ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆಡಳಿತಾರೂಢ ಸರ್ಕಾರದ ಮಹತ್ವಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ #Five Guarantee Schemes ಸಮರ್ಪಕ ಅನುಷ್ಠಾನದಿಂದಾಗಿ ರಾಜ್ಯದ ಜನಸಾಮಾನ್ಯರ ನೆಮ್ಮದಿಯ ಬದುಕಿಗೆ ಸಹಕಾರಿಯಾಗಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್ ಬಂಗಾರಪ್ಪ #Minister Madhu Bangarappa ಅವರು ಹೇಳಿದರು.
ಅವರು ಇಂದು ಶಿಕಾರಿಪುರದ ತಾಲೂಕು ಪಂಚಾಯಿತಿ ಎದುರು ಏರ್ಪಡಿಸಿದ್ದ ಗ್ಯಾರಂಟಿ ಯೋಜನೆಗಳ ತಾಲೂಕು ಮಟ್ಟದ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಚುನಾವಣೆ ಪೂರ್ವದಲ್ಲಿ ಘೋಷಿಸಿದಂತೆ ಜನರ ನೆಮ್ಮದಿಯ ಬದುಕಿಗೆ ಸಂಜೀವಿನಿಯಂತಾಗಿರುವ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷನಾಗಿದ್ದೆ ಎಂಬ ಹೆಮ್ಮೆ ನನಗಿರುವುದಾಗಿ ಅವರು ತಿಳಿಸಿದರು.
ಈ ಎಲ್ಲಾ ಗ್ಯಾರೆಂಟಿ ಯೋಜನೆಗಳ ಸೌಲಭ್ಯಗಳು ಅರ್ಹರಾದ ಎಲ್ಲಾ ಪಲಾನುಭವಿಗಳಿಗೆ ಯಾವುದೇ ಮಧ್ಯವರ್ತಿಗಳಿಲ್ಲದೆ ತಲುಪುತ್ತಿರುವುದು ಹರ್ಷವೆನಿಸಿದೆ. ರಾಜ್ಯದ ಪ್ರತಿ ಪಂಚಾಯಿತಿಗೆ ವಾರ್ಷಿಕವಾಗಿ ಸುಮಾರು 9 ಕೋಟಿಗೂ ಅಧಿಕ ಮೊತ್ತ ನೇರವಾಗಿ ತಲುಪುತ್ತಿದೆ. ಈ ಎಲ್ಲಾ ಯೋಜನೆಗಳು ಶೇ. 99ರಷ್ಟು ಯಶಸ್ವಿಯಾಗಿರುವುದು ಪ್ರಸ್ತುತ ಸರ್ಕಾರದ ಹೆಗ್ಗಳಿಕೆ ಎಂದವರು ನುಡಿದರು.
ಈ ಎಲ್ಲಾ ಗ್ಯಾರಂಟಿ ಯೋಜನೆಗಳ ಸೌಲಭ್ಯವನ್ನು ಜಾತ್ಯತೀತವಾಗಿ, ಪಕ್ಷತೀತವಾಗಿ ನೀಡಲಾಗುತ್ತಿದೆ. ಅರ್ಹರಾದ ಯಾರೊಬ್ಬರೂ ಈ ಯೋಜನೆಗಳ ಸೌಲಭ್ಯದಿಂದ ವಂಚಿತರಾಗದಂತೆ ಗಮನಿಸಲಾಗುವುದು ಎಂದವರು ನುಡಿದರು.
Also read: ಸಂಸ್ಥೆಗಳು ಸದೃಢವಾಗಬೇಕಾದರೆ ಸಂಘಟನೆ ಮುಖ್ಯ: ಎಸ್. ರುದ್ರೇಗೌಡ ಅಭಿಪ್ರಾಯ
ಅಂತೆಯೇ ಎರಡು -ಮೂರು ದಶಗಳ ಹಿಂದೆ ಮಾಜಿ ಮುಖ್ಯಮಂತ್ರಿಗಳಾಗಿದ್ದ ಎಸ್ ಬಂಗಾರಪ್ಪರವರು ಜನಸಾಮಾನ್ಯರ ಸಂಕಷ್ಟಗಳನ್ನು ಅರಿತು ಕೃಷಿ ಚಟುವಟಿಕೆಗಳಿಗೆ ಬಳಸುವ ವಿದ್ಯುತ್‌ನ್ನು ಅಂದೆ ಉಚಿತವಾಗಿ ನೀಡಿದ್ದರು. ಅಲ್ಲದೆ ಅಂದು ಜಾರಿಗೆ ತಂದಿದ್ದ ಆಶ್ರಯ, ಆರಾಧನಾ, ಗ್ರಾಮೀಣ ಕೃಪಾಂಕ ಮುಂತಾದ ಜನಪ್ರಿಯ ಯೋಜನೆಗಳು ಇಂದಿಗೂ ಜನಮಾನಸದಲ್ಲಿವೆ. ಆ ಪರಂಪರೆ ಇಂದಿಗೂ ಮುಂದುವರೆದಿದೆ, ಮುಂದೆಯೂ ಮುಂದುವರೆಯಲಿದೆ ಎಂದ ಅವರು ಸರ್ಕಾರದ ಇಂತಹ ಯೋಜನೆಗಳ ಲಾಭ ಪಡೆದ ಸಾರ್ವಜನಿಕರು ಜನಪ್ರತಿನಿಧಿಗಳಿಗೆ ಬೆಂಬಲವಾಗಿ ನಿಲ್ಲಬೇಕು ಮಾತ್ರವಲ್ಲ ಶೇ. 100ರಷ್ಟು ಅಂಕ ನೀಡಿ ಉತ್ತೀರ್ಣಗೊಳಿಸಬೇಕು ಎಂದು ನುಡಿದರು.
