಬಡಾವಣೆಯಲ್ಲಿರುವ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಸೂಡಾದ ಅಧೀನದಲ್ಲಿರುವ ಸುಮಾರು 6 ಎಕರೆ ವಿಸ್ತೀರ್ಣದಲ್ಲಿರುವ ಈ ಜಾಗದಲ್ಲಿ 2 ಎಕರೆಯಲ್ಲಿ ಈ ಪುಷ್ಕರಣಿ ನಿರ್ಮಾಣಗೊಳ್ಳುತ್ತಿದೆ. ಕಾಮಗಾರಿ ಬಹುತೇಕ ಅಂತಿಮ ಹಂತವನ್ನು ತಲುಪಿದೆ. ಇದು 300 ಮೀಟರ್ ಉದ್ದ, 250 ಮೀಟರ್ ಅಗಲ, 8 ಅಡಿ ಆಳವಿದ್ದು 2 ಕೋಟಿ ಲೀಟರ್ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ.
ಪಶ್ಚಿಮ ಘಟ್ಟದಲ್ಲಿ ಪ್ರಮುಖವಾಗಿ ಬೆಳೆಯುತ್ತಿರುವ ಹಲವು ರೀತಿಯ ಮರಗಳು, 1000ಕ್ಕೂ ಹೆಚ್ಚಿನ ಗಿಡಗಳು, ಈಗಾಗಲೇ ಅಳಿವಿನ ಅಂಚಿನಲ್ಲಿರುವ ಸಸ್ಯ ಪ್ರಭೇಧಗಳನ್ನು ಉಳಿದ 4 ಎಕರೆ ಜಮೀನಿನಲ್ಲಿ ಬೆಳೆಸುವ ಉದ್ದೇಶವಿದೆ. ಸುತ್ತಲೂ ವಾಕಿಂಗ್ ಪಾಥ್ ನಿರ್ಮಾಣ; ಕಲ್ಯಾಣಿಯ ಮಧ್ಯಭಾಗದಲ್ಲಿರುವ ಮಣ್ಣಿನ ಪ್ರದೇಶದಲ್ಲಿ ಒಂದು ಬೃಹತ್ ಆಲದ ಮರ ಹಾಗೂ ಹೊಳೆಲಕ್ಕಿಗಿಡಗಳನ್ನು ನೆಟ್ಟು, ಮಾನವರ ಸಂಪರ್ಕವಿಲ್ಲದ ರೀತಿಯಲ್ಲಿ ಹಣ್ಣು-ನೀರನ್ನು ಬಳಸಿಕೊಂಡು ಪಕ್ಷಿಗಳಿಗೆ ತಂಗುದಾಣವಾಗಿಯೂ ನಿರ್ಮಾಣವಾಗಬೇಕೆಂಬ ಚಿಂತನೆ ಸಾಕಾರಗೊಳ್ಳುತ್ತಿದೆ.
ಸರ್ಕಾರದ ಯಾವುದೇ ನೆರವನ್ನು ಪಡೆಯದೆ, ಇದಕ್ಕಾಗಿ ಶ್ರೀ ಡಿ.ಎಸ್. ಅರುಣ್ ಅವರ ನೇತೃತ್ವದಲ್ಲಿ ವಿವಿಧ ಪೆಟ್ರೋಲ್ ಬಂಕ್ ಮಾಲೀಕರು 700 ಲೀಟರ್ ಡೀಸೆಲನ್ನು ಉಚಿತವಾಗಿ ನೀಡಿದ್ದಾರೆ. ಬಸವಕೇಂದ್ರದ ಶ್ರೀಶ್ರೀ ಬಸವಮರುಳಸಿದ್ಧ ಮಹಾಸ್ವಾಮಿಗಳ, ವಾಣಿಜ್ಯೋದ್ಯಮಿಗಳು, ಮಠಾಧೀಶರು, ಎಲ್ಲಾ ಸ್ಥರದ ವ್ಯಕ್ತಿಗಳು, ಸಾಮಾಜಿಕ ಕಳಕಳಿಯುಳ್ಳ ಆಸಕ್ತರು ತಮ್ಮ ಉದಾರ ದೇಣಿಗೆಯನ್ನು ನೀಡುತ್ತಿದ್ದಾರೆ. ಇದರೊಂದಿಗೆ ಜಿಲ್ಲೆಯ ಶಾಸಕರು ಹಾಗೂ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಶ್ರೀ ಕೆ.ಎಸ್. ಈಶ್ವರಪ್ಪನವರು, ಸೂಡಾದ ಅಧ್ಯಕ್ಷರಾದ ಎಸ್, ಎಸ್, ಜ್ಯೋತಿ ಪ್ರಕಾಶ್, ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್. ರುದ್ರೇಗೌಡರು ಮಾಚೇನಹಳ್ಳಿ ಕೈಗಾರಿಕೋದ್ಯಮಿಗಳು ಸೇರಿದಂತೆ ಹಲವರು ಕೈಜೋಡಿಸಿದ್ದಾರೆ.
ಈ ತಂಡ ಕೇವಲ ಇದೊಂದೇ ಕೆರೆಗೆ ಸೀಮಿತವಾಗದೆ ಸುತ್ತಮುತ್ತಲಿನ ಇನ್ನುಳಿದ ಕೆರೆಗಳ ಅಭಿವೃದ್ಧಿ, ಗಿಡ ನೆಡುವುದು ಹಾಗೂ ಇತರೆ ಪರಿಸರಪರ ಕೆಲಸಗಳಿಗೂ ಇನ್ನಿಲ್ಲದಂತೆ ಮುಂಚೂಣಿಯಲ್ಲಿ ಶ್ರಮಿಸುತ್ತಿದೆ. ಇವರ ಈ ಕೆಲಸವನ್ನು ಕೇವಲ ನೋಡುತ್ತಾ, ಬೆನ್ನು ತಟ್ಟಿ, ನಾಲ್ಕು ಹೊಗಳಿಕೆಯ ಮಾತನಾಡುವ ಬದಲು ಪರಿಸರ ಜಾಗೃತಿಯನ್ನು ನಮ್ಮಲ್ಲೂ ಬೆಳೆಸಿಕೊಂಡು ಸಹಭಾಗಿಗಳಾಗಿ ಇನ್ನಷ್ಟು ಜಲಮೂಲಗಳನ್ನು ಉಳಿಸೋಣ, ಮರಗಿಡಗಳನ್ನು ನೆಟ್ಟು ಸಂರಕ್ಷಿಸೋಣ. ದಿನಕ್ಕೆ ಜವಾಬ್ದಾರಿಯುತರಾಗಿ ಕನಿಷ್ಟ 10 ಗಿಡವನ್ನಾದರೂ ಬೆಳೆಸಿ ನೀರು ಹಾಕೋಣ. ಬಿಡುವು ಮಾಡಿಕೊಂಡು ಹೋಗಿ ವೀಕ್ಷಿಸಿ ನಿಮ್ಮ ಮಕ್ಕಳಿಗೂ ಇದು ಪ್ರೇರಣೆಯಾಗಲಿ. ಮುಂದಿನ ಯೋಚನೆ ಯೋಜನೆಗಳಿಗೆ ಭಾಗಿಯಾಗಲು ಸಂಪರ್ಕಿಸಿ ಬಾಲಕೃಷ್ಣ ನಾಯ್ಡು (94482-56122).
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post