ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಗರದ ಶರಾವತಿ ನರ್ಸಿಂಗ್ ಹೋಂನಲ್ಲಿ ಇನ್ನರ್‌ವೀಲ್ ಕ್ಲಬ್ ಶಿವಮೊಗ್ಗ ಉತ್ತರದ ವತಿಯಿಂದ ಮಾನವೀಯ ಯೋಜನೆಯಾಗಿ ಕೋವಿಡ್ ಹಾಗೂ ಶ್ವಾಸಕೋಶ ರೋಗಿಗಳಿಗೆ ಮನೆಯಲ್ಲಿಯೇ ಆಕ್ಸಿಜನ್ ಸೌಕರ್ಯ ಒದಗಿಸುವ ಇನ್ನರ್ ವೀಲ್ ಆಕ್ಸಿಜನ್ ಸೌಲಭ್ಯವನ್ನು ಇಂದು ಪ್ರಾರಂಭಗೊಳಿಸಲಾಯಿತು.
ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಅವಶ್ಯಕ ದಾಖಲೆಗಳಾದ ವೈದ್ಯರ ಸಲಹಾ ಪತ್ರ, ಕೋವಿಡ್ ವರದಿ, ಆಧಾರ್ ಕಾರ್ಡ್ ಒದಗಿಸಿದಲ್ಲಿ ಕಡಿಮೆ ದರದ ನಿರ್ವಾಹಣಾ ವೆಚ್ಚದೊಂದಿಗೆ ಅವರ ಮನೆಗಳಿಗೆ ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ಒದಗಿಸುವ ಕಾರ್ಯ ನಡೆಯಲಿದೆ.

ಶರಾವತಿ ನರ್ಸಿಂಗ್ ಹೋಂನ ವೈದ್ಯ ಡಾ.ಪಿ. ನಾರಾಯಣ ಮಾತನಾಡಿ, ಕೋವಿಡ್‌ನಿಂದಾಗಿ ಆಕ್ಸಿಜನ್ ಸೇರಿದಂತೆ ಹಲವು ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಮನೆಯಲ್ಲಿಯೇ ಆರೈಕೆ ಮಾಡಿಕೊಳ್ಳಲು ಈ ಯೋಜನೆಯು ಪೂರಕವಾಗಿದೆ. ಕೋವಿಡ್ ನಂತರದ ಕಾಲಘಟ್ಟದಲ್ಲಿಯು ಅಸ್ತಮಾ, ಅಲರ್ಜಿ, ಶ್ವಾಸಕೋಶದಂತಹ ಸಮಸ್ಯೆಯಿಂದ ಬಳಲುವವರಿಗೆ ಆಕ್ಸಿಜನ್ ಕಾನ್ಸಂಟ್ರೇಟರ್‌ಗಳ ಮೂಲಕ ಚಿಕಿತ್ಸೆ ಪಡೆಯಬಹುದಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಆಕ್ಸಿಜನ್ ಕಾನ್ಸಂಟ್ರೇಟರ್ ಹಾಗೂ ಕೋವಿಡ್ ವಿರುದ್ಧ ಹೋರಾಡಲು ಬೇಕಾದ ಎಲ್ಲಾ ಅಗತ್ಯ ಪರಿಕರಗಳನ್ನು ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು ಶಿವಮೊಗ್ಗದ ಹಲವಾರು ಸಹೃದಯಿ ಮನಸ್ಸುಗಳು ಇದಕ್ಕೆ ಕೈ ಜೋಡಿಸಿದ್ದಾರೆ ಎಂದು ವಿವರಿಸಿದರು.

ಇನ್ನರ್‌ವೀಲ್ ಕ್ಲಬ್ 318 ಜಿಲ್ಲಾ ಛೇರ್ಮನ್ ವಾರಿಜಾ ಜಗದೀಶ್ ಮಾತನಾಡಿ, ಕೊರೋನಾ ಸೋಂಕು ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲು ಆಕ್ಸಿಜನ್ ಕಾನ್ಸಂಟೇಟ್ರರ್ ಪ್ರಮುಖ ಅವಶ್ಯಕವಾಗಿದೆ. ಈ ಹಿನ್ನಲೆಯಲ್ಲಿ ನಮ್ಮ ಸಂಸ್ಥೆಯ ಹಲವು ಪದಾಧಿಕಾರಿಗಳು ಅವರ ಕುಟುಂಬ ವರ್ಗದ ನೆರವಿನಿಂದಾಗಿ ಇನ್ನರ್‌ವೀಲ್ ಆಕ್ಸಿಜನ್ ಸೌಲಭ್ಯ ಪ್ರಾರಂಭಿಸಲು ಸಾಧ್ಯವಾಯಿತು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಿ.ಡಿ.ಸಿ ಸುಧಾ ಪ್ರಸಾದ್, ಪಿ.ಡಿ.ಸಿ ಭಾರತಿ ಚಂದ್ರಶೇಖರ್, ಸುಜಾತಾ ಮಂಜುನಾಥ, ಪೂರ್ಣಿಮ ನರೇಂದ್ರ, ಅನುರಾಧ ದತ್ತಾತ್ರಿ, ವೀಣಾ ಸುರೇಶ್, ರೋ.ನರಸಿಂಹ ಪ್ರಸಾದ್, ರೋ.ಸರ್ಜಾ ಜಗದೀಶ್, ರೋ.ದತ್ತಾತ್ರಿ .ಕೆ.ಎನ್ ಸೇರಿದಂತೆ ಶರಾವತಿ ನರ್ಸಿಂಗ್ ಹೋಂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇನ್ನರ್‌ವೀಲ್ ಆಕ್ಸಿಜನ್ ಸೌಲಭ್ಯಕ್ಕಾಗಿ ಶರಾವತಿ ನರ್ಸಿಂಗ್ ಹೋಂ ಸಂಪರ್ಕ ಸಂಖ್ಯೆ: 08182-223560 ಸಂಪರ್ಕಿಸಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