ಪ್ರಸಕ್ತ ಸರ್ಕಾರವು ಹಿಂದೆಂದಿಗಿಂತ ಇಂದು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದೆ. ಅದಕ್ಕಾಗಿ ಪ್ರತಿ ವರ್ಷ ಸರ್ಕಾರವು ಶೇ. 38ರಷ್ಟು ಅನುದಾನವನ್ನು ಖರ್ಚು ಮಾಡುತ್ತಿದೆ. ಯಾವುದೇ ಮಗು ಕಲಿಕೆಯಿಂದ ಹಿಂದೆ ಸರಿಯದಂತೆ ಗಮನಿಸಲಾಗುತ್ತಿದೆ. ಅದರ ಭಾಗವಾಗಿ ಅನುತ್ತೀರ್ಣಗೊಂಡ ಮಕ್ಕಳಿಗೆ ಪೂರಕ ಪರೀಕ್ಷೆಗಳನ್ನು ನಡೆಸಿ ಶಿಕ್ಷಣದ ಮುಖ್ಯವಾಹಿನಿಯಲ್ಲಿ ಉಳಿಸಿಕೊಂಡು ಶಿಕ್ಷಣ ನೀಡಲಾಗುತ್ತಿದೆ. ರಾಜ್ಯದ ಸುಮಾರು 57ಲಕ್ಷ ಮಕ್ಕಳಿಗೆ ಪ್ರತಿದಿನ ಬಿಸಿ ಊಟ, ಮೊಟ್ಟೆ, ಬಾಳೆಹಣ್ಣು, ಸೇಂಗಾ ಚಿಕ್ಕಿ, ಪೌಷ್ಠಿಕ ಆಹಾರ, ಹಾಲು, ರಾಗಿ ಮಾಲ್ಟ್ ನೀಡಲಾಗುತ್ತಿದೆ. ಅಲ್ಲದೆ ಸಕಾಲದಲ್ಲಿ ಸಮವಸ್ತ್ರ, ಪಠ್ಯಪುಸ್ತಕ, ಶೂ- ಸಾಕ್ಸ್ ನೀಡಿ ಯಾವುದೇ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದಂತೆ ತರಗತಿಗಳನ್ನು ನಡೆಸಲಾಗುತ್ತಿದೆ ಎಂದರು.
ಈಗಾಗಲೇ ಶಿಕಾರಿಪುರ ತಾಲೂಕಿನ ಈಸೂರು, ಹೊಸೂರು, ಬಗಣಕಟ್ಟೆ ಗ್ರಾಮದ ಸರ್ಕಾರಿ ಶಾಲೆಗಳನ್ನು ಕೆ. ಪಿ. ಎಸ್ ಶಾಲೆಗಳನ್ನಾಗಿ ಪರಿವರ್ತಿಸಿ ಅಗತ್ಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಅಲ್ಲದೆ ಶಿರಾಳಕೊಪ್ಪದ ಒಂದು ಶಾಲೆ ಹಾಗೂ ಶಿಕಾರಿಪುರದ ನಗರದ ಹೃದಯ ಭಾಗದಲ್ಲಿರುವ ಹಾಗೂ ಹೆಚ್ಚಿನ ವಿದ್ಯಾರ್ಥಿಗಳಿರುವ 2 ಶಾಲೆಗಳಿಗೆ ಅಗತ್ಯ ಸೌಲಭ್ಯ ಒದಗಿಸಿ ಕೆಪಿಎಸ್ ಶಾಲೆಗಳನ್ನಾಗಿ ಪರಿವರ್ತಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ರಾಜ್ಯ ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್, ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ನಾಗರಾಜ ಗೌಡ, ಪಾರಿವಾಳದ ಭಂಡಾರಿ, ಮಾಲತೇಶ್, ನಗರದ ಮಹದೇವಪ್ಪ, ಪಾಲಾಕ್ಷಪ್ಪ ಗೌಡ, ತಹಶೀಲ್ದಾರ್ ಮಲ್ಲೇಶಪ್ಪ ಪೂಜಾರ್ ಸೇರಿದಂತೆ ಅನೇಕ ಮುಖಂಡರು ಸಾರ್ವಜನಿಕರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post